ರೋಹಿಂಗ್ಯಾಗಳಿಗೆ ನಾವು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಬೇಕೇ? ಸುಪ್ರೀಂಕೋರ್ಟ್ ಪ್ರಶ್ನೆ | Supreme Court

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Published on
ನವದೆಹಲಿ: ಭಾರತದಲ್ಲಿ ವಾಸಿಸುವ ರೋಹಿಂಗ್ಯಾ ನಿರಾಶ್ರಿತರ ಕಾನೂನುಬದ್ಧ ಸ್ಥಿತಿಯನ್ನು ಸುಪ್ರೀಂಕೋರ್ಟ್(Supreme Court) ಮಂಗಳವಾರ(ಡಿ. 02) ತೀವ್ರವಾಗಿ ಪ್ರಶ್ನಿಸಿದ್ದು, ನಮ್ಮದೇ ದೇಶದಲ್ಲೇ ನಾಗರಿಕರು ಬಡತನದಿಂದ ಬಳಲುತ್ತಿದ್ದಾರೆ. ಅಂತಹದ್ದರಲ್ಲಿ ರೋಹಿಂಗ್ಯಾಗಳಿಗೆ ರೆಡ್ ಕಾರ್ಪಟ್ ಹಾಕಿ ಸ್ವಾಗತ ನೀಡಬೇಕೇ ಎಂದು ಪ್ರಶ್ನಿಸಿದೆ.
ಅಧಿಕಾರಿಗಳ ವಶದಿಂದ ಕೆಲವು ರೋಹಿಂಗ್ಯಾಗಳು ಕಣ್ಮರೆಯಾಗಿದ್ದಾರೆ ಎಂದು ಆರೋಪಿಸಿ ಮಾನವ ಹಕ್ಕುಗಳ ಕಾರ್ಯಕರ್ತೆ ರೀಟಾ ಮಂಚಂದ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ಅ ರ್ಜಿಯನ್ನು ವಿಚಾರಣೆ ನಡೆಸುವಾಗ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾ. ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಖಾರವಾಗಿ ಪ್ರತಿಕ್ರಿಯಿಸಿದೆ. 
ಅಕ್ರಮ ವಲಸಿಗರಿಗೆ ದೇಶವು ರೆಡ್​ ಕಾರ್ಪೆಟ್ ಹಾಸಬೇಕೇ?, ಯಾರಾದರೂ ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದರೆ, ಅವರು ದೇಶದಲ್ಲಿಯೇ ಇರಿಸಿಕೊಳ್ಳಬೇಕಾದ ಬಾಧ್ಯತೆ ರಾಜ್ಯಕ್ಕೆ ಇದೆಯೇ?, ಮೊದಲು ನೀವು ಪ್ರವೇಶಿಸುತ್ತೀರಿ, ಅಕ್ರಮವಾಗಿ ಗಡಿ ದಾಟುತ್ತೀರಿ. ಸುರಂಗವನ್ನು ತೋಡುತ್ತೀರಿ ಅಥವಾ ಬೇಲಿಯನ್ನು ದಾಟುತ್ತೀರಿ. ನಂತರ ಈಗ ನಾನು ಪ್ರವೇಶಿಸಿದ್ದೇನೆ, ನಿಮ್ಮ ಕಾನೂನುಗಳು ನನಗೆ ಅನ್ವಯಿಸಬೇಕು. ನಾನು ಆಹಾರಕ್ಕೆ, ಆಶ್ರಯಕ್ಕೆ ಅರ್ಹನಾಗಿದ್ದೇನೆ, ನನ್ನ ಮಕ್ಕಳು ಶಿಕ್ಷಣಕ್ಕೆ ಅರ್ಹರಾಗಿದ್ದಾರೆ ಎಂದು ಹೇಳುತ್ತೀರಿ. ನಾವು ಕಾನೂನನ್ನು ಈ ರೀತಿ ವಿಸ್ತರಿಸಲು ಬಯಸುತ್ತೇವೆಯೇ? ಎಂದು ಸಿಜೆಐ ಕಿಡಿಕಾರಿದ್ದಾರೆ. 
ನಮ್ಮ ದೇಶದಲ್ಲಿಯೂ ಬಡವರಿದ್ದಾರೆ. ಅವರು ನಾಗರಿಕರು. ಅವರಿಗೆ ಕೆಲವು ಸವಲತ್ತುಗಳು ಮತ್ತು ಸೌಲಭ್ಯಗಳಿಗೆ ಅರ್ಹತೆ ಇಲ್ಲವೇ? ಅವರ ಮೇಲೆ ಏಕೆ ಗಮನಹರಿಸಬಾರದು? ಎಂದು ಹೇಳಿದ್ದಾರೆ. ಆದಾಗ್ಯೂ, ಅಕ್ರಮವಾಗಿ ಪ್ರವೇಶಿಸಿದ ಯಾರನ್ನಾದರೂ ಮೂರನೇ ಹಂತದ ವಿಧಾನಗಳಿಗೆ ಒಳಪಡಿಸಬಾರದು ಎಂದಿದ್ದಾರೆ. 
ಬಳಿಕ ಸುಪ್ರೀಂ ಕೋರ್ಟ್ ಇದೇ ರೀತಿಯ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್ 16 ಕ್ಕೆ ಮುಂದೂಡಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net