5 ಚರಣಗಳನ್ನು 2 ಬಾರಿ ಹಾಡಬೇಕೇ?: ವಂದೇ ಮಾತರಂ ಪ್ರೋಟೋಕಾಲ್ ಕೆದಕಿದ ತರೂರ್; ಸಿಡಿದೆದ್ದ ಕಮಲ ಪಡೆ! Shashi Tharoor on Vande Mataram

5 ಚರಣಗಳನ್ನು 2 ಬಾರಿ ಹಾಡಬೇಕೇ?: ವಂದೇ ಮಾತರಂ ಪ್ರೋಟೋಕಾಲ್ ಕೆದಕಿದ ತರೂರ್; ಸಿಡಿದೆದ್ದ ಕಮಲ ಪಡೆ!
5 ಚರಣಗಳನ್ನು 2 ಬಾರಿ ಹಾಡಬೇಕೇ?: ವಂದೇ ಮಾತರಂ ಪ್ರೋಟೋಕಾಲ್ ಕೆದಕಿದ ತರೂರ್; ಸಿಡಿದೆದ್ದ ಕಮಲ ಪಡೆ!
Published on
ತಿರುವನಂತಪುರಂ: ಭಾರತದ ಹೆಮ್ಮೆಯ ರಾಷ್ಟ್ರೀಯ ಗೀತೆ ವಂದೇ ಮಾತರಂ ಗಾಯನದ ಪ್ರೋಟೋಕಾಲ್ ಕುರಿತು ಕೇರಳದಿಂದ ಆರಂಭವಾದ ಕಿಡಿ ಈಗ ದೇಶಾದ್ಯಂತ ದೊಡ್ಡ ರಾಜಕೀಯ ಯುದ್ಧವಾಗಿ ಮಾರ್ಪಟ್ಟಿದೆ. ಕೇರಳದ ಸರ್ಕಾರಿ ಮತ್ತು ವಿಧಾನಸಭೆಯ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣ ಪ್ರಮಾಣದಲ್ಲಿ ಹಾಡುವ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿರುವ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ಸಂಸದ ಶಶಿ ತರೂರ್(Shashi Tharoor on Vande Mataram) ಈ ವಿವಾದಕ್ಕೆ ಹೊಸದೊಂದು ಆಯಾಮ ನೀಡಿದ್ದಾರೆ.
ಈ ಬಗ್ಗೆ ಮಧ್ಯಮಗಳೊಂದಿಗೆ ಮಾತನಾಡಿರುವ ತರೂರ್​, ಸಣ್ಣ ಅಧಿಕೃತ ಕಾರ್ಯಕ್ರಮಗಳ ಆರಂಭ ಹಾಗೂ ಅಂತ್ಯದಲ್ಲಿ ವಂದೇ ಮಾತರಂನ ಎಲ್ಲಾ ಐದು ಚರಣಗಳನ್ನು ಎರಡು ಬಾರಿ ಹಾಡುವಂತೆ ಜನರ ಮೇಲೆ ಕಡ್ಡಾಯವಾಗಿ ಹೇರುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ್ದಾರೆ.

"ಎಲ್ಲಾ 5 ಚರಣಗಳನ್ನು ಹಾಡುವುದು ಅನಗತ್ಯ ಹೇರಿಕೆ!- ಶಶಿ ತರೂರ್ ವಾಗ್ದಾಳಿ

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಶಶಿ ತರೂರ್, ತಮಗೆ ರಾಷ್ಟ್ರೀಯ ಗೀತೆಯ ಬಗ್ಗೆ ಯಾವುದೇ ಆಕ್ಷೇಪವಿಲ್ಲ, ಆದರೆ ಅದರ ಪೂರ್ಣ ಆವೃತ್ತಿಯನ್ನು ಪ್ರತಿಯೊಂದು ಅಧಿಕೃತ ಕಾರ್ಯಕ್ರಮಗಳಲ್ಲೂ ಕಡ್ಡಾಯಗೊಳಿಸುತ್ತಿರುವ ಸರ್ಕಾರದ ಹೊಸ ನೀತಿಯ ವಿರುದ್ಧ ತಮ್ಮ ವಿರೋಧವಿದೆ ಎಂದಿದ್ದಾರೆ.
ಅಲ್ಲದೆ, ವಂದೇ ಮಾತರಂ ನಮ್ಮ ರಾಷ್ಟ್ರೀಯ ಗೀತೆ. ಅದು ಮೇಳೈಸಿದಾಗ ನಾವೆಲ್ಲರೂ ಗೌರವದಿಂದ ಎದ್ದು ನಿಲ್ಲುತ್ತೇವೆ. ಅದರ ಮೊದಲ ಚರಣ ಅಥವಾ ಮೊದಲ ಎರಡು ಸಾಲುಗಳು ದೇಶದ ಬಹುತೇಕ ಜನರಿಗೆ ಹೃದಯಸ್ಪರ್ಶಿಯಾಗಿ ಕಂಠಪಾಠವಾಗಿವೆ. ಆದರೆ, ದಶಕಗಳಿಂದ ನಡೆದುಬಂದಿರುವ ಸಂಪ್ರದಾಯವೇ ಬೇರೆ ಇತ್ತು. ಕಾರ್ಯಕ್ರಮದ ಆರಂಭದಲ್ಲಿ ವಂದೇ ಮಾತರಂ ಹಾಡಿದರೆ, ಕೊನೆಯಲ್ಲಿ ರಾಷ್ಟ್ರಗೀತೆಯನ್ನು (ಜನ ಗಣ ಮನ) ಪ್ರತ್ಯೇಕವಾಗಿ ಹಾಡಲಾಗುತ್ತಿತ್ತು ಎಂದು ತರೂರ್ ಇತಿಹಾಸವನ್ನು ನೆನಪಿಸಿದ್ದಾರೆ.
ಮುಂದುವರಿದು ಮಾತನಾಡಿದ ಕಾಂಗ್ರೆಸ್​ ಸಂಸದ, ಈಗ ಅವರು ಪ್ರತಿ ಕಾರ್ಯಕ್ರಮದ ಆರಂಭದಲ್ಲೂ ಎಲ್ಲಾ ಐದು ಚರಣಗಳನ್ನು ಹಾಡಬೇಕು ಮತ್ತು ಕಾರ್ಯಕ್ರಮ ಮುಗಿಯುವಾಗಲೂ ಮತ್ತೆ ಅದೇ ಐದು ಚರಣಗಳನ್ನು ಹಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನನ್ನ ಪ್ರಕಾರ ಇದು ಸಂಪೂರ್ಣವಾಗಿ ಅನಗತ್ಯವಾದ ಹೇರಿಕೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರೋಟೋಕಾಲ್‌ನಲ್ಲಿ ಯಾವುದೇ ರಿಯಾಯಿತಿ ಇಲ್ಲ! -ತರೂರ್ ನಿಯಮ ನೆನಪಿಸಿದ ಅಮಿತ್ ಮಾಳವೀಯ

ಶಶಿ ತರೂರ್ ಅವರ ಈ ಹೇಳಿಕೆಗೆ ಭಾರತೀಯ ಜನತಾ ಪಾರ್ಟಿ (BJP) ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಕೇಂದ್ರ ಗೃಹ ಸಚಿವಾಲಯದ (MHA) ಅಧಿಕೃತ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಸಂಸದರ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗಾಯನಕ್ಕೆ ಸಂಬಂಧಿಸಿದ ನಿಯಮಗಳು ಅತ್ಯಂತ ಸ್ಪಷ್ಟವಾಗಿವೆ. ನಿಗದಿಪಡಿಸಿದ ಶಿಷ್ಟಾಚಾರದ ಅನ್ವಯ ಪೂರ್ಣ ಗೀತೆಯನ್ನು ಹಾಡುವುದು ಐಚ್ಛಿಕವಲ್ಲ, ಅದು ಕಡ್ಡಾಯ. ರಾಷ್ಟ್ರೀಯ ಹೆಮ್ಮೆ ಮತ್ತು ಗೌರವದ ವಿಷಯಗಳನ್ನು ರಾಜಕಾರಣಿಗಳು ತಮ್ಮ ವೈಯಕ್ತಿಕ ಅನುಕೂಲಕ್ಕೆ ಅಥವಾ ಇಷ್ಟಾನಿಷ್ಟಗಳಿಗೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಳವೀಯ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಉಪರಾಷ್ಟ್ರಪತಿ ಕಾರ್ಯಕ್ರಮದ ಉದಾಹರಣೆ ನೀಡಿದ ಸಂಸದ; ಕೋರ್ಟ್ ಮೆಟ್ಟಿಲೇರಲಿದೆಯೇ ವಿವಾದ?

ತಮ್ಮ ನಿಲುವನ್ನು ಸಮರ್ಥಿಸಿಕೊಂಡ ತರೂರ್, ಇತ್ತೀಚೆಗೆ ನವದೆಹಲಿಯಲ್ಲಿ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರು ಭಾಗವಹಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಉದಾಹರಣೆಯನ್ನು ನೀಡಿದ್ದಾರೆ. ಆ ಕಿರು ಕಾರ್ಯಕ್ರಮದ ಆರಂಭದಲ್ಲೂ ಪೂರ್ಣ ಗೀತೆಯನ್ನು ಹಾಕಲಾಯಿತು ಮತ್ತು ಅಂತ್ಯದಲ್ಲೂ ಪೂರ್ಣ ಗೀತೆಯನ್ನು ನುಡಿಸಲಾಯಿತು. ಅತ್ಯಂತ ಸುದೀರ್ಘವಾದ ಹಾಗೂ ಜನರಿಗೆ ಅಷ್ಟಾಗಿ ಪರಿಚಿತವಿಲ್ಲದ ಇಡೀ ಗೀತೆಯನ್ನು ಕೇಳುತ್ತಾ ಸಾರ್ವಜನಿಕರು ಎರಡು ಬಾರಿ ಅಷ್ಟೊಂದು ಸಮಯ ಎದ್ದು ನಿಲ್ಲುವುದು ಪ್ರಾಯೋಗಿಕವಾಗಿ ಸಮಸ್ಯೆಯಾಯಿತು. ರಾಷ್ಟ್ರಪತಿ, ಉಪರಾಷ್ಟ್ರಪತಿ ಅಥವಾ ಪ್ರಧಾನಿ ಭಾಗವಹಿಸುವ ದೊಡ್ಡ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಇದನ್ನು ಒಮ್ಮೆ ಹಾಡುವುದನ್ನು ಒಪ್ಪಬಹುದು. ಆದರೆ ಸಾಮಾನ್ಯ ಕಾರ್ಯಕ್ರಮಗಳಲ್ಲೂ ಹೀಗೆ ಮಾಡುವುದರ ಹಿಂದೆ ಯಾವುದೇ ತಾರ್ಕಿಕ ಆಧಾರವಿಲ್ಲ ಎಂದಿದ್ದಾರೆ.
ಈ ವಿವಾದ ದುರದೃಷ್ಟಕರ ಎಂದಿರುವ ತರೂರ್, ಸಂಸತ್ತಿನಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟ ಕಾನೂನು ಪಾಸಾಗದ ಕಾರಣ, ಅಂತಿಮವಾಗಿ ಈ ವಿಷಯವು ನ್ಯಾಯಾಲಯದ ಮೆಟ್ಟಿಲೇರಬೇಕಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವಿರುವ ‘ವಂದೇ ಮಾತರಂ’ ಗೀತೆಯ ಗಾಯನದ ಪ್ರೋಟೋಕಾಲ್ ಸುತ್ತ ಆರಂಭವಾಗಿರುವ ಈ ಹಗ್ಗಜಗ್ಗಾಟವು ಮುಂಬರುವ ದಿನಗಳಲ್ಲಿ ಸಂಸತ್ತಿನ ಒಳಗೂ ಮತ್ತು ಹೊರಗೂ ಭೀಕರ ರಾಜಕೀಯ ಆಂದೋಲನಕ್ಕೆ ನಾಂದಿ ಹಾಡುವ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net