ಪಶ್ಚಿಮ ಬಂಗಾಳದಲ್ಲಿ ಮಹಾರಾಷ್ಟ್ರ ಮಾಡೆಲ್ ಬಂಡಾಯ!..ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬರುತ್ತಾ ಅಸಲಿ ಟಿಎಂಸಿ..? | TMC Crisis

TMC Crisis | ಪಶ್ಚಿಮ ಬಂಗಾಳದಲ್ಲಿ ಮಹಾರಾಷ್ಟ್ರ ಮಾಡೆಲ್ ಬಂಡಾಯ!
TMC Crisis | ಪಶ್ಚಿಮ ಬಂಗಾಳದಲ್ಲಿ ಮಹಾರಾಷ್ಟ್ರ ಮಾಡೆಲ್ ಬಂಡಾಯ!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಹೀನಾಯ ಹಿನ್ನಡೆ ಹಾಗೂ ಆಂತರಿಕ ಕಚ್ಚಾಟಗಳ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಪಕ್ಷದಿಂದ ಉಚ್ಛಾಟನೆಗೊಂಡಿರುವ ಶಾಸಕರು ತೆರೆಮರೆಯಲ್ಲಿ ಟಿಎಂಸಿಯನ್ನು ವಿಭಜಿಸುವ ಮುನ್ಸೂಚನೆ ನೀಡುತ್ತಿದ್ದು, ರಹಸ್ಯ ಸಭೆಗಳನ್ನು ನಡೆಸುತ್ತಿರುವುದು ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಮಹಾರಾಷ್ಟ್ರ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲೂ ಬೃಹತ್ ರಾಜಕೀಯ ದಂಗೆಯಾಗಲಿದೆಯೇ...? ಎಂಬ ಚರ್ಚೆಗಳು ಬಂಗಾಳದ ರಾಜಕೀಯ ಪಡಸಾಲೆಯಲ್ಲಿ ಬಲವಾಗಿ ಕೇಳಿಬರುತ್ತಿವೆ. ಇದರೊಂದಿಗೆ, ಮಮತಾ ಬ್ಯಾನರ್ಜಿ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದ ಅತ್ಯಂತ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆಯೇ..? ಮತ್ತು ಟಿಎಂಸಿಯ ಬಂಡಾಯ ಶಾಸಕರ ಗುಂಪೊಂದು ಪ್ರತ್ಯೇಕ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತರಲಿದೆಯೇ..? ಎಂಬ ಯಕ್ಷಪ್ರಶ್ನೆಗಳು ಎಲ್ಲೆಡೆ ಹರಿದಾಡುತ್ತಿವೆ.
ಸದ್ಯದ ಪರಿಸ್ಥಿತಿಯಲ್ಲಿ ಅಧಿಕೃತವಾಗಿ ಪಕ್ಷ ವಿಭಜನೆಯ ಯಾವ ಘೋಷಣೆಗಳು ಹೊರಬಿದ್ದಿಲ್ಲವಾದರೂ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸರಣಿ ಬೆಳವಣಿಗೆಗಳು ಪಕ್ಷದೊಳಗಿನ ತೀವ್ರ ಅಸಮಾಧಾನ ಮತ್ತು ಬಂಡಾಯದ ತೀವ್ರತೆಯನ್ನು ಸ್ಪಷ್ಟಪಡಿಸುತ್ತಿವೆ.

ಶಾಸಕರ ಭವನದಲ್ಲಿ ರಹಸ್ಯ ಸಭೆಗಳು

ಉಚ್ಛಾಟನೆಗೊಂಡಿರುವ ಮತ್ತು ಅತೃಪ್ತರಾಗಿರುವ ಹಲವು ನಾಯಕರು ಕಳೆದ ಕೆಲವು ವಾರಗಳಿಂದ ಕೋಲ್ಕತ್ತಾದ ಶಾಸಕರ ವಸತಿಗೃಹದಲ್ಲಿ (MLA Hostel) ಗೌಪ್ಯ ಸಭೆಗಳನ್ನು ನಡೆಸುತ್ತಿದ್ದು, ಈ ಸಭೆಗಳಲ್ಲಿ ತೃಣಮೂಲ ಕಾಂಗ್ರೆಸ್‌ನ ಭವಿಷ್ಯದ ಹಾದಿ, ಸಾಂಸ್ಥಿಕ ಮಟ್ಟದಲ್ಲಿ ತರಬೇಕಾದ ಸುಧಾರಣೆಗಳು ಹಾಗೂ ಹೊಸದೊಂದು ಪರ್ಯಾಯ ರಾಜಕೀಯ ವೇದಿಕೆಯನ್ನು ಸಿದ್ಧಪಡಿಸುವ ಕುರಿತು ಗಂಭೀರ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಇದೇ ವೇಳೆ, ಅಸಮಾಧಾನಿತ ನಾಯಕರು ಅಸಲಿ ತೃಣಮೂಲ (ನಿಜವಾದ ತೃಣಮೂಲ) ಎಂಬ ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷವೊಂದನ್ನು ಉದಯವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಇನ್ನು ಯಾವುದೇ ಅಧಿಕೃತ ಘೋಷಣೆಗಳು ಹೊರಬೀಳದಿದ್ದರೂ, ಅಸಮಾಧಾನಿತ ಶಾಸಕರನ್ನು ಒಟ್ಟುಗೂಡಿಸುವ ಮತ್ತು ಸಂಘಟಿಸುವ ಕೆಲಸಗಳು ಬಿರುಸಿನಿಂದ ಸಾಗಿವೆ. ಸುಮಾರು 15 ರಿಂದ 20 ಟಿಎಂಸಿ ಶಾಸಕರು ಈ ಅತೃಪ್ತ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಿರಿಯ ನಾಯಕರ ಮೇಲೆಯೇ ಒತ್ತಡ ಹೇರಲು ತಂತ್ರ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬಂಡಾಯದ ಎದ್ದಿರುವ ಉಚ್ಛಾಟಿತ ಶಾಸಕರು ಯಾರು..?

ಪಕ್ಷ ವಿರೋಧಿ ಚಟುವಟಿಕೆಗಳ ಗಂಭೀರ ಆರೋಪದ ಮೇಲೆ ಟಿಎಂಸಿ ತನ್ನ ಇಬ್ಬರು ಪ್ರಮುಖ ಶಾಸಕರಾದ ರಿತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾರನ್ನು ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೇ ಈ ರಾಜಕೀಯ ಹೈಡ್ರಾಮಾ ಮತ್ತಷ್ಟು ಕಾವೇರಿದೆ.
ವಿರೋಧ ಪಕ್ಷದ ನಾಯಕರಿಗೆ ಸಂಬಂಧಿಸಿದ ಪ್ರಸ್ತಾಪವೊಂದರ ಕುರಿತು ಹಾಗೂ ಅದಕ್ಕಾಗಿ ಸಹಿ ಸಂಗ್ರಹಿಸಿದ ಪ್ರಕ್ರಿಯೆಯ ಬಗ್ಗೆ ಈ ಇಬ್ಬರು ಶಾಸಕರು ಬಹಿರಂಗವಾಗಿಯೇ ಪ್ರಶ್ನೆ ಎತ್ತಿದ್ದರು ಎನ್ನಲಾಗಿದೆ. ಇದಾದ ಬಳಿಕ, ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರಮುಖ ಸಭೆಗೆ ಅಧಿಕೃತ ಆಹ್ವಾನವಿದ್ದರೂ ಇವರಿಬ್ಬರೂ ಗೈರುಹಾಜರಾಗಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಅವರನ್ನು ಪಕ್ಷದಿಂದ ಹೊರಹಾಕಲಾಗಿದ್ದು, ಇದು ಟಿಎಂಸಿಯೊಳಗಿನ ಬಿರುಕನ್ನು ಮತ್ತಷ್ಟು ವ್ಯಾಪಿಸುವಂತೆ ಮಾಡಿದೆ.

ಮಮತಾ ಬ್ಯಾನರ್ಜಿಗೂ ಉದ್ಧವ್ ಠಾಕ್ರೆ ಪರಿಸ್ಥಿತಿ..?

ಪ್ರಸ್ತುತ ಬಂಗಾಳದ ವಿದ್ಯಮಾನಗಳನ್ನು ಗಮನಿಸುತ್ತಿರುವ ರಾಜಕೀಯ ವಿಶ್ಲೇಷಕರು, ಇದನ್ನು ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿಗೆ ಹೋಲಿಸುತ್ತಿದ್ದಾರೆ. ಏಕನಾಥ್ ಶಿಂದೆ ಶಿವಸೇನೆಯ ವಿರುದ್ಧವೇ ಬಂಡಾಯವೆದ್ದು, ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಮತ್ತು ಪಕ್ಷವನ್ನು ಇಬ್ಬಾಗ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೆಲವು ವರದಿಗಳ ಪ್ರಕಾರ, ರಿತಬ್ರತ ಬ್ಯಾನರ್ಜಿ ಟಿಎಂಸಿಯ ಶಾಸಕರ ಗುಂಪಿನ ಬೆಂಬಲವನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆಯಾದರೂ, ಮಹಾರಾಷ್ಟ್ರದ ಮಾದರಿಯಲ್ಲೇ ಬೃಹತ್ ಮಟ್ಟದ ದಂಗೆ ಏಳಲು ಸದ್ಯಕ್ಕೆ ಯಾವುದೇ ಬಹಿರಂಗ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೆ, ರಿತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಕಳೆದ ಕೆಲವು ವಾರಗಳಿಂದ ಪಕ್ಷದ ಯಾವುದೇ ಸಭೆಗಳಲ್ಲಿ ಭಾಗವಹಿಸದೆ ದೂರ ಉಳಿದಿರುವುದು, ನಾಯಕತ್ವದ ವಿರುದ್ಧ ನೇರ ಹಣಾಹಣಿಗೆ ಸಂಪೂರ್ಣವಾಗಿ ಸಜ್ಜಾಗುತ್ತಿರುವುದನ್ನು ಪುಷ್ಟೀಕರಿಸುತ್ತಿದೆ.
ಚುನಾವಣಾ ಸೋಲಿನ ಆಘಾತದಿಂದ ಚೇತರಿಸಿಕೊಂಡು ಮತ್ತೆ ಪುಟೇಳಲು ಪ್ರಯತ್ನಿಸುತ್ತಿರುವ ತೃಣಮೂಲ ಕಾಂಗ್ರೆಸ್‌ಗೆ ಈ ಆಂತರಿಕ ಸಂಘರ್ಷ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಭಿನ್ನಮತೀಯರ ವಿರುದ್ಧ ಪಕ್ಷದ ಹೈಕಮಾಂಡ್ ತಕ್ಷಣದ ಶಿಸ್ತುಕ್ರಮ ಕೈಗೊಂಡಿದ್ದರೂ, ಈ ಅಸಮಾಧಾನದ ಕಿಡಿ ಕೇವಲ ಕೆಲವು ನಾಯಕರಿಗಷ್ಟೇ ಸೀಮಿತವಾಗುತ್ತದೆಯೇ ಅಥವಾ ಮಮತಾ ಬ್ಯಾನರ್ಜಿ ನಾಯಕತ್ವಕ್ಕೆ ಸವಾಲಾಗಿ ಪರಿಣಮಿಸಲಿದೆಯೇ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net