ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಅವರದೇ ಪಕ್ಷದ ಬಂಡಾಯ ನಾಯಕರು ಬಿಗ್ ಶಾಕ್ ನೀಡಿದ್ದಾರೆ. ಉಲುಬೇರಿಯಾ ಪುರ್ಬಾ ಕ್ಷೇತ್ರದ ಶಾಸಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಅಸಲಿ ಟಿಎಂಸಿ(TMC Split) ಬಣವು ಭಾನುವಾರ ಮಹತ್ವದ ಸಭೆ ನಡೆಸಿ, ಪಕ್ಷದ ಸಂಸ್ಥಾಪಕಿ ಮಮತಾ ಅವರನ್ನು ಅಧ್ಯಕ್ಷ ಸ್ಥಾನದಿಂದಲೇ ವಜಾಗೊಳಿಸಿದೆ. ಅಷ್ಟೇ ಅಲ್ಲದೆ, ಪಕ್ಷದ ಎರಡನೇ ಅತ್ಯುನ್ನತ ನಾಯಕರಾಗಿದ್ದ ದೀದಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಮಹಾರಾಷ್ಟ್ರ ಮಾದರಿಯ ರಾಜಕೀಯ ದಂಗೆಯೊಂದು ಅಧಿಕೃತವಾಗಿ ಮುನ್ನೆಲೆಗೆ ಬಂದಿದೆ.