ಠಾಕ್ರೆ ಕೋಟೆಗೆ ಲಗ್ಗೆ ಇಟ್ಟ ಶಿಂಧೆ ಪಡೆ; ಉದ್ಧವ್ ಸೇನೆ ಸೀಳಿದ ಏಕನಾಥ್ ಪುತ್ರ: ಕೈಕೊಟ್ಟ 6 ಲೋಕಸಭಾ ಸಂಸದರು! Shrikant Shinde

ಠಾಕ್ರೆ ಕೋಟೆಗೆ ಲಗ್ಗೆ ಇಟ್ಟ ಶಿಂಧೆ ಪಡೆ; ಉದ್ಧವ್ ಸೇನೆ ಸೀಳಿದ ಏಕನಾಥ್ ಪುತ್ರ: ಕೈಕೊಟ್ಟ 6 ಲೋಕಸಭಾ ಸಂಸದರು!
ಠಾಕ್ರೆ ಕೋಟೆಗೆ ಲಗ್ಗೆ ಇಟ್ಟ ಶಿಂಧೆ ಪಡೆ; ಉದ್ಧವ್ ಸೇನೆ ಸೀಳಿದ ಏಕನಾಥ್ ಪುತ್ರ: ಕೈಕೊಟ್ಟ 6 ಲೋಕಸಭಾ ಸಂಸದರು!
Published on
ಮುಂಬೈ: ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ಬೆನ್ನಲ್ಲೇ, ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ (ಶಿಂಧೆ ಬಣ) ವಿಪಕ್ಷವಾದ ಉದ್ಧವ್ ಠಾಕ್ರೆ ಅವರ ಶಿವಸೇನೆ ಒಕ್ಕೂಟಕ್ಕೆ ಚೇತರಿಸಿಕೊಳ್ಳಲಾಗದ ಮತ್ತೊಂದು ಭೀಕರ ಆಘಾತ ನೀಡಿದೆ. ಉದ್ಧವ್ ಬಣದ ಒಟ್ಟು 6 ಜನ ಲೋಕಸಭಾ ಸಂಸದರು ದಿಢೀರನೆ ಬಂಡಾಯ ಎದ್ದು, ಸೋಮವಾರ ಅಧಿಕೃತವಾಗಿ ಡಿಸಿಎಂ ಏಕನಾಥ್ ಶಿಂಧೆ ಅವರ ನೇತೃತ್ವದ ಅಸಲಿ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಉದ್ಧವ್ ಠಾಕ್ರೆ ಅವರಿಗೆ ಆಪರೇಷನ್ ಟೈಗರ್(Shrikant Shinde) ಹೆಸರಿನಲ್ಲಿ ದೊಡ್ಡ ರಾಜಕೀಯ ದ್ರೋಹ ಎದುರಾಗಿದೆ.
2022ರಲ್ಲಿ ಏಕನಾಥ್ ಶಿಂಧೆ ಅವರು 40 ಶಾಸಕರೊಂದಿಗೆ ಬಂಡಾಯ ಎದ್ದು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿದ್ದರು. ಆ ಭೀಕರ ಘಟನೆಯ ನಂತರ ಉದ್ಧವ್ ಠಾಕ್ರೆ ಎದುರಿಸುತ್ತಿರುವ ಅತ್ಯಂತ ದೊಡ್ಡ ಬಂಡಾಯ ಇದಾಗಿದೆ.

ಒಂದು ವರ್ಷದಿಂದ ರಹಸ್ಯವಾಗಿ ನಡೆದಿತ್ತು ಸ್ಕೆಚ್!

ಈ ಮಹಾ ಸೀಳುವಿಕೆ ಹಠಾತ್ತನೆ ನಡೆದಿದ್ದಲ್ಲ. ಮೂಲಗಳ ಪ್ರಕಾರ, 'ಆಪರೇಷನ್ ಟೈಗರ್' ಕಾರ್ಯಾಚರಣೆಯು ಕಳೆದ ಒಂದು ವರ್ಷದಿಂದ ಅತ್ಯಂತ ರಹಸ್ಯವಾಗಿ ನಡೆದಿತ್ತು. ಡಿಸಿಎಂ ಏಕನಾಥ್ ಶಿಂಧೆ ಅವರ ಪುತ್ರ ಹಾಗೂ ಸಂಸದರಾಗಿರುವ ಶ್ರೀಕಾಂತ್ ಶಿಂಧೆ ಅವರೇ ಈ ಇಡೀ ಆಪರೇಷನ್‌ನ ಮುಖ್ಯ ಸೂತ್ರಧಾರ. ಉದ್ಧವ್ ಬಣದಲ್ಲಿದ್ದ ಅತೃಪ್ತ ಸಂಸದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಶ್ರೀಕಾಂತ್, ಮುಂಬೈ ಮತ್ತು ದೆಹಲಿಯ ಹಿರಿಯ ನಾಯಕರ ನಡುವೆ ಸಂವಹನ ಸೇತುವೆಯಾಗಿ ಕೆಲಸ ಮಾಡಿದ್ದರು. ಕಳೆದ ಆರು ತಿಂಗಳಿಂದ ಈ ಪ್ಲಾನ್ ಭಾರಿ ವೇಗ ಪಡೆದುಕೊಂಡಿತ್ತು.

ಉದ್ಧವ್ ಮೀಟಿಂಗ್ ಮಾಡುವ ಮುನ್ನವೇ ಸಹಿ ಹಾಕಿದ್ದ ರೆಬೆಲ್ಸ್!

ರವಿವಾರವಷ್ಟೇ ಉದ್ಧವ್ ಠಾಕ್ರೆ ಅವರು ಮುಂಬೈನಲ್ಲಿ ತಮ್ಮ ಪಕ್ಷದ ಸಂಸದರ ತುರ್ತು ಸಭೆ ಕರೆದಿದ್ದರು. ಆದರೆ, ಆ ಸಭೆಗೂ ಮುನ್ನವೇ ಐದು ಜನ ಬಂಡಾಯ ಸಂಸದರು ಶಿಂಧೆ ಬಣ ಸೇರಲು ಸಹಿ ಹಾಕಿದ್ದರು ಎಂಬ ಶಾಕಿಂಗ್ ಮಾಹಿತಿ ಈಗ ಹೊರಬಂದಿದೆ. ಸಂಸದ ಅಶೋಕ್ ಅಷ್ಟಿಕರ್ ಅವರನ್ನು ಶ್ರೀಕಾಂತ್ ಶಿಂಧೆ ಮೊದಲು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ತದನಂತರ ಉಳಿದ ಸಂಸದರೂ ಸಾಥ್ ನೀಡಿದ್ದಾರೆ.
ಈ ಇಡೀ ಆಪರೇಷನ್ ಎಷ್ಟು ರಹಸ್ಯವಾಗಿತ್ತೆಂದರೆ, ಏಕನಾಥ್ ಶಿಂಧೆ ಮತ್ತು ಮಹಾರಾಷ್ಟ್ರ ಕ್ಯಾಬಿನೆಟ್‌ನ ಇಬ್ಬರು ಸಚಿವರನ್ನು ಹೊರತುಪಡಿಸಿ ಕೇವಲ ನಾಲ್ಕೈದು ಜನರಿಗೆ ಮಾತ್ರ ಈ ಪ್ಲಾನ್ ಗೊತ್ತಿತ್ತು ಎನ್ನಲಾಗಿದೆ.

ದೆಹಲಿಯಲ್ಲಿ ನಡೆದ ಕ್ಲೈಮ್ಯಾಕ್ಸ್; ಖಾಸಗಿ ಜೆಟ್‌ಗಳಲ್ಲಿ ಹಾರಿದ್ದ ಸಂಸದರು!

ಈ ರಾಜಕೀಯ ಹೈಡ್ರಾಮಾದ ಕೊನೆಯ ಹಂತ ಜೂನ್ 16 ರಂದು ದೆಹಲಿಯಲ್ಲಿ ಜರುಗಿತು. ಉದ್ಧವ್ ಬಣದ ಆರು ಜನ ಬಂಡಾಯ ಸಂಸದರು ಬೇರೆ ಬೇರೆ ನಗರಗಳಿಂದ ರಹಸ್ಯವಾಗಿ ಖಾಸಗಿ ಜೆಟ್ ವಿಮಾನಗಳ ಮೂಲಕ ದೆಹಲಿ ತಲುಪಿದ್ದರು. ಅಲ್ಲಿಂದ ಅವರನ್ನು ನೋಯ್ಡಾದ ಐಷಾರಾಮಿ ಹೋಟೆಲ್‌ಗೆ ಕರೆದೊಯ್ದು ಬಿಗಿ ಭದ್ರತೆಯಲ್ಲಿ ಇರಿಸಲಾಗಿತ್ತು.
ಜೂನ್ 17 ರಂದು ಶ್ರೀಕಾಂತ್ ಶಿಂಧೆ ಮತ್ತು ಓಮರಾಜೆ ನಿಂಬಾಳ್ಕರ್ ನೇತೃತ್ವದಲ್ಲಿ ಈ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ತಮಗೆ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ಅನುಮತಿ ನೀಡಬೇಕೆಂದು ಸಹಿ ಮಾಡಿದ ಪತ್ರವನ್ನು ಸಲ್ಲಿಸಿದರು.

ಬಂಡಾಯಕ್ಕೆ ಸಂಸದರು ನೀಡಿದ ಕಾರಣವೇನು?

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಬಾಳಾಸಾಹೇಬ್ ಠಾಕ್ರೆ ಅವರ ಮೂಲ ಹಿಂದುತ್ವ ಸಿದ್ಧಾಂತದಿಂದ ದೂರ ಸರಿದಿದೆ. ಪಕ್ಷದ ಹಿರಿಯ ನಾಯಕರು ಶಿವಸೇನೆಯನ್ನು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಲು ಅಥವಾ ತೀರ ಹತ್ತಿರವಾಗಿಸಲು ಪ್ಲಾನ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಜೊತೆ ಕೈಜೋಡಿಸುವುದು ನಮಗೆ ಇಷ್ಟವಿಲ್ಲ. ಹಾಗಾಗಿ ನಾವು ಅಸಲಿ ಶಿವಸೇನೆಗೆ ಮರಳುತ್ತಿದ್ದೇವೆ ಎಂದು ಬಂಡಾಯ ಸಂಸದರು ಸಮರ್ಥಿಸಿಕೊಂಡಿದ್ದಾರೆ.

ಹೋಗುವವರು ಹೋಗಲಿ, ನಮಗೆ ನಾಳೆ ಇದೆ - ಉದ್ಧವ್ ಠಾಕ್ರೆ ಭಾವನಾತ್ಮಕ ಮಾತು

ಈ ಭಿನ್ನಮತದ ಬೆನ್ನಲ್ಲೇ ಸಂಸದರ ಸಭೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಪಕ್ಷ ಬಿಟ್ಟು ಹೋಗುವವರಿಗೆ ನಾನು ಒಳ್ಳೆಯದನ್ನೇ ಬಯಸುತ್ತೇನೆ. ನಾಲ್ಕು ವರ್ಷಗಳ ಹಿಂದೆ 40 ಜನ ಶಾಸಕರು ಹೋದಾಗಲೂ ನನಗೆ ಗೊತ್ತಿತ್ತು. ಇಂದು ನನ್ನ ಸಮಯ ಸರಿಯಿಲ್ಲದಿರಬಹುದು, ಆದರೆ ನಾಳೆ ಖಂಡಿತ ನಮ್ಮದಾಗಲಿದೆ. ಅಲ್ಲಿಯವರೆಗೆ ನಾವು ತಾಳ್ಮೆಯಿಂದ ಹೋರಾಡಬೇಕಾಗಿದೆ ಎಂದು ಭಾವುಕರಾಗಿ ನುಡಿದಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಷಾ, ಈಗ ಮಹಾರಾಷ್ಟ್ರದಲ್ಲಿ ಯಾವುದೇ ಬಣಗಳಿಲ್ಲ, ಇರುವುದು ಒಂದೇ ಒಂದು ಅಸಲಿ ಶಿವಸೇನೆ, ಅದು ಏಕನಾಥ್ ಶಿಂಧೆ ಅವರದ್ದು ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೇ ಸಂಸದರು ಉದ್ಧವ್ ಕೈಬಿಟ್ಟಿರುವುದು ಠಾಕ್ರೆ ಕುಟುಂಬಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net