

ಮುಂಬೈ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ 'ಬಿಲಾಂಗಿಂಗ್ ಎ ಜರ್ನಿ ಆಫ್ ಲವ್' ಪುಸ್ತಕವನ್ನು ವಿರೋಧಿಸುವ ಭರದಲ್ಲೇ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ನಾಯಕಿಯೊಬ್ಬರು ಪಕ್ಷದ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಫೋಟೋವನ್ನು ಹರಿದಿದ್ದು, ರಾಜಕೀಯ ವಿವಾದವನ್ನು ಹುಟ್ಟು ಹಾಕಿದೆ.
ಬುಧವಾರ(ನ. 18) ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕದ ವಿತರಣೆಯನ್ನು ವಿರೋಧಿಸಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪ್ರತಿಭಟಿಸಿದ್ದು, ಪುಸ್ತಕದಲ್ಲಿ ವೀರ್ ಸಾವರ್ಕರ್ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದೆ. ಪಕ್ಷದ ನಾಯಕಿ ಶೈನಾ ಎನ್ ಸಿ, ಸಂಜಯ್ ನಿರುಪಮ್ ಹಾಗೂ ಆನಂದ್ ದುಬೆ ಸೇರಿದಂತೆ ಶಿವಸೇನೆ ನಾಯಕರು ಸುದ್ದಿಗೋಷ್ಠಿ ನಡೆಸಿ ಪುಸ್ತಕದ ಪುಟಗಳನ್ನು ಹರಿದು ಹಾಕಿದರು.
ಈ ಪುಸ್ತಕವನ್ನು ಹರಿದು ಹಾಕುವ ಭರದಲ್ಲಿ ಶಿವಸೇನಾ ನಾಯಕಿ ಶೈನಾ ಎನ್ ಸಿ ಅವರು, ಬಾಳ್ ಠಾಕ್ರೆ ಅವರಿದ್ದ ಛಾಯಾಚಿತ್ರವೊಂದನ್ನು ಹರಿದುಹಾಕಿದರು. ಸಹೋದ್ಯೋಗಿ ಸಂಜಯ್ ನಿರುಪಮ್ ಅವರು ತಪ್ಪನ್ನು ಗಮನಕ್ಕೆ ತಂದ ನಂತರ, ಶೈನಾ ಎನ್.ಸಿ. ಅವರು ಹರಿದಿದ್ದ ಛಾಯಾಚಿತ್ರವನ್ನು ತರಾತುರಿಯಲ್ಲಿ ಕಾಗದಗಳ ಅಡಿಯಲ್ಲಿ ಮರೆಮಾಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹರಿದ ಚಿತ್ರದಲ್ಲಿ ಬಾಳಾ ಸಾಹೇಬ್ ಠಾಕ್ರೆ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುತ್ತಿರುವುದು ಕಂಡುಬರುತ್ತದೆ. ಅದೇ ಫೋಟೋವನ್ನು ಹರಿದು ಹಾಕಲಾಗಿದೆ.
ಈ ಘಟನೆ ಕುರಿತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಕಾಂಗ್ರೆಸ್, ಶೀವಸೇನಾ ಸ್ಥಾಪಕರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಶೈನಾ ಎನ್ ಸಿ ವಿರುದ್ಧ ವಾಗ್ದಾಳಿ ನಡೆಸಿವೆ. ಬಿಎಂಸಿಯಲ್ಲಿ ಯುಬಿಟಿ ಸೇನಾ ಕಾರ್ಪೊರೇಟರ್‌ಗಳು ಶೈನಾ ಎನ್.ಸಿ. ವಿರುದ್ಧ ಪ್ರತಿಭಟನೆ ನಡೆಸಿದ್ದು, ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದರು.
ಘಟನೆ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್, ಇವೆರಲ್ಲಾ ನಕಲಿ ಸೈನಿಕರು ಎಂದು ಕರೆದಿದ್ದು, ಬಾಳಾಸಾಹೇಬ್ ಅವರನ್ನು ಅವಮಾನಿಸುವವರನ್ನು ಸಾರ್ವಜನಿಕವಾಗಿ ಚಾಟಿಯಿಂದ ಹೊಡೆಯಬೇಕು ಎಂದಿದ್ದಾರೆ.
ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ವರ್ಷಾ ಗಾಯಕ್ವಾಡ್ ಕೂಡ ಎಕ್ಸ್ನಲ್ಲಿ, ಇದು ಕೇವಲ ಛಾಯಾಚಿತ್ರಕ್ಕೆ ಮಾಡಿದ ಅವಮಾನವಲ್ಲ, ಬದಲಾಗಿ ಮಹಾರಾಷ್ಟ್ರದ ಹೆಮ್ಮೆ ಮತ್ತು ಬಾಳಾಸಾಹೇಬರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿರುವ ಲಕ್ಷಾಂತರ ಶಿವಸೈನಿಕರ ಭಾವನೆಗಳಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ.
ಬಾಳಾ ಸಾಹೇಬ್ ಠಾಕ್ರೆ ಅವರ ಫೋಟೋವನ್ನು ಹರಿದಿರುವುದು ವಿವಾದವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಡಿಸಿಎಂ ಏಕನಾಥ್ ಶಿಂಧೆ ಅವರನ್ನು ಶೈನಾ ಎನ್.ಸಿ ಭೇಟಿಯಾಗಿದ್ದಾರೆ. ಬಳಿಕ ಸ್ಪಷ್ಟನೆ ನೀಡಿರುವ ಅವರು, ತಾನು ಹರಿದಿದ್ದು ಬಾಳ್ ಠಾಕ್ರೆ ಅವರ ಚಿತ್ರವನ್ನಲ್ಲ, ಬದಲಾಗಿ ಮಣಿ ಶಂಕರ್ ಅಯ್ಯರ್ ಅವರ ಚಿತ್ರವನ್ನು ಎಂದು ಹೇಳಿದ್ದಾರೆ (ಏಜೆನ್ಸೀಸ್).