ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ವೀರ ಸಾವರ್ಕರ್‌ಗೆ ಅಪಮಾನ ಆರೋಪ! ಬಿಲಾಂಗಿಂಗ್ ಬ್ಯಾನ್​ ಮಾಡುವಂತೆ ಶಿವಸೇನೆ ಆಗ್ರಹ | Ban Belonging book

ಬಿಲಾಂಗಿಂಗ್ ಬ್ಯಾನ್​ ಮಾಡುವಂತೆ ಶಿವಸೇನೆ ಆಗ್ರಹ
ಬಿಲಾಂಗಿಂಗ್ ಬ್ಯಾನ್​ ಮಾಡುವಂತೆ ಶಿವಸೇನೆ ಆಗ್ರಹ
Published on: 

ಮುಂಬೈ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (Belonging: A Journey Of Love) ಬಿಡುಗಡೆಯಾದ ಬೆನ್ನಲ್ಲೇ ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸದೊಂದು ಬಿರುಗಾಳಿ ಎದ್ದಿದೆ. ಈ ಪುಸ್ತಕದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಮತ್ತು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಕುರಿತು ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಆರೋಪಿಸಿರುವ ಏಕನಾಥ್ ಶಿಂಧೆ ನೇತೃತ್ವದ ಬಣ, ಈ ಪುಸ್ತಕವನ್ನು ತಕ್ಷಣವೇ ನಿಷೇಧಿಸಬೇಕು ಎಂದು ಒತ್ತಾಯಿಸಿದೆ.

ಬುಧವಾರ ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿವಸೇನೆ ನಾಯಕರು, ಸೋನಿಯಾ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದೇ ವೇಳೆ, ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಮತ್ತು ವೀರ ಸಾವರ್ಕರ್ ಅವರಿಗೆ ಪುಸ್ತಕದಲ್ಲಿ ಅಪಮಾನ ಮಾಡಲಾಗಿದ್ದರೂ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಒಂದೇ ಒಂದು ಮಾತನ್ನೂ ಆಡದೆ ಮೌನವಾಗಿರುವುದೇಕೆ ಎಂದು ಶಿವಸೇನೆ ನಾಯಕರು ಪ್ರಶ್ನಿಸಿದ್ದಾರೆ.

ಸಾವರ್ಕರ್ ಮತ್ತು ಬಾಳಾಸಾಹೇಬ್ ಅವರಿಗೆ ಮಾಡಿದ ಅವಮಾನವನ್ನು ವಿರೋಧಿಸುವ ಬದಲು, ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್‌ನಿಂದ ಆ ಪುಸ್ತಕವನ್ನು ಸ್ವೀಕರಿಸಿದ್ದಾರೆ ಎಂದು ಶಿಂಧೆ ಬಣದ ನಾಯಕರು ಕಿಡಿಕಾರಿದ್ದಾರೆ.

ಇದು ಪ್ರೀತಿಯ ಪಯಣವಲ್ಲ, ದ್ವೇಷದ ಪಯಣ: ಸಂಜಯ್ ನಿರುಪಮ್

ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಸರ್ಕಾರವು ಈ ವಿವಾದಾತ್ಮಕ ಪುಸ್ತಕವನ್ನು ನಿಷೇಧಿಸಬೇಕು ಎಂದು ಶಿವಸೇನೆ ವಕ್ತಾರ ಸಂಜಯ್ ನಿರುಪಮ್ ಆಗ್ರಹಿಸಿದ್ದಾರೆ. ಸೋನಿಯಾ ಗಾಂಧಿ ಅವರು ತಮ್ಮ ಪುಸ್ತಕದಲ್ಲಿ ಬರೆದಿರುವ ವಿಷಯಗಳು ಪ್ರೀತಿಯ ಪಯಣ ಅಲ್ಲ, ಬದಲಾಗಿ ಅದು ದ್ವೇಷದ ಪಯಣವಾಗಿದೆ. ಇಡೀ ರಾಜ್ಯವೇ ದೇವರಂತೆ ಪೂಜಿಸುವ ಮಹಾನ್ ಕ್ರಾಂತಿಕಾರಿ ಹಾಗೂ ಹೆಮ್ಮೆಯ ಸುಪುತ್ರ ವೀರ ಸಾವರ್ಕರ್ ಅವರ ಬಗ್ಗೆ ಸೋನಿಯಾಗೆ ತುಂಬಾ ದ್ವೇಷವಿದೆ ಎಂದು ನಿರುಪಮ್ ಆರೋಪಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರ ಹೃದಯದಲ್ಲಿ ಹಿಂದೂಗಳ ಬಗ್ಗೆ ದ್ವೇಷವಿದೆ. ಬಾಬರಿ ಮಸೀದಿ ಧ್ವಂಸವಾದಾಗ ತಮ್ಮ ಕಣ್ಣಲ್ಲಿ ನೀರು ಬಂತು ಎಂದು ಅವರು ಇದೇ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಮಸೀದಿ ನಿರ್ಮಿಸಲು ಭಗವಾನ್ ಶ್ರೀರಾಮನ ಮಂದಿರವನ್ನು ಕೆಡವಿದ ಘಟನೆ ಅವರಿಗೆ ಯಾವುದೇ ದುಃಖವನ್ನುಂಟು ಮಾಡುವುದಿಲ್ಲವೇ? ಎಂದು ಖಡಕ್​ ಆಗಿ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಸೇನೆ ಮುಖಂಡರು ‘ಬಿಲಾಂಗಿಂಗ್’ ಪುಸ್ತಕದ ಪುಟಗಳನ್ನು ಹರಿದು ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಪುಸ್ತಕದ ಪ್ರಕಾಶನ ಸಂಸ್ಥೆಯಾದ ಹಾರ್ಪರ್ ಕಾಲಿನ್ಸ್ ತಕ್ಷಣವೇ ಈ ಪುಸ್ತಕದ ಪುಟ ಸಂಖ್ಯೆ 201 ಮತ್ತು 443ರಲ್ಲಿರುವ ವಿವಾದಾತ್ಮಕ ಸಾಲುಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಪುಸ್ತಕದಲ್ಲಿ ಸೋನಿಯಾ ಗಾಂಧಿ ಬರೆದಿದ್ದೇನು?

ತಮ್ಮ ಆತ್ಮಕಥೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವೀರ ಸಾವರ್ಕರ್ ಅವರನ್ನು ಟೀಕಿಸಿರುವ ಸೋನಿಯಾ ಗಾಂಧಿ, ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾಪಣೆ ಪತ್ರಗಳನ್ನು ಬರೆದಿದ್ದರು ಎಂದು ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್‌ನ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರಿಂದ ಹಲ್ಲೆ ಮತ್ತು ಜೈಲುವಾಸವನ್ನು ಅನುಭವಿಸುತ್ತಿದ್ದರೆ, ವಿನಾಯಕ ದಾಮೋದರ ಸಾವರ್ಕರ್ ಅವರಂತಹ ಆರ್‌ಎಸ್‌ಎಸ್‌ನ ಹಿರಿಯ ಸಿದ್ಧಾಂತವಾದಿಗಳು ತಮ್ಮ ವಸಾಹತುಶಾಹಿ ಒಡೆಯರಿಗೆ ಕ್ಷಮಾದಾನದ ಅರ್ಜಿಗಳನ್ನು ಬರೆಯುತ್ತಿದ್ದರು. ಅಲ್ಲದೆ, ಅವರ ಸದಸ್ಯರು ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿದಾರರಾಗಿ ಕೈಜೋಡಿಸಿದ್ದರು ಎಂದು ಸೋನಿಯಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಹಿಂದೂ ರಾಷ್ಟ್ರ ನಿರ್ಮಾಣದ ತನ್ನ ಯೋಜನೆಗೆ ಕಾಂಗ್ರೆಸ್ ಮತ್ತು ಅದರ ಮೌಲ್ಯಗಳು ಪ್ರಮುಖ ಅಡ್ಡಿಯಾಗಿವೆ ಎಂದು ಆರ್‌ಎಸ್‌ಎಸ್ ಯಾವಾಗಲೂ ಭಾವಿಸಿತ್ತು. ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವುದು ಅವರ ಉದ್ದೇಶವಾಗಿತ್ತು. ಅವರ ಪ್ರಮುಖ ಸಿದ್ಧಾಂತವಾದಿಗಳು ತಮ್ಮ ಬರಹ ಮತ್ತು ಭಾಷಣಗಳಲ್ಲಿ ಹಿಟ್ಲರ್ ಹಾಗೂ ಅಲ್ಪಸಂಖ್ಯಾತರ ಕುರಿತಾದ ಆತನ ನೀತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎನ್ನುವುದನ್ನು ಸಹ ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ಉಲ್ಲೇಖಿಸಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ(ಏಜೆನ್ಸೀಸ್).