ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಿದ್ದು, ಈ ಕುರಿತಾದ ಮಾಧ್ಯಮಗಳ ಪ್ರಶ್ನೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ರಾಹುಲ್ ವಿದೇಶಿ ಪಯಣ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೇರಳದಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ತೂರಿ ಬಂದ ಈ ಪ್ರಶ್ನೆಗೆ ಉತ್ತರಿಸಿದ ತರೂರ್, ನಾನು ಟ್ರಾವೆಲ್ ಏಜೆಂಟ್ ಅಲ್ಲ, ಆ ಪ್ರಶ್ನೆಯನ್ನು ನನ್ನನ್ನು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾದರೆ ನಾನು ದೆಹಲಿ ಬಿಟ್ಟು ಈಗ ಇಲ್ಲಿಗೆ ಬಂದಿದ್ದು ಯಾಕೆ..? ಪ್ರತಿಯೊಬ್ಬ ವ್ಯಕ್ತಿಗೂ ಕೆಲವು ಜವಾಬ್ದಾರಿಗಳಿರುತ್ತವೆ. ಹಾಗಾಗಿ ಆ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ರಾಹುಲ್ ಗಾಂಧಿ ನಾಲ್ಕು ದಿನಗಳ ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದು, ಈ ಹಿಂದೆ ವಿದೇಶಿ ಭೇಟಿಗಳನ್ನು ಸದಾ ಪ್ರಶ್ನಿಸುತ್ತಾ ಬಂದಿರುವ ಬಿಜೆಪಿಯಿಂದ ತೀವ್ರ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿಯ ಪ್ರಕಾರ, ದೆಹಲಿ ಪ್ರತಿಭಟನೆಗಳಲ್ಲಿ ಸುಳ್ಳುಗಳನ್ನು ಹೇಳಿ ಸುಸ್ತಾಗಿರುವ ರಾಹುಲ್ ಗಾಂಧಿ ವಿರಾಮಕ್ಕಾಗಿ ರಜೆ ಮೇಲೆ ವಿದೇಶಕ್ಕೆ ತೆರಳಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಅವರು ವಿಯೆಟ್ನಾಂಗೆ ವಿಮಾನದಲ್ಲಿ ತೆರಳುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ರಾಹುಲ್ ಗಾಂಧಿ ವಿದೇಶ ಪ್ರವಾಸದ ಅಜೆಂಡಾ ಏನು? ಎಂದು ಪ್ರಶ್ನಿಸಿದೆ.
ಬಿಜೆಪಿ ನಾಯಕ ಸಂಬಿತ್ ಪಾತ್ರಾ ಅವರು ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಅವರು ಆಡಳಿತ ಬದಲಾವಣೆಗೆ ಸಂಚು ರೂಪಿಸುತ್ತಿದ್ದಾರೆ ಎಂದಿದ್ದು, ಜಾರ್ಜ್ ಸೊರೊಸ್ ಅವರಿಂದ ಪಾಠ ಹೇಳಿಸಿಕೊಳ್ಳಲು ಅವರು ವಿದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋಗಿರುವುದು ಜಾರ್ಜ್ ಸೊರೊಸ್ ಮತ್ತು ಅವರ ಕಂಪನಿಯಿಂದ ಭಾರತವನ್ನು ಹೇಗೆ ನಾಶ ಮಾಡುವುದು, ಸರ್ಕಾರವನ್ನು ಹೇಗೆ ಬದಲಾಯಿಸುವುದು ಎಂದು ಪಾಠ ಕಲಿಯಲು ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಗಂಭೀರ ಆರೋಪ ಮಾಡಿದರು. ಅವರು ಎಷ್ಟೇ ಪ್ರಯತ್ನಿಸಿದರೂ ದೇಶದ ಜನರು ಅವರನ್ನು ಬೆಂಬಲಿಸಲಿಲ್ಲ. ಈಗ ತಮ್ಮ ಅಜೆಂಡಾವನ್ನು ಮುಂದೆ ಹೇಗೆ ಮುಂದುವರಿಸಬೇಕು ಎಂಬುದರ ಬಗ್ಗೆ ಅವರು ಯೋಚಿಸುತ್ತಿದ್ದಾರೆ ಎಂದು ಪಾತ್ರಾ ಕಿಡಿಕಾರಿದರು. ಮತ್ತೊಬ್ಬ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕೂಡ, ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿರುವುದು ವಿಶ್ರಾಂತಿಗಾಗಿ ಅಥವಾ ತಮ್ಮ ಜೊತೆ ಸೇರಿ ಗೊಂದಲ ಸೃಷ್ಟಿಸುವವರನ್ನು ಭೇಟಿಯಾಗಲಿಕ್ಕಾಗಿ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದು, ಅವರಿಗೆ ಸ್ವಂತ ಜವಾಬ್ದಾರಿಗಳಿವೆ ಎಂದಿದ್ದಾರೆ. ಈ ದಿನಗಳಲ್ಲಿ ಬೇರೆ ಯಾರೂ ಹೊರ ದೇಶಗಳಿಗೆ ಪ್ರಯಾಣಿಸುವುದಿಲ್ಲವೇ..? ರಾಹುಲ್ ಗಾಂಧಿ ಒಬ್ಬ ವ್ಯಕ್ತಿ ಮತ್ತು ವಿರೋಧ ಪಕ್ಷದ ನಾಯಕ, ಅವರಿಗೆ ಕರ್ತವ್ಯಗಳಿವೆ. ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ, ಲಂಡನ್‌ನಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ ಮತ್ತು ಅಲ್ಲಿನ ಬುದ್ಧಿಜೀವಿಗಳನ್ನು ಭೇಟಿಯಾಗುತ್ತಾರೆ. ಅವರು ಪತ್ರಿಕಾ ಸಂದರ್ಶನಗಳನ್ನೂ ಮಾಡುತ್ತಾರೆ. ಇದನ್ನು ಪ್ರಧಾನಿ ಮೋದಿ ಮಾಡುವುದಿಲ್ಲ. ಹಾಗಾದರೆ ಬಿಜೆಪಿಗೆ ಇದರ ಬಗ್ಗೆ ಇರುವ ಸಮಸ್ಯೆ ಏನು ಎಂದು ಅವರು ಪ್ರಶ್ನಿಸಿದ್ದಾರೆ(ಏಜೆನ್ಸೀಸ್).