ಪ್ರವಾಸೋದ್ಯಮದ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಅಪ್ರಾಪ್ತೆಯರು ಸೇರಿ 10 ಯುವತಿಯರ ರಕ್ಷಣೆ, 52 ಜನರ ಮೇಲೆ ಎಫ್ಐಆರ್ ದಾಖಲು! Sex Racket Busted in Uttarakhand
ಉತ್ತರಾಖಂಡದ ಜಿಮ್ ಕಾರ್ಬೆಟ್ ರೆಸಾರ್ಟ್‌ನಲ್ಲಿ ಹೈಟೆಕ್ ಸೆಕ್ಸ್ ರಾಕೆಟ್ ಪತ್ತೆ!
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉತ್ತರಾಖಂಡದ ಜಿಮ್ ಕಾರ್ಬೆಟ್ ರೆಸಾರ್ಟ್‌ನಲ್ಲಿ ಹೈಟೆಕ್ ಸೆಕ್ಸ್ ರಾಕೆಟ್ ಪತ್ತೆ!
ಅಪ್ರಾಪ್ತೆಯರು ಸೇರಿ 10 ಯುವತಿಯರ ರಕ್ಷಣೆ
ಮೀರತ್ ಉದ್ಯಮಿ ಸೇರಿ 52 ಜನರ ಮೇಲೆ FIR ದಾಖಲು
ರಾಮನಗರ: ಪ್ರವಾಸೋದ್ಯಮದ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಸುಮಾರು 52 ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಉತ್ತರಾಖಂಡದ ರಾಮನಗರದಲ್ಲಿ (Sex Racket Busted in Uttarakhand) ವರದಿಯಾಗಿದೆ.
ಈ ರಾಮನಗರವು ವಿಶ್ವಪ್ರಸಿದ್ಧ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನಕ್ಕೆ ಹೆಸರುವಾಸಿಯಾಗಿದ್ದು, ಈಗ ಈ ಘಟನೆ ಇಡೀ ರಾಜ್ಯವೇ ತಲೆ ತಗ್ಗಿಸುವ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದು ಹೇಳಲಾಗುತ್ತಿದೆ.
ಮಾಹಿತಿ ಪ್ರಕಾರ, ವಿಶೇಷ ಕಾರ್ಯಾಚರಣೆ ಗುಂಪು ಹಾಗೂ ರಾಮನಗರ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ಈ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಸುಮಾರು 10 ಜನ ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಇದರಲ್ಲಿ ಅಪ್ರಾಪ್ತ ಬಾಲಕಿಯರು ಇದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕಣಕ್ಕೆ ಸಂಬಂಧಿಸಿದಂತೆ ಒಟ್ಟು 52 ಜನರ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.
ಪೊಲೀಸರ ಪ್ರಕಾರ, ಈ ರೆಸಾರ್ಟ್ಗಳಲ್ಲಿ ಲಿಕ್ಕರ್ ಪಾರ್ಟಿ ಆಯೋಜನೆ ಮಾಡಲಾಗುತ್ತಿದೆ. ಅದಕ್ಕಾಗಿ ದೇಶದ ಬೇರೆ ರಾಜ್ಯ ಹಾಗೂ ವಿದೇಶದಿಂದ ಮಹಿಳೆಯರನ್ನು ಕಳ್ಳಸಾಗಾಣೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ.
ಈ ಪಾರ್ಟಿಯನ್ನು ಮೀರಟ್ನ ಉದ್ಯಮಿ ಉಮೇಂದ್ರ ಕುಮಾರ್ ಎಂಬಾತ ಆಯೋಜನೆ ಮಾಡಿದ್ದ ಎಂದು ತಿಳಿದು ಬಂದಿದ್ದು, ಪ್ರತಿ ಮಹಿಳೆಯರಿಗೆ ಹತ್ತು ಸಾವಿರ ರೂಪಾಯಿ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಪಾರ್ಟಿಗೆ ಜುಲೈ 4 ಮತ್ತು 5 ರಂದು ಬುಕ್ಕಿಂಗ್ ಪ್ರಾರಂಭಿಸಲಾಗಿದ್ದು ಎರಡು ದಿನಗಲ್ಲಿ ಸುಮಾರು 2.25 ಲಕ್ಷ ಕಲೆಕ್ಷನ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 52 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಬಂಧಿತರ ಮೇಲೆ ಅಕ್ರಮ ಮಾನವ ಕಳ್ಳಸಾಗಾಣಿಕೆ, ಪೊಕ್ಸೊ ಹಾಗೂ ಅಬಕಾರಿ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರದಂತೆ, ಕಾರ್ಬೆಟ್, ನೈನಿತಾಲ್ ಹಾಗೂ ಭೀಮ್ತಲ್ಗಳಲ್ಲಿ ಸಹ ಇದೇ ರೀತಿಯ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಗುಮಾನಿ ಕೇಳಿಬರುತ್ತಿದ್ದು, ನಿಖರ ಮಾಹಿತಿ ಹಾಗೂ ಸಾಕ್ಷ್ಯ ದೊರೆತ ದಿನವೇ ಅಲ್ಲಿ ಸಹ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, (ಏಜನ್ಸೀಸ್).