

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 17ಕ್ಕೆ ಮುಂದೂಡಿದೆ. ಅಲ್ಲದೆ, ಚುನಾವಣಾ ಆಯೋಗವು ಸಲ್ಲಿಸಿರುವ ಅಫಿಡವಿಟ್‌ಗೆ ಪ್ರತಿಕ್ರಿಯೆ ನೀಡಲು ಅರ್ಜಿದಾರರಿಗೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ 10 ದಿನಗಳ ಕಾಲಾವಕಾಶವನ್ನು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ವಿಚಾರಣೆ ನಡೆಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರ ಇಂಡಿಯಾ ಒಕ್ಕೂಟದ ನಾಯಕರು ಸಲ್ಲಿಸಿರುವ ಅರ್ಜಿಗಳು ಸೇರಿದಂತೆ ಆಯೋಗದ ವಿರುದ್ಧದ ಎಲ್ಲಾ ಅರ್ಜಿಗಳ ಕುರಿತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ದೇಶಾದ್ಯಂತ ನಡೆಸಲಾದ ಎಸ್‌ಐಆರ್ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡು ಚುನಾವಣಾ ಆಯೋಗವು ಸೋಮವಾರವಷ್ಟೇ 248 ಪುಟಗಳ ವಿವರವಾದ ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ಆಯೋಗದ ಮೂವರು ಸದಸ್ಯರು ಒಮ್ಮತದಿಂದಲೇ ಈ ನಿರ್ಧಾರಗಳನ್ನು ಕೈಗೊಂಡಿದ್ದಾರೆ ವಿನಃ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಅಲ್ಲದೆ, ಮತದಾರರ ನೋಂದಣಿಗೆ ಬಳಸುವ ಫಾರ್ಮ್ 6 ಅನ್ನು ತಿರುಚಲಾಗಿದೆ ಎಂಬ ಆರೋಪಗಳನ್ನು ಆಯೋಗ ಸಂಪೂರ್ಣವಾಗಿ ತಳ್ಳಿಹಾಕಿದೆ.
ಈ ಎಲ್ಲಾ ಆರೋಪಗಳು ತಪ್ಪಾದ ಗ್ರಹಿಕೆಯಿಂದ ಕೂಡಿವೆ ಎಂದು ಕರೆದ ಚುನಾವಣಾ ಆಯೋಗ, ಈ ಅರ್ಜಿಗಳನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಸಂವಿಧಾನದ ವಿಧಿ 324 ಹಾಗೂ 2023ರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಶರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆಯ ಸೆಕ್ಷನ್ 18ರ ಅನುಸಾರವಾಗಿ 2025ರ ಜೂನ್ 24, ಅಕ್ಟೋಬರ್ 27 ಮತ್ತು 2026ರ ಮೇ 14ರಂದು ಎಸ್‌ಐಆರ್ ಆದೇಶಗಳನ್ನು ಸರ್ವಾನುಮತದಿಂದ ಹೊರಡಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಆಯೋಗದ ಕಡತಗಳ ಕಾರ್ಯಾಚರಣೆಯ ಬಗ್ಗೆ ವಿವರಿಸಿರುವ ಚುನಾವಣಾ ಆಯೋಗ, ಕಡತವು ಮೊದಲು ಒಬ್ಬ ಚುನಾವಣಾ ಆಯುಕ್ತರಿಗೆ, ನಂತರ ಮತ್ತೊಬ್ಬರಿಗೆ ಮತ್ತು ಅಂತಿಮವಾಗಿ ಸಿಇಸಿಗೆ ಹೋಗುತ್ತದೆ ಎಂದು ತಿಳಿಸಿದೆ. ಅನುಮೋದಿತ ನಿರ್ಧಾರಗಳು ಮೂವರೂ ಸದಸ್ಯರ ಸಹಿಯನ್ನು ಹೊಂದಿರುತ್ತವೆ. ಕಡತದ ಪ್ರಕ್ರಿಯೆಯಲ್ಲಿ ಯಾವುದೇ ಆಯುಕ್ತರು ಎತ್ತುವ ಸಲಹೆ, ಅವಲೋಕನ ಅಥವಾ ಪ್ರಶ್ನೆಯು ಆಯೋಗದ ಅಂತಿಮ ನಿರ್ಧಾರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ತುರ್ತು ಆದೇಶಗಳ ಅಗತ್ಯವಿದ್ದಾಗ ಮತ್ತು ಸದಸ್ಯರು ನೇರವಾಗಿ ಲಭ್ಯವಿಲ್ಲದಿದ್ದಾಗ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅನುಮೋದನೆ ಪಡೆದು ನಂತರ ಕಡತದಲ್ಲಿ ದಾಖಲಿಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.
ಎಸ್‌ಐಆರ್ ಅಭಿಯಾನದ ವಿಷಯದಲ್ಲಿ ಆಯೋಗದ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಆರೋಪಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಆಧಾರದ ಮೇಲೆ ಈ ಅರ್ಜಿಗಳನ್ನು ದಾಖಲಿಸಲಾಗಿತ್ತು. ಈ ವರದಿಯನ್ನು ಆಧರಿಸಿ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಈ ಕುರಿತು ಆಯೋಗಕ್ಕೆ ನೋಟಿಸ್ ನೀಡಿದ್ದ ಸುಪ್ರೀಂ ಕೋರ್ಟ್, ಈಗ ಅರ್ಜಿದಾರರಿಗೆ ಆಯೋಗದ ಅಫಿಡವಿಟ್‌ಗೆ ಉತ್ತರಿಸಲು 10 ದಿನಗಳ ಗಡುವು ನೀಡಿದ್ದು, ನವೆಂಬರ್ 17ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದೆ(ಏಜೆನ್ಸೀಸ್).