Gen Z ಪ್ರಚಾರವೋ ಅಥವಾ ಕಿರುಕುಳವೋ..? ನವೆಂಬರ್ 1ರ ರ‍್ಯಾಲಿ ಕುರಿತು ಯೂತ್​ ಕಾಂಗ್ರೆಸ್ ಪೋಸ್ಟ್‌ನಿಂದ ಭುಗಿಲೆದ್ದ ವಿವಾದ! | Indian Youth Congress

Gen Z ಪ್ರಚಾರವೋ ಅಥವಾ ಕಿರುಕುಳವೋ..? ನವೆಂಬರ್ 1ರ ರ‍್ಯಾಲಿ ಕುರಿತು ಯೂತ್​ ಕಾಂಗ್ರೆಸ್ ಪೋಸ್ಟ್‌ನಿಂದ ಭುಗಿಲೆದ್ದ ವಿವಾದ! | Indian Youth Congress
Published on: 

ನವದೆಹಲಿ: ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ದೆಹಲಿ ಚಲೋ ಪ್ರತಿಭಟನಾ ರಾಲಿಯ ಪ್ರಚಾರಕ್ಕಾಗಿ ಯೂತ್​ ಕಾಂಗ್ರೆಸ್ (Indian Youth Congress) ಬಿಡುಗಡೆ ಮಾಡಿದ್ದ ವಿಡಿಯೋ ಒಂದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರಾತ್ರಿಯ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರನ್ನು ರಹಸ್ಯವಾಗಿ ವಿಡಿಯೋ ಹಾಗೂ ಫೋಟೋ ಸೆರೆಹಿಡಿಯುವ ದೃಶ್ಯಗಳು ಈ ಪ್ರೋಮೋದಲ್ಲಿವೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಯೂತ್ ಕಾಂಗ್ರೆಸ್ ಎಚ್ಚೆತ್ತುಕೊಂಡು ಅದನ್ನು ತನ್ನ ಖಾತೆಯಿಂದ ಡಿಲೀಟ್ ಮಾಡಿದೆ.

ಕೈಂಡಾ ಚಿಕ್ ಥೋ?? ಎಂಬ ಕ್ಯಾಪ್ಶನ್‌ನೊಂದಿಗೆ ಹಂಚಿಕೊಳ್ಳಲಾಗಿದ್ದ ಈ 20 ಸೆಕೆಂಡುಗಳ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ತನ್ನ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿರುವ ಮೂವರು ಮಹಿಳೆಯರನ್ನು ರಹಸ್ಯವಾಗಿ ಚಿತ್ರೀಕರಿಸುವುದು ಮತ್ತು ನಂತರ ತನ್ನ ಫೋನ್‌ನಲ್ಲಿ ಆ ಚಿತ್ರಗಳನ್ನು ಜೂಮ್ ಮಾಡಿ ನೋಡುವುದು ಕಂಡುಬಂದಿತ್ತು. ವಿಡಿಯೋದ ಕೊನೆಯಲ್ಲಿ ಆ ಮಹಿಳೆಯೊಬ್ಬರ ಫೋನ್ ಮೇಲೆ ರಾಮಲೀಲಾ ರ‍್ಯಾಲಿಯ ಪೋಸ್ಟರ್ ಗೋಚರಿಸುವಂತೆ ತೋರಿಸಲಾಗಿತ್ತು. ಮಹಿಳೆಯರ ಒಪ್ಪಿಗೆಯಿಲ್ಲದೆ ರಹಸ್ಯವಾಗಿ ವಿಡಿಯೋ ಮಾಡುವುದನ್ನು ಫ್ಯಾಷನ್ ಅಥವಾ ಟ್ರೆಂಡಿಂಗ್ ಎಂಬಂತೆ ಬಿಂಬಿಸಲಾಗಿದೆ ಎಂದು ನೆಟ್ಟಿಗರು ಮತ್ತು ವಿರೋಧ ಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡವು.

ಯೂತ್ ಕಾಂಗ್ರೆಸ್ ಸ್ಪಷ್ಟನೆ!

ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು, ಈ ರೀತಿಯ ಘಟನೆಗಳನ್ನು ಎಂದಿಗೂ ಪ್ರೋತ್ಸಾಹಿಸಬಾರದು ಎಂದು ತಿಳಿಸಿದರು. ತಾವೇನು ಈ ವಿಡಿಯೋವನ್ನು ನೋಡಿಯೇ ಪೋಸ್ಟ್ ಮಾಡಿಲ್ಲ ಎಂದ ಅವರು, ಸಾಮಾಜಿಕ ಜಾಲತಾಣದ ಕಂಟೆಂಟ್ ಅನ್ನು ಸಂಸ್ಥೆಯ ಐಟಿ ಸೆಲ್ ನಿರ್ವಹಿಸುತ್ತದೆ ಮತ್ತು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಪ್ರತಿಯೊಂದು ವಿಡಿಯೋವನ್ನು ಅನುಮೋದಿಸುವುದು ಸಾಧ್ಯವಿಲ್ಲ ಎಂದರು. ಮುಂದುವರೆದು ಯಾರೋ ಒಬ್ಬರ ಒಪ್ಪಿಗೆಯಿಲ್ಲದೆ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುವುದು ಅಥವಾ ಅವರ ಚಿತ್ರಗಳನ್ನು ತೆಗೆದುಕೊಳ್ಳುವುದು ತಪ್ಪು. ಐಟಿ ಸೆಲ್ ಯಾಕೆ ಅದನ್ನು ಪೋಸ್ಟ್ ಮಾಡಿದೆ ಎಂಬುದನ್ನು ತಿಳಿದುಕೊಳ್ಳುವುದಾಗಿ ಎಂದು ತಿಳಿಸಿದರು.

Also Read
ವ್ಯಾಪಾರ ವಲಯದಲ್ಲಿ ಭೀತಿ ತಂದ ಇಂಡಿಯಾ ಒಕ್ಕೂಟದ ರ‍್ಯಾಲಿ!...ರಾಹುಲ್​ಗೆ ಎರಡನೇ ಪತ್ರ ಬರೆದ ಸಿಟಿಐ...ಏನಿದೆ ಅದರಲ್ಲಿ..? | India Bloc Rally
Gen Z ಪ್ರಚಾರವೋ ಅಥವಾ ಕಿರುಕುಳವೋ..? ನವೆಂಬರ್ 1ರ ರ‍್ಯಾಲಿ ಕುರಿತು ಯೂತ್​ ಕಾಂಗ್ರೆಸ್ ಪೋಸ್ಟ್‌ನಿಂದ ಭುಗಿಲೆದ್ದ ವಿವಾದ! | Indian Youth Congress

ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಲು ಯೂತ್ ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು, ತಾನು ಸಾಮಾನ್ಯವಾಗಿ ಐಟಿ ಸೆಲ್ ಟೀಕೆಗಳಿಗೆ ಉತ್ತರಿಸುವುದಿಲ್ಲ ಎಂದು ಜಾರಿಕೊಂಡಿದೆ. ಈ ವಿವಾದದಿಂದ ವಿಷಯಾಂತರ ಮಾಡಲು, ಬಿಜೆಪಿ ವಿರುದ್ಧ ಅಂಕಿತಾ ಭಂಡಾರಿ ಕೊಲೆ ಪ್ರಕರಣವನ್ನು ಮುನ್ನಲೆಗೆ ತಂದಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚಿಸಲು ಬಯಸುವಿರಾ..? ಅಂಕಿತಾ ಭಂಡಾರಿ ಪ್ರಕರಣದಲ್ಲಿ ವಿವಿಐಪಿ ಆರೋಪಿಯೊಬ್ಬ ಹೇಗೆ ರಾಜ್ಯಪಾಲರಾದರು ಎಂಬುದನ್ನು ವಿವರಿಸಿ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಾ, ಜೆನ್ ಜೀ ಜೊತೆ ಕುಳಿತುಕೊಂಡು ಮಾತನಾಡಿ ಎಂದಿದೆ.

ವಿಡಿಯೋ ಡಿಲೀಟ್ ಮಾಡಲಾಗಿದ್ದರು ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಬೀದಿಗಳಲ್ಲಿ ನಡೆಯುವ ಕಿರುಕುಳ ಅಥವಾ ಸ್ಟಾಕಿಂಗ್ ಹೋಲುವ ದೃಶ್ಯಗಳನ್ನು ರಾಜಕೀಯ ಕಾರ್ಯಕ್ರಮದ ಪ್ರಚಾರಕ್ಕಾಗಿ ಬಳಸಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕ ವಿಷ್ಣುವರ್ಧನ್ ರೆಡ್ಡಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಯೂತ್​ ಕಾಂಗ್ರೆಸ್ ತನ್ನ ದೆಹಲಿ ಚಲೋ ಅಭಿಯಾನದ ಹೆಸರಿನಲ್ಲಿ ಸ್ಟಾಕಿಂಗ್ ಮತ್ತು ಕಿರುಕುಳವನ್ನು ಸಾಮಾನ್ಯಗೊಳಿಸುತ್ತಿದ್ದು, ಕಾಂಗ್ರೆಸ್ ಇಂತಹ ಅಗ್ಗದ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದ್ದಾರೆ. ಇತರ ಸಾಮಾಜಿಕ ಜಾಲತಾಣ ಬಳಕೆದಾರರು ಸಹ, ಹಾಗಾದರೆ ಕಾಂಗ್ರೆಸ್ ಸ್ಟಾಕಿಂಗ್ ಅನ್ನು ಬೆಂಬಲಿಸುತ್ತದೆಯೇ?, ಇಂತಹ ಸ್ಥಳಗಳಿಗೆ ಹೋಗುವವರು ಕಿರುಕುಳ ನೀಡುವವರೇ..? ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net