

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಹಾಗೂ ಚುನಾವಣಾ ಆಯುಕ್ತರ (ಇಸಿ) ನೇಮಕಾತಿಗೆ ಸಂಬಂಧಿಸಿದ 2023ರ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ರವಾನಿಸಬೇಕೇ ಅಥವಾ ಬೇಡವೇ ಎಂಬ ವಿಷಯದಲ್ಲಿ ಸುಪ್ರೀಂ ಕೋರ್ಟ್ (Supreme Court) ಬುಧವಾರ ಭಿನ್ನ ತೀರ್ಪು ನೀಡಿದೆ.
ಈ ನೂತನ ಕಾಯ್ದೆಯು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನಾಯಮೂರ್ತಿಗಳನ್ನು ಹೊರಗಿಟ್ಟಿದೆ. ವಿಸ್ತೃತ ಪೀಠಕ್ಕೆ ರವಾನಿಸುವ ವಿಚಾರದಲ್ಲಿ ಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಪ್ರಕರಣದ ಪರಿಣಾಮಕಾರಿ ಮತ್ತು ಅಧಿಕೃತ ತೀರ್ಪಿಗಾಗಿ ಸೂಕ್ತ ಸಂಖ್ಯಾಬಲದ ಪೀಠವನ್ನು ರಚಿಸಲು ಈ ವಿಷಯವನ್ನು ಆಡಳಿತಾತ್ಮಕವಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಮುಂದೆ ಇಡಲು ಒಪ್ಪಿಕೊಂಡಿದ್ದಾರೆ.
ದ್ವಿ ಸದಸ್ಯ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು, ಈ ಅರ್ಜಿಗಳು ಸಂವಿಧಾನಿಕ ಮಹತ್ವದ ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿದ್ದು, ಇದನ್ನು ಐದು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ರವಾನಿಸಬೇಕು ಎಂಬ ಕೇಂದ್ರ ಸರ್ಕಾರದ ಸಲ್ಲಿಕೆಯನ್ನು ಪುರಸ್ಕರಿಸಲಿಲ್ಲ/ಅಂಗೀಕರಿಸಲಿಲ್ಲ. ಆದರೆ, ಪೀಠದಲ್ಲಿದ್ದ ಮತ್ತೊಬ್ಬ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ನ್ಯಾಯಮೂರ್ತಿ ದತ್ತಾ ಅವರ ಈ ಅಭಿಪ್ರಾಯವನ್ನು ಒಪ್ಪದೆ ಬೇರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವಿಷಯದಲ್ಲಿ ಇಬ್ಬರೂ ನ್ಯಾಯಮೂರ್ತಿಗಳು ಭಿನ್ನ ಅಭಿಪ್ರಾಯ ಹೊಂದಿದ್ದರೂ, ಪ್ರಕರಣವನ್ನು ಸಿಜೆಐ ಮುಂದೆ ಮಂಡಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಸಂವಿಧಾನಿಕ ವಿಷಯಗಳನ್ನು ನಿರ್ಣಯಿಸಲು ಐದು ನ್ಯಾಯಮೂರ್ತಿಗಳ ಖಾಯಂ ಪೀಠವನ್ನು ರಚಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆಯೂ ದ್ವಿಸದಸ್ಯ ಪೀಠ ಸಿಜೆಐ ಅವರಿಗೆ ಮನವಿ ಮಾಡಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕಾಯ್ದೆ, 2023ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿತ್ತು. ಈ ಕಾಯ್ದೆಯು ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುವ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಡುತ್ತದೆ.
2023ರ ಮಾರ್ಚ್ 2 ರಂದು ಐದು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ, ಪ್ರಧಾನಮಂತ್ರಿಗಳು, ಲೋಕಸಭೆಯ ವಿರೋಧ ಪಕ್ಷದ ನಾಯಕರು ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ ಎಂದು ತಿಳಿಸಲಾಗಿತ್ತು. ಆದರೆ, ಆ ತೀರ್ಪಿನ ವ್ಯವಸ್ಥೆಯಿಂದ ಹೊರತಾಗಿ ರೂಪಿಸಲಾದ 2023ರ ನೂತನ ಕಾಯ್ದೆಯ ಸಿಂಧುತ್ವವನ್ನು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ(ಏಜೆನ್ಸೀಸ್).