

BJP State In-Charges: ಮುಂಬರುವ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಟರು, ರಾಜ್ಯ ಬಿಜೆಪಿಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿದ್ದಾರೆ. ರಾಜ್ಯ ಉಸ್ತುವಾರಿಯಾಗಿದ್ದ ಡಾ. ರಾಧಾಮೋಹನ್ ದಾಸ್ ಅಗರವಾಲ್ ಅವರನ್ನು ಹುದ್ದೆಯಿಂದ ಬದಲಾಯಿಸಲಾಗಿದ್ದು, ಅವರ ಜಾಗಕ್ಕೆ ಹರೀಶ್ ದ್ವಿವೇದಿ ಅವರನ್ನು ರಾಜ್ಯದ ನೂತನ ಉಸ್ತುವಾರಿಯಾಗಿ ನೇಮಕಗೊಳಿಸಿ ಪಕ್ಷ ಅಧಿಕೃತ ಆದೇಶ ಹೊರಡಿಸಿದೆ.
ಅಷ್ಟೇ ಅಲ್ಲದೆ, ಸಹ-ಉಸ್ತುವಾರಿ ಹುದ್ದೆಯಲ್ಲೂ ಬದಲಾವಣೆ ತರಲಾಗಿದ್ದು, ಕಸಮ್ ವೆಂಕಟೇಶ್ವರುಲು ಅವರನ್ನು ಕರ್ನಾಟಕದ ನೂತನ ಸಹ-ಉಸ್ತುವಾರಿಯನ್ನಾಗಿ ಪಕ್ಷದ ವರಿಷ್ಠರು ನೇಮಿಸಿದ್ದಾರೆ. ರಾಜ್ಯದಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಲು ಮತ್ತು ಮುಂಬರುವ ಚುನಾವಣಾ ಕಣದಲ್ಲಿ ಗೆಲುವಿನ ತಂತ್ರಜ್ಞಾನ ರೂಪಿಸಲು ಹೈಕಮಾಂಡ್ ಈ ಪ್ರಮುಖ ಹೆಜ್ಜೆ ಇಟ್ಟಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮೇಘಾಲಯದಲ್ಲಿ ಕಮಲದ ಕಲರವ: ಯುಡಿಪಿ ತೊರೆದು ಬಿಜೆಪಿ ಸೇರಿದ ಮಿತ್ರಪಕ್ಷದ 8 ಶಾಸಕರು! | Meghalaya Politics
ರಾಷ್ಟ್ರಮಟ್ಟದಲ್ಲೂ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕವೂ ಸೇರಿದಂತೆ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಗೆ ನೂತನ ಪ್ರಭಾರಿಗಳು ಮತ್ತು ಸಹ-ಪ್ರಭಾರಿಗಳನ್ನು ನೇಮಕ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಈ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಲವು ಹಿರಿಯ ನಾಯಕರಿಗೆ ವಿವಿಧ ರಾಜ್ಯಗಳ ಸಂಘಟನಾತ್ಮಕ ಉಸ್ತುವಾರಿಯನ್ನು ವಹಿಸಿದ್ದಾರೆ.
ಮಾಜಿ ಕೇಂದ್ರ ಸಚಿವೆ ಹಾಗೂ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಅವರಿಗೆ ಛತ್ತೀಸ್‌ಗಢ ಮತ್ತು ಹರಿಯಾಣ ರಾಜ್ಯಗಳ ಪ್ರಭಾರಿ ಜವಾಬ್ದಾರಿಯನ್ನು ನೀಡಲಾಗಿದೆ. ಉತ್ತರ ಪ್ರದೇಶದ ಪ್ರಭಾರಿಯಾಗಿ ವಿನೋದ್ ತಾವ್ಡೆ ಅವರನ್ನು ನೇಮಿಸಲಾಗಿದ್ದು, ಜಗದೀಶ್ ಪಟೇಲ್, ಮೇಧಾ ಕುಲಕರ್ಣಿ, ಪ್ರದೀಪ್ ವರ್ಮಾ ಮತ್ತು ಅನಂತ್ ಓಜಾ ಅವರನ್ನು ಸಹ-ಪ್ರಭಾರಿಗಳನ್ನಾಗಿ ನಿಯೋಜಿಸಲಾಗಿದೆ. ಹಿರಿಯ ನಾಯಕ ರಾಮ್ ಮಾಧವ್ ಅವರಿಗೆ ತಮಿಳುನಾಡು ಮತ್ತು ಉತ್ತರಾಖಂಡ ರಾಜ್ಯಗಳ ಹೊಣೆ ನೀಡಿದ್ದರೆ, ಗುಜರಾತ್‌ಗೆ ತರುಣ್ ಚುಗ್ ಅವರನ್ನು ಪ್ರಭಾರಿಯನ್ನಾಗಿ ನೇಮಿಸಲಾಗಿದೆ.
ಜಮ್ಮು-ಕಾಶ್ಮೀರ ಹಾಗೂ ಪಂಜಾಬ್ ರಾಜ್ಯಗಳ ಉಸ್ತುವಾರಿಯನ್ನು ಸತೀಶ್ ಪೂನಿಯಾ ಅವರಿಗೆ ವಹಿಸಲಾಗಿದ್ದು, ಗೋವಾ ಮತ್ತು ನಾಗಾಲ್ಯಾಂಡ್‌ಗೆ ಅನಿಲ್ ಆಂಟೋನಿ ಅವರನ್ನು ನೇಮಿಸಲಾಗಿದೆ. ಹರೀಶ್ ದ್ವಿವೇದಿ ಅವರಿಗೆ ಕರ್ನಾಟಕವಷ್ಟೆ ಅಲ್ಲದೇ ಹೆಚ್ಚುವರಿಯಾಗಿ ಬಿಹಾರದ ಜವಾಬ್ದಾರಿಯನ್ನು ಸಹ ನೀಡಲಾಗಿದೆ. ರಾಜಸ್ಥಾನಕ್ಕೆ ಸಂಜಯ್ ಭಾಟಿಯಾ (ಕವಿತಾ ಪಟೀದಾರ್ ಹಾಗೂ ಕುಲಜೀತ್ ಚಹಾಲ್ ಸಹ-ಪ್ರಭಾರಿಗಳು), ದೆಹಲಿ ಘಟಕಕ್ಕೆ ವಿನಯ್ ಸಹಸ್ರಬುದ್ಧೆ (ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಹಾಗೂ ದರ್ಶನಾ ಜರ್ದೋಶ್ ಸಹ-ಪ್ರಭಾರಿಗಳು) ಹಾಗೂ ಮಹಾರಾಷ್ಟ್ರಕ್ಕೆ ಪಕ್ಷದ ಉಪಾಧ್ಯಕ್ಷ ಬೈಜಯಂತ್ ಜಯ್ ಪಂಡಾ ಅವರನ್ನು ಪ್ರಭಾರಿಯನ್ನಾಗಿ ನೇಮಿಸಲಾಗಿದ್ದು, ಅಮಿತ್ ಮಾಳವೀಯ, ಸದಾನಂದ ಶೇಟ್ ತಾನಾವಡೆ ಮತ್ತು ಕಮಲ್‌ಜೀತ್ ಸೆಹ್ರಾವತ್ ಅವರು ಸಹ-ಪ್ರಭಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇದಕ್ಕೂ ಮುನ್ನ ಆಗಸ್ಟ್ ತಿಂಗಳಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ನೇತೃತ್ವದಲ್ಲಿ ನಡೆದ ಆಡಳಿತಾತ್ಮಕ ಬದಲಾವಣೆಯಲ್ಲಿ ಅನುಭವಿ ಹಾಗೂ ಹೊಸ ಮುಖಗಳನ್ನೊಳಗೊಂಡ ನೂತನ ಕೇಂದ್ರ ತಂಡವನ್ನು ರಚಿಸಲಾಗಿತ್ತು. ಈ ಪಟ್ಟಿಯಲ್ಲಿ 13 ರಾಷ್ಟ್ರೀಯ ಉಪಾಧ್ಯಕ್ಷರು, 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು 16 ಮೋರ್ಚಾಗಳ ಅಧ್ಯಕ್ಷರು ಸೇರಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಹಿರಿಯ ನಾಯಕ ರಾಮ್ ಮಾಧವ್, ಬೈಜಯಂತ್ ಜಯ್ ಪಂಡಾ, ರೇಖಾ ವರ್ಮಾ ಮತ್ತು ತಾರಿಕ್ ಮನ್ಸೂರ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮುಂದುವರಿಸಲಾಗಿದೆ. ಇದೇ ವೇಳೆ ಸೌದಾನ್ ಸಿಂಗ್, ಸರೋಜ ಪಾಂಡೆ, ಡಿ.ಕೆ. ಅರುಣಾ, ಎಂ. ಚುಬಾ ಆವೊ, ಅಬ್ದುಲ್ಲಾ ಕುಟ್ಟಿ, ಲಕ್ಷ್ಮಿಕಾಂತ್ ಬಾಜಪೇಯಿ ಹಾಗೂ ಲತಾ ಉಸೇಂಡಿ ಅವರನ್ನು ಉಪಾಧ್ಯಕ್ಷರ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.
ಹೊಸದಾಗಿ ತೀರ್ಥ್ ಸಿಂಗ್ ರಾವತ್, ರಾಮ್ ಮಾಧವ್, ಡಿ. ಹಾಗೂ ಪುರಂದೇಶ್ವರಿ, ವರ್ಷಾಬೆನ್ ನರೇಂದ್ರಭಾಯಿ ದೋಶಿ, ಭಾರತಿ ಪ್ರವೀಣ್ ಪವಾರ್, ಮನ್‌ಪ್ರೀತ್ ಸಿಂಗ್ ಬಾದಲ್, ಲಾಲ್ ಸಿಂಗ್ ಆರ್ಯ, ಎಂ. ನಾಗರಾಜ ಮತ್ತು ಮಧುಚಂದ್ರ ಕರ್ ಅವರನ್ನು ನೂತನ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ(ಏಜೆನ್ಸೀಸ್).