ಏಪ್ರಿಲ್-ಮೇ ವೇಳೆಗೆ ಮೋದಿ ಪ್ರಧಾನಿಯಾಗಿ ಮುಂದುವರಿಯಲ್ಲ, ದೇಶದಲ್ಲಿ ದೊಡ್ಡ ರಾಜಕೀಯ ಕ್ರಾಂತಿ: ಸಂಜಯ್ ರಾವುತ್ ಭವಿಷ್ಯ! | Sanjay Raut

 ದೇಶದಲ್ಲಿ ದೊಡ್ಡ ರಾಜಕೀಯ ಕ್ರಾಂತಿ: ಸಂಜಯ್ ರಾವುತ್ ಭವಿಷ್ಯ
ದೇಶದಲ್ಲಿ ದೊಡ್ಡ ರಾಜಕೀಯ ಕ್ರಾಂತಿ: ಸಂಜಯ್ ರಾವುತ್ ಭವಿಷ್ಯ
Published on: 

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡು ಬಣಗಳು ಮತ್ತೆ ಒಂದಾಗಲಿವೆ ಎಂಬ ವದಂತಿಗಳನ್ನು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ (Sanjay Raut) ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್‌ಸಿಪಿ ವಿಲೀನದ ವರದಿಗಳು ಕೇವಲ ಕಾಲ್ಪನಿಕ ಕಥೆ ಎಂದು ಟೀಕಿಸಿದ್ದು, ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಯಾವುದೇ ಕಾರಣಕ್ಕೂ ಅಮಿತ್ ಷಾ ಜೊತೆ ಗುರುತಿಸಿಕೊಂಡಿರುವ ಬಣದೊಂದಿಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಫೋನ್ ಕದ್ದಾಲಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ರಾವುತ್, ಮುಂಬರುವ ಏಪ್ರಿಲ್-ಮೇ ತಿಂಗಳಿನಲ್ಲಿ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಎನ್‌ಸಿಪಿ ವಿಲೀನದ ವದಂತಿಗೆ ರಾವುತ್ ತೆರೆ

ಮಹಾರಾಷ್ಟ್ರದ ಎರಡು ಎನ್‌ಸಿಪಿ ಬಣಗಳ ವಿಲೀನದ ಕುರಿತು ಹರಿದಾಡುತ್ತಿರುವ ಸುದ್ದಿಗಳನ್ನು ಉತ್ಪ್ರೇಕ್ಷೆ ಎಂದು ಕರೆದಿರುವ ಸಂಜಯ್ ರಾವುತ್, ಎರಡೂ ಬಣಗಳಿಗೆ ವಿಭಿನ್ನ ರಾಜಕೀಯ ಹಿತಾಸಕ್ತಿಗಳಿವೆ ಎಂದು ಹೇಳಿದ್ದಾರೆ. ಒಂದು ಬಣ ಅಧಿಕಾರಕ್ಕೆ ಅಂಟಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದು ಬಣ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ನಿನ್ನೆ ಯಾವುದೇ ಸಭೆ ನಡೆದಿಲ್ಲ, ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರ ನಡುವೆ ಯಾವುದೇ ಭೇಟಿಯಾಗಿಲ್ಲ ಎಂದು ರಾವುತ್ ಸ್ಪಷ್ಟಪಡಿಸಿದ್ದಾರೆ

ಸಂಸದೀಯ ಸಮಿತಿಯ ಸಭೆಯಲ್ಲಿ ವಿಲೀನದ ಕುರಿತು ಚರ್ಚಿಸಲಾಗಿದೆ ಎಂಬ ವರದಿಗಳನ್ನು ಪ್ರಶ್ನಿಸಿದ ಅವರು, ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ನಡೆಯುವ ಸಂಸದೀಯ ಸಮಿತಿ ಸಭೆಯಲ್ಲಿ ಹಲವಾರು ನಾಯಕರು ಉಪಸ್ಥಿತರಿರುತ್ತಾರೆ. ಅಂತಹ ಸಭೆಯಲ್ಲಿ ವಿಲೀನದ ಬಗ್ಗೆ ಚರ್ಚಿಸಲು ಸಾಧ್ಯವೇ? ಎಂದು ವ್ಯಂಗ್ಯವಾಡಿದ್ದಾರೆ. ಒಂದೆರಡು ದಿನಗಳಲ್ಲಿ ಈ ವಿಲೀನದ ಚರ್ಚೆಗಳಿಗೆ ಪೂರ್ಣವಿರಾಮ ಬೀಳಲಿದೆ ಎಂದು ರಾವುತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅತ್ತ ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಕೂಡ ವಿಲೀನದ ಯಾವುದೇ ಪ್ರಸ್ತಾವನೆ ತಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದರೆ, ಇತ್ತ ಎನ್‌ಸಿಪಿ ರಾಜ್ಯಾಧ್ಯಕ್ಷ ಸುನೀಲ್ ತತ್ಕರೆ (ಅಜಿತ್​ ಬಣ), ತಮ್ಮ ಬಣವು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲೇ ಗಟ್ಟಿಯಾಗಿ ಉಳಿಯಲಿದೆ ಮತ್ತು ವಿಲೀನದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ.

Also Read
ಬಿಜೆಪಿ ನಾಯಕರನ್ನು ಕೇಳದೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ! ಎನ್​​ಸಿಪಿ ವಿಲೀನದ ಬಗ್ಗೆ ಸಚಿವ ಛಗನ್ ಭುಜಬಲ್ ಮಹತ್ವದ ಹೇಳಿಕೆ | NCP Merger Talks
 ದೇಶದಲ್ಲಿ ದೊಡ್ಡ ರಾಜಕೀಯ ಕ್ರಾಂತಿ: ಸಂಜಯ್ ರಾವುತ್ ಭವಿಷ್ಯ

ವಿಲೀನದ ವದಂತಿಗಳ ಹಿಂದೆ ಬಿಜೆಪಿ ಮತ್ತು ಮತ್ತೊಂದು ಬಣದ ಕೈವಾಡವಿದೆ ಎಂದು ಆರೋಪಿಸಿರುವ ರಾವುತ್, ಇದನ್ನು ಸಲೀಂ-ಜಾವೇದ್ ಶೈಲಿಯ ಚಿತ್ರಕಥೆಗೆ ಹೋಲಿಸಿ, ಪ್ರಫುಲ್ ಪಟೇಲ್ ಅವರು ಅಮಿತ್ ಷಾ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಮತ್ತು ಉದ್ದೇಶಪೂರ್ವಕವಾಗಿಯೇ ಈ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ದೂರಿದ್ದಾರೆ.

ರಾಹುಲ್ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ರಾವುತ್ ಮಾತು!

ತಮ್ಮ ಫೋನ್ ಕದ್ದಾಲಿಕೆಯಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಜಯ್ ರಾವುತ್, ದೇಶದಲ್ಲಿ ಯಾರ ಫೋನ್ ಕೂಡ ಸುರಕ್ಷಿತವಾಗಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ದೇಶದಲ್ಲಿ ಯಾರ ಫೋನ್ ಕದ್ದಾಲಿಕೆಯಾಗುತ್ತಿಲ್ಲ? ರಾಷ್ಟ್ರಪತಿಗಳು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಸುನೇತ್ರಾ ಪವಾರ್ ಮತ್ತು ಸೇನಾಧಿಕಾರಿಗಳ ಫೋನ್‌ಗಳನ್ನೂ ಕದ್ದಾಲಿಕೆ ಮಾಡಲಾಗುತ್ತಿರಬಹುದು ಎಂದು ರಾವುತ್ ಯುಬಿಟಿ ನಾಯಕ ಅನುಮಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಒಳಗೆ ತೀವ್ರ ಅಸಮಾಧಾನ ಮತ್ತು ಅಶಾಂತಿ ಮನೆಮಾಡಿದೆ ಎಂದಿರುವ ರಾವುತ್, ಫೋನ್‌ಗಳನ್ನು ಕದ್ದಾಲಿಕೆ ಮಾಡುತ್ತಿದ್ದರೆ, ಜನರು ಬಹಿರಂಗವಾಗಿಯೇ ಟೀಕಿಸಬೇಕು. ಆಡಳಿತಾರೂಢ ಸರ್ಕಾರವು ಗಂಟುಮೂಟೆ ಕಟ್ಟಿಕೊಂಡು ಹೋಗುವ ಸಮಯ ಹತ್ತಿರ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದೆಡೆ, ರಾಹುಲ್ ಗಾಂಧಿ ಅವರ ಫೋನ್ ಕದ್ದಾಲಿಕೆ ಆರೋಪಗಳನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ತಳ್ಳಿಹಾಕಿದ್ದು, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಮಾಧ್ಯಮಗಳ ಗಮನ ಸೆಳೆಯಲು ಇಂತಹ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಬದಲಾವಣೆಯ ಭವಿಷ್ಯ ನುಡಿದ ರಾವುತ್​

ದೇಶದ ಮುಂದಿನ ರಾಜಕಾರಣದ ಕುರಿತು ಮಹತ್ವದ ಹೇಳಿಕೆ ನೀಡಿರುವ ಸಂಜಯ್ ರಾವುತ್, ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ದೇಶದಲ್ಲಿ ದೊಡ್ಡ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಿದ್ದಾರೆ. ಏಪ್ರಿಲ್-ಮೇ ವೇಳೆಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮುಂದುವರಿಯುವುದಿಲ್ಲ. ಇದರ ಹಿಂದೆ ಹಲವು ಕಾರಣಗಳಿವೆ. ದೆಹಲಿಯ ರಾಜಕೀಯ ಪರಿಸ್ಥಿತಿಯ ನನ್ನ ವಿಶ್ಲೇಷಣೆಯ ಆಧಾರದ ಮೇಲೆ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ರಾವುತ್ ತಿಳಿಸಿದ್ದಾರೆ(ಏಜೆನ್ಸೀಸ್​).