370 ರೂ. ಬಿರಿಯಾನಿ ವಿವಾದ: ಮನರಂಜನೆ ಹೆಸರಲ್ಲಿ ಮಹಿಳೆಯರ ಮರ್ಯಾದೆ ಹರಾಜು; ಹಿಮಾಂಶು ಜಂಗ್ರಾ, ಪ್ರಣೀತ್ ಮೋರ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್​! NCW Notice to Praneeth More

ಮಹಿಳೆಯರ ಬಗ್ಗೆ ಕೀಳು ಹೇಳಿಕೆ ನೀಡಿದ ಹಿಮಾಂಶು ಮತ್ತು ಕಾಮೆಡಿಯನ್ ಪ್ರಣೀತ್ ಮೋರ್‌ಗೆ ನೋಟಿಸ್​
ಮಹಿಳೆಯರ ಬಗ್ಗೆ ಕೀಳು ಹೇಳಿಕೆ ನೀಡಿದ ಹಿಮಾಂಶು ಮತ್ತು ಕಾಮೆಡಿಯನ್ ಪ್ರಣೀತ್ ಮೋರ್‌ಗೆ ನೋಟಿಸ್​
Published on

ಪ್ರಮುಖ ಮುಖ್ಯಾಂಶಗಳು

  • ಇಂಟರ್‌ನೆಟ್‌ನಲ್ಲಿ ಭಾರೀ ಸಂಚಲನ ಮೂಡಿಸಿರೋ '370 ರೂ. ಬಿರಿಯಾನಿ' ವಿವಾದ
  • ಮಹಿಳೆಯರ ಬಗ್ಗೆ ಕೀಳು ಹೇಳಿಕೆ ನೀಡಿದ ಹಿಮಾಂಶು ಮತ್ತು ಕಾಮೆಡಿಯನ್ ಪ್ರಣೀತ್ ಮೋರ್‌ಗೆ ನೋಟಿಸ್​
  • ಸ್ಟ್ಯಾಂಡ್-ಅಪ್ ಕಾಮಿಡಿ ಶೋನಲ್ಲಿ ಮಹಿಳೆಯ ಒಪ್ಪಿಗೆ ಮತ್ತು ಘನತೆಯನ್ನು ಹರಾಜಿಗಿಟ್ಟ ವಿಡಿಯೋ ವೈರಲ್
ವೈರಲ್​: ಸೋಷಿಯಲ್​ ಮೀಡಿಯಾನಲ್ಲಿ ಕಳೆದ ಕೆಲವು ದಿನಗಳಿಂದ 370 ರೂಪಾಯಿಯ ಬಿರಿಯಾನಿ ವಿವಾದ ಸಾಕಷ್ಟು ಸದ್ದು ಮಾಡುತ್ತಿದೆ. ಗುರುಗ್ರಾಮದಲ್ಲಿ ನಡೆದ ಸ್ಟ್ಯಾಂಡ್-ಅಪ್ ಕಾಮಿಡಿ ಶೋನಲ್ಲಿ ಯುವಕನೊಬ್ಬ ಮಹಿಳೆಯರ ಬಗ್ಗೆ ಆಡಿದ ಆಕ್ಷೇಪಾರ್ಹ ಮಾತುಗಳನ್ನು ಖಂಡಿಸಿ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ (NCW Notice to Praneeth More)​ ಜಾರಿ ಮಾಡಿದೆ.
ಮಹಿಳೆಯರ ಒಪ್ಪಿಗೆ ಮತ್ತು ಘನತೆಯನ್ನು ಹರಾಜಿಗಿಟ್ಟ ಈ ಘಟನೆಯನ್ನು ಮಹಿಳಾ ಆಯೋಗ ಗಂಭೀರವಾಗಿ ತಗೆದುಕೊಂಡಿದ್ದು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ.

370 ರೂ. ಬಿರಿಯಾನಿಗೆ ದೈಹಿಕ ಸುಖಬೇಕಾ?

ಕಾಮೆಡಿಯನ್ ಪ್ರಣೀತ್ ಮೋರ್ ಅವರ ಕಾಮೆಡಿ ಶೋ ನಡೆಯುತ್ತಿದ್ದಾಗ, ಆಡಿಯನ್ಸ್ ಗ್ಯಾಲರಿಯಲ್ಲಿದ್ದ ಹಿಮಾಂಶು ಜಂಗ್ರಾ ಎಂಬ ಯುವಕ ತನ್ನ ಡೇಟಿಂಗ್ ಕಥೆ ಹೇಳಲು ಶುರು ಮಾಡಿದ್ದ. ಡೇಟಿಂಗ್ ಹೋದಾಗ ಚಿಕನ್ ಬಿರಿಯಾನಿಗೆ 370 ರೂಪಾಯಿ ಖರ್ಚು ಮಾಡಿದ್ದಕ್ಕೆ, ಪ್ರತಿಯಾಗಿ ಆಕೆಯಿಂದ ದೈಹಿಕ ಸುಖ ಸಿಗಬೇಕು ಅನ್ನೋ ಅರ್ಥದಲ್ಲಿ ಮಾತನಾಡಿದ್ದ.
ಅಷ್ಟೇ ಅಲ್ಲ, ಊಟ ಮುಗಿದ ಮೇಲೆ ಆಕೆ ತನ್ನನ್ನು ಮನೆಗೆ ಬಿಡಲು ಕೇಳಿದಾಗ ಆಶ್ಚರ್ಯಚಕಿತನಾದ ಹಿಮಾಂಶು, 370 ರೂಪಾಯಿ ಖರ್ಚು ಮಾಡಿದ್ದೇನೆ ಅಂದಮೇಲೆ ವಸೂಲಿ ಮಾಡಬೇಕಲ್ವಾ ಎಂದು ಅಹಂಕಾರದಿಂದ ಹೇಳಿದ್ದ. ಇದನ್ನು ಕೇಳಿ ಅಲ್ಲಿದ್ದ ಜನ ನಕ್ಕಿದ್ದರು ಮತ್ತು ಕಾಮೆಡಿಯನ್ ಕೂಡ ತಮಾಷೆಯಾಗಿ ತಗೆದುಕೊಂಡಿದ್ದರು.

ರೊಚ್ಚಿಗೆದ್ದ ನೆಟ್ಟಿಗರು: ಕೆಲಸ ಕಳೆದುಕೊಂಡ ಕಿರಾತಕ!

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಹಿಮಾಂಶು ಜಂಗ್ರಾ ಮತ್ತು ಕಾಮೆಡಿಯನ್ ಪ್ರಣೀತ್ ಮೋರ್ ವಿರುದ್ಧ ತಿರುಗಿಬಿದ್ದಿದೆ. 370 ರೂಪಾಯಿಗೆ ಮಹಿಳೆಯರ ಒಪ್ಪಿಗೆಯನ್ನು ಖರೀದಿಸಬಹುದೇ? ಎಂದು ನೆಟ್ಟಿಗರು ಕ್ಲಾಸ್ ತಗೆದುಕೊಂಡಿದ್ದಾರೆ.
ವಿವಾದ ಜೋರಾಗುತ್ತಿದ್ದಂತೆ ಹಿಮಾಂಶು ಕೆಲಸ ಮಾಡುತ್ತಿದ್ದ ಸ್ಟಾವಿಕ್ ಡಿಸೈನ್ ಕಂಪನಿ ಆತನನ್ನು ಕೆಲಸದಿಂದ ವಜಾ ಮಾಡಿದೆ. ಇಂತಹ ಕೀಳು ಮನಸ್ಥಿತಿಯ ಮಾತುಗಳು ನಮ್ಮ ಕಂಪನಿಯ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಎಂಟ್ರಿ ಕೊಟ್ಟ ಮಹಿಳಾ ಆಯೋಗ: ಹರಿಯಾಣ ಡಿಜಿಪಿಗೆ ಆರ್ಡರ್!

ಈ ಗಂಭೀರ ವಿಷಯವನ್ನು ರಾಷ್ಟ್ರೀಯ ಮಹಿಳಾ ಆಯೋಗ (NCW) ಕೈಗೆತ್ತಿಕೊಂಡಿದೆ. ಲೈಂಗಿಕ ದಬ್ಬಾಳಿಕೆ ಮತ್ತು ಮಹಿಳೆಯ ಒಪ್ಪಿಗೆಯಿಲ್ಲದ ನಡವಳಿಕೆಯನ್ನು ಮನರಂಜನೆಯ ಹೆಸರಿನಲ್ಲಿ ವೈಭವೀಕರಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆಯೋಗ ಆಕ್ರೋಶ ಹೊರಹಾಕಿದೆ.
ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ತಕ್ಷಣ ಎಫ್‌ಐಆರ್ (FIR) ದಾಖಲಿಸುವಂತೆ ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಅಷ್ಟೇ ಅಲ್ಲ, ಮುಂದಿನ 7 ದಿನಗಳ ಒಳಗಾಗಿ ಕೈಗೊಂಡ ಕ್ರಮಗಳ ವರದಿ ಸಲ್ಲಿಸಬೇಕು ಎಂದು ಗಡುವು ನೀಡಿದೆ.

ಕಾಮೆಡಿಯನ್ ಪ್ರಣೀತ್ ಹಾಗೂ ಹಿಮಾಂಶುಗೆ ಸಮನ್ಸ್!

ವಿವಾದಾತ್ಮಕ ಹೇಳಿಕೆ ನೀಡಿದ ಹಿಮಾಂಶು ಜಂಗ್ರಾ ಮತ್ತು ಕಾರ್ಯಕ್ರಮ ಆಯೋಜಿಸಿದ್ದ ಕಾಮೆಡಿಯನ್ ಪ್ರಣೀತ್ ಮೋರ್ ಇಬ್ಬರ ಮೇಲೂ ಸಮನ್ಸ್ ಜಾರಿ ಮಾಡಿದೆ. ಜೂನ್ 22 ರಂದು ಸಂಜೆ 4:00 ಗಂಟೆಗೆ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಲು ಇಬ್ಬರಿಗೂ ಖಡಕ್ ನೋಟಿಸ್ ನೀಡಲಾಗಿದೆ.

ಇನ್‌ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡಿ ಕೈಮುಗಿದ ಕಾಮೆಡಿಯನ್!

ಟ್ರೋಲ್ ಮತ್ತು ಸಾರ್ವಜನಿಕರ ಆಕ್ರೋಶ ತಾಳಲಾರದೆ ಕಾಮೆಡಿಯನ್ ಪ್ರಣೀತ್ ಮೋರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಆಡಿಯನ್ಸ್ ಹೇಳಿದ ಮಾತುಗಳು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ. ನಾನು ಆ ಮಾತನ್ನು ಅಲ್ಲೇ ಪ್ರಶ್ನಿಸಬೇಕಿತ್ತು, ನಕ್ಕು ಸುಮ್ಮನಾಗಿದ್ದು ನನ್ನ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಪ್ರಣೀತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ನಿಷ್ಕ್ರಿಯಗೊಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net