ಆರ್‌ಸಿಬಿ vs ಎಸ್‌ಆರ್‌ಹೆಚ್ ಹೆಡ್-ಟು-ಹೆಡ್.. ಅಂಕಿಅಂಶಗಳಲ್ಲಿ ಯಾರ ಕೈ ಮೇಲು..? ಇಲ್ಲಿದೆ ಕಂಪ್ಲೀಟ್​ ಹಿಸ್ಟರಿ! | RCB vs SRH

RCB vs SRH | ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್
RCB vs SRH | ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್
Published on
RCB vs SRH: ಐಪಿಎಲ್ 19ನೇ ಆವೃತಿಗೆ ಇಂದು ಅಧಿಕೃತ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.
ಕಳೆದ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೇರಿದ್ದ ಆರ್‌ಸಿಬಿ, ಈ ಬಾರಿಯೂ ಅದೇ ಲಯವನ್ನು ಮುಂದುವರಿಸುವ ಗುರಿ ಹೊಂದಿದೆ. ಮತ್ತೊಂದೆಡೆ, ಕಳೆದ ಸೀಸನ್‌ನಲ್ಲಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ನಾಕೌಟ್ ಹಂತಕ್ಕೇರಲು ವಿಫಲವಾಗಿದ್ದ ಸನ್‌ರೈಸರ್ಸ್ ಹೈದರಾಬಾದ್, ಈ ಬಾರಿ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯುತ್ತಿದೆ.
ಉಭಯ ತಂಡಗಳ ಬಲಾಬಲವನ್ನು ಗಮನಿಸಿದರೆ, ಆರ್‌ಸಿಬಿ ಪರ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಜಾಕೋಬ್ ಬೆಥೆಲ್ ಅವರಂತಹ ಸ್ಫೋಟಕ ಆಟಗಾರರು ತಂಡದ ಶಕ್ತಿಯಾಗಿದ್ದಾರೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇಶಾನ್ ಕಿಶನ್, ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮರನ್ನು ನೆಚ್ಚಿಕೊಂಡಿದೆ. ಈ ಎರಡೂ ತಂಡಗಳಿಗೆ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅತ್ಯಂತ ಮಹತ್ವದ್ದಾಗಿದೆ.
ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳ ಮುಖಾಮುಖಿ ದಾಖಲೆಗಳನ್ನು ನೋಡಿದಾಗ, ಸನ್‌ರೈಸರ್ಸ್ ಹೈದರಾಬಾದ್ ಮೇಲುಗೈ ಸಾಧಿಸಿರುವುದು ಕಂಡುಬರುತ್ತದೆ. ಒಟ್ಟು 26 ಪಂದ್ಯಗಳಲ್ಲಿ ಹೈದರಾಬಾದ್ 13 ಬಾರಿ ಗೆಲುವು ಸಾಧಿಸಿದ್ದರೆ, ಬೆಂಗಳೂರು ತಂಡವು 11 ಬಾರಿ ಜಯಭೇರಿ ಬಾರಿಸಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದ್ದರೆ, ಮತ್ತೊಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ರನ್ ಮಳೆ ಹರಿಯುವುದು ಖಚಿತವಾಗಿದ್ದು, ಅಭಿಮಾನಿಗಳು ಹೈ-ವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net