ಹಳಸಿತೇ 'ಸಹೋದರತ್ವ'ದ ಸಂಬಂಧ..? ರಾಹುಲ್ ಗಾಂಧಿ ಕರೆ ಸ್ವೀಕರಿಸಲಿಲ್ಲವಂತೆ ಸ್ಟಾಲಿನ್! | Stalin Ignores Rahul Call

ಹಳಸಿತೇ 'ಸಹೋದರತ್ವ'ದ ಸಂಬಂಧ..?
ಹಳಸಿತೇ 'ಸಹೋದರತ್ವ'ದ ಸಂಬಂಧ..?
Published on: 

ಚೆನ್ನೈ: ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಡುವಿನ ರಾಜಕೀಯ ಮೈತ್ರಿ ಮುರಿದುಬಿದ್ದ ಬೆನ್ನಲ್ಲೇ, ಉಭಯ ಪಕ್ಷಗಳ ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಎಂ ಕೆ ಸ್ಟಾಲಿನ್ ಅವರ ವೈಯಕ್ತಿಕ ಬಾಂಧವ್ಯದಲ್ಲೂ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಒಂದಾನೊಂದು ಕಾಲದಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಪರಸ್ಪರ ಸಹೋದರರು ಎಂದು ಕರೆದುಕೊಳ್ಳುತ್ತಿದ್ದ ಈ ಇಬ್ಬರು ನಾಯಕರ ನಡುವೆ ಈಗ ಮಾತುಕತೆಯೇ ನಿಂತುಹೋಗಿದೆ. ಇತ್ತೀಚೆಗೆ ರಾಹುಲ್ ಗಾಂಧಿ ಮಾಡಿದ ಫೋನ್ ಕರೆಯನ್ನು ಸ್ಟಾಲಿನ್ ಸ್ವೀಕರಿಸದೆ ಅಂತರ ಕಾಯ್ದುಕೊಂಡಿರುವುದು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಹುಲ್ ಕರೆಗೆ ನೋ ರೆಸ್ಪಾನ್ಸ್, ಸೋನಿಯಾಗೆ ಸಂದೇಶ

ನವೆಂಬರ್ 16ರಂದು ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಲು ರಾಹುಲ್ ಗಾಂಧಿ ಅವರು ಸ್ಟಾಲಿನ್ ಅವರಿಗೆ ಕರೆ ಮಾಡಿದ್ದರು. ಆದರೆ ಮಾಜಿ ಸಿಎಂ ಸ್ಟಾಲಿನ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಲು ನಿರಾಕರಿಸಿ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ, ರಾಹುಲ್ ಕರೆಯನ್ನು ನಿರ್ಲಕ್ಷಿಸಿದ ಸ್ಟಾಲಿನ್, ಪುಸ್ತಕ ಬಿಡುಗಡೆಯ ಕುರಿತು ಸೋನಿಯಾ ಗಾಂಧಿ ಅವರಿಗೆ ಪ್ರತ್ಯೇಕವಾಗಿ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವು ಡಿಎಂಕೆ ಜೊತೆಗಿನ ದಶಕಗಳ ಮೈತ್ರಿಯನ್ನು ಕಡಿದುಕೊಂಡು, ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಬೆಂಬಲ ನೀಡಿದ್ದೇ ಸ್ಟಾಲಿನ್ ಅವರ ಈ ಮಟ್ಟದ ಮುನಿಸಿಗೆ ಕಾರಣವಾಗಿದೆ.

Also Read
ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ವೀರ ಸಾವರ್ಕರ್‌ಗೆ ಅಪಮಾನ ಆರೋಪ! ಬಿಲಾಂಗಿಂಗ್ ಬ್ಯಾನ್​ ಮಾಡುವಂತೆ ಶಿವಸೇನೆ ಆಗ್ರಹ | Ban Belonging book
ಹಳಸಿತೇ 'ಸಹೋದರತ್ವ'ದ ಸಂಬಂಧ..?

ರಾಹುಲ್-ಸ್ಟಾಲಿನ್ ಸಂಬಂಧ ಹಳಸಿದ್ದು ಹೀಗೆ!

2004ರಿಂದಲೂ (2013ರ ಅಲ್ಪಾವಧಿಯ ವಿರಾಮ ಹೊರತುಪಡಿಸಿ) ಕಾಂಗ್ರೆಸ್ ಮತ್ತು ಡಿಎಂಕೆ ನಿಕಟ ಮೈತ್ರಿ ಹೊಂದಿದ್ದವು. 2019ರ ಲೋಕಸಭಾ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಮೊದಲು ಬೆಂಬಲಿಸಿದವರಲ್ಲಿ ಸ್ಟಾಲಿನ್ ಪ್ರಮುಖರಾಗಿದ್ದರು. 2024ರ ಚುನಾವಣಾ ಪ್ರಚಾರದಲ್ಲೂ ರಾಹುಲ್ ಅವರು ಸ್ಟಾಲಿನ್ ಅವರನ್ನು ತಮ್ಮ ಹಿರಿಯ ಸಹೋದರ ಎಂದು ಸಂಬೋಧಿಸಿದ್ದರು.

ಆದರೆ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಹೊತ್ತಿಗೆ ಈ ಸಂಬಂಧದಲ್ಲಿ ಬಿರುಕು ಮೂಡಿತು. ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸರ್ಕಾರದಲ್ಲಿ ಪಾಲು ಮತ್ತು ಹೆಚ್ಚಿನ ಸೀಟುಗಳನ್ನು ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಇದಕ್ಕೆ ಡಿಎಂಕೆ ಒಪ್ಪಿರಲಿಲ್ಲ. ಉಭಯ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದರೂ, ರಾಹುಲ್ ಮತ್ತು ಸ್ಟಾಲಿನ್ ಒಂದೇ ವೇದಿಕೆಯಲ್ಲಿ ಜಂಟಿ ಪ್ರಚಾರ ನಡೆಸಲಿಲ್ಲ. ಆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 5 ಸ್ಥಾನಗಳಲ್ಲಿ ಜಯಗಳಿಸಿತ್ತು.

ಟಿವಿಕೆ ಜೊತೆ ಕೈಜೋಡಿಸಿದ್ದೇ ಟರ್ನಿಂಗ್ ಪಾಯಿಂಟ್

ಚುನಾವಣಾ ಫಲಿತಾಂಶದಲ್ಲಿ ವಿಜಯ್ ನೇತೃತ್ವದ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ತಕ್ಷಣ, ಕಾಂಗ್ರೆಸ್ ಕ್ಷಿಪ್ರ ರಾಜಕೀಯ ನಡೆ ಅನುಸರಿಸಿ ಟಿವಿಕೆಗೆ ಬೆಂಬಲ ಘೋಷಿಸಿತು. ಈ ಮೂಲಕ ಡಿಎಂಕೆ ಜೊತೆಗಿನ ದಶಕಗಳ ನಂಟನ್ನು ಕಡಿದುಕೊಂಡು ವಿಜಯ್ ಸರ್ಕಾರದಲ್ಲಿ ಸಚಿವ ಸ್ಥಾನವನ್ನೂ ಪಡೆಯಿತು. ಅಷ್ಟೇ ಅಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆ, ಲೋಕಸಭೆ ಮತ್ತು ರಾಜ್ಯಸಭಾ ಚುನಾವಣೆಗಳಲ್ಲೂ ಟಿವಿಕೆ ಜೊತೆ ಮೈತ್ರಿ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಘೋಷಿಸಿರುವುದು ಡಿಎಂಕೆ ನಾಯಕರನ್ನು ಕೆರಳಿಸಿದೆ. ಕಾಂಗ್ರೆಸ್ ತಮಗೆ ದ್ರೋಹ ಬಗೆದಿದೆ ಎಂದು ಆರೋಪಿಸಿರುವ ಡಿಎಂಕೆ, ಇಂಡಿಯಾ ಮೈತ್ರಿಕೂಟದಿಂದ ಹೊರಗುಳಿಯುವುದಾಗಿ ಪುನರುಚ್ಚರಿಸಿದೆ.

ಸೋನಿಯಾ ಕಾರ್ಯಕ್ರಮದಲ್ಲಿ ವಿಜಯ್!

ಸೋಮವಾರ ದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸ್ಟಾಲಿನ್ ಗೈರಾದರೆ, ಸೋನಿಯಾ ಮತ್ತು ರಾಹುಲ್ ಅವರ ವಿಶೇಷ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ವಿಜಯ್ ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲ ಸಾಲಿನಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಪಕ್ಕದಲ್ಲೇ ವಿಜಯ್ ಕುಳಿತಿದ್ದರು. ಸಿಎಂ ಡಿ ಕೆ ಶಿವಕುಮಾರ್​, ಮಾಜಿ ಸಿಎಂ ಸಿದ್ದರಾಮಯ್ಯ, ಅಖಿಲೇಶ್ ಯಾದವ್, ಅಭಿಷೇಕ್ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಸುಪ್ರಿಯಾ ಸುಳೆ ಮತ್ತು ಹೇಮಂತ್ ಸೊರೇನ್ ಸೇರಿದಂತೆ ಹಲವು ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು(ಏಜೆನ್ಸೀಸ್​).