ಬಾಬಾಸಾಹೇಬರು ಭಾರತವನ್ನು ಕೇವಲ ಅನುಭವಿಸಿ ಮಾತ್ರವಲ್ಲ, ಅಧ್ಯಯನ ಮಾಡಿ ಅರ್ಥ ಮಾಡಿಕೊಂಡಿದ್ದರು. ವೇದ, ಉಪನಿಷತ್ತು, ಸ್ಮೃತಿಗಳನ್ನು ಬಿಡಿಸಿ ನೋಡಿ, ಇಲ್ಲಿನ ಸಮಸ್ಯೆಗಳ ಮೂಲಗಳನ್ನು ಅರಿತಿದ್ದರು. ಹಾಗಾಗಿ ಅವರ ಇಡೀ ರಾಜಕೀಯ ಚಿಂತನೆ ಶೋಷಿತರ, ಬಡವರ, ನಿರ್ಲಕ್ಷಿತರ ಏಳಿಗೆಗಾಗಿ ಮೀಸಲಿತ್ತು. ಆ ಕಾಳಜಿಯಿಂದಾಗಿಯೆ ಇವತ್ತಿಗೂ ಬಾಬಾಸಾಹೇಬರು ಪ್ರಸ್ತುತಗೊಳ್ಳುತ್ತಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಘನತೆಯಿಂದ ಬಾಳಬೇಕು ಎಂಬ ಬಾಬಾಸಾಹೇಬರ ಕನಸನ್ನೇ ನಮ್ಮ ಸರ್ಕಾರ ತನ್ನ ಆಡಳಿತದ ಧ್ಯೇಯವಾಗಿಸಿಕೊಂಡಿದೆ. ನಾವು ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ಸ್ವಾವಲಂಬನೆಯನ್ನು, ಆ ಮೂಲಕ ಘನತೆಯ ಬದುಕನ್ನು ರೂಪಿಸಿಕೊಳ್ಳಲು ನೆರವಾಗುತ್ತಿವೆ. ಕೇವಲ ಗ್ಯಾರಂಟಿ ಯೋಜನೆಗಳಲ್ಲದೆ ನಮ್ಮ ಸರ್ಕಾರದ ಇಡೀ ಆಡಳಿತ ವೈಖರಿ ಬಾಬಾಸಾಹೇಬರು ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತಿದೆ. ಆ ಬಗ್ಗೆ ನಮಗೆ ಹೆಮ್ಮೆಯಿದೆ. ಸಾಗರದಂತಹ ಬಾಬಾಸಾಹೇಬರನ್ನು ನಮ್ಮ ಅಂಗೈ ಬೊಗಸೆಯಲ್ಲಿ ಮೊಗೆದು, ಸಾಮಾಜಿಕ ನ್ಯಾಯದತ್ತ ಸಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ಮತ್ತು ಈ ಪ್ರಯತ್ನ ನಿರಂತರವಾಗಿರಲಿದೆ.