ನನ್ನನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿ!...ಬಿಜೆಪಿಗೆ ಎರಡನೇ ರಾಜೀನಾಮೆ ಪತ್ರ ಬರೆದ ಶೆಹಜಾದ್ ಪೂನಾವಾಲಾ | Shehzad Poonawalla

Shehzad Poonawalla | ಬಿಜೆಪಿಗೆ ಎರಡನೇ ರಾಜೀನಾಮೆ ಪತ್ರ ಬರೆದ ಶೆಹಜಾದ್ ಪೂನಾವಾಲಾ
Shehzad Poonawalla | ಬಿಜೆಪಿಗೆ ಎರಡನೇ ರಾಜೀನಾಮೆ ಪತ್ರ ಬರೆದ ಶೆಹಜಾದ್ ಪೂನಾವಾಲಾ
Published on

ಬಿಜೆಪಿಯ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶೆಹಜಾದ್ ಪೂನಾವಾಲಾ, ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಿಗೊಳಿಸುವಂತೆ ಪಕ್ಷದ ನಾಯಕತ್ವಕ್ಕೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ಬರೆದ ಪತ್ರವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೂನಾವಾಲಾ, ಬಿಜೆಪಿ ಆರಂಭದಲ್ಲಿ ತಮ್ಮ ರಾಜೀನಾಮೆಯನ್ನು ಅಂಗೀಕರಿಸಲು ನಿರಾಕರಿಸಿ, ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ದೀರ್ಘ ಆಲೋಚನೆಯ ನಂತರ, ಪಕ್ಷದ ಹುದ್ದೆ ಮತ್ತು ಸಕ್ರಿಯ ಸದಸ್ಯತ್ವದಿಂದ ಹೊರಬರುವ ತಮ್ಮ ಅಂತಿಮ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ.

ಕೆಲವು ವ್ಯಕ್ತಿಗಳ ಕಾರಣದಿಂದಾಗಿ....

ತಮ್ಮ ನಿರ್ಧಾರವನ್ನು ವಿವರಿಸಿದ ಪೂನಾವಾಲಾ, ತುರ್ತು ಹಣಕಾಸು ಮತ್ತು ವೈಯಕ್ತಿಕ ಪರಿಸ್ಥಿತಿಗಳ ಕಾರಣದಿಂದಾಗಿ ತಾವು ಖಾಸಗಿ ವಲಯಕ್ಕೆ ಸ್ಥಳಾಂತರಗೊಳ್ಳುತ್ತಿರುವುದಾಗಿ ಪುನರುಚ್ಚರಿಸಿದ್ದಾರೆ. ಅದೇ ಸಮಯದಲ್ಲಿ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ದೂರದೃಷ್ಟಿ ಹಾಗೂ ಕೆಲಸಕ್ಕೆ ಸಾಧ್ಯವಾದಾಗಲೆಲ್ಲಾ ಮತ್ತು ಸಾಧ್ಯವಿರುವ ಯಾವುದೇ ರೂಪದಲ್ಲಿ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ನಾನು ವ್ಯವಸ್ಥೆಯನ್ನು ಮಾತ್ರ ತೊರೆಯುತ್ತಿದ್ದೇನೆ, ವ್ಯಕ್ತಿ ಅಥವಾ ವಿಚಾರವನ್ನಲ್ಲ ಎಂದು ಹೇಳಿರುವ ಪೂನಾವಾಲಾ, ಪಕ್ಷದ ಸಂಘಟನೆಯನ್ನು ತೊರೆಯುವ ನಿರ್ಧಾರವು ಮೋದಿಯವರ ಮೇಲಿನ ರಾಜಕೀಯ ನಿಷ್ಠೆ ಅಥವಾ ಬಿಜೆಪಿಯ ಸೈದ್ಧಾಂತಿಕ ಚೌಕಟ್ಟಿನಿಂದ ದೂರವಾಗುವುದು ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಈ ನಿರ್ಧಾರವು ಯಾವುದೇ ಅಸಮಾಧಾನದಿಂದ ಬಂದಿದ್ದಲ್ಲ ಎಂದು ಒತ್ತಿ ಹೇಳಿರುವ ಪೂನಾವಾಲಾ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸೇರಿದಂತೆ ಹಿರಿಯ ನಾಯಕರ ಬಗ್ಗೆ ತಮ್ಮ ಕೃತಜ್ಞತೆ, ಪ್ರೀತಿ, ಅಭಿಮಾನ ಮತ್ತು ಅತ್ಯುನ್ನತ ಗೌರವವನ್ನು ವ್ಯಕ್ತಪಡಿಸಿದ್ದಾರೆ.

ವೇದಿಕೆ ಮತ್ತು ಅವಕಾಶಗಳಿಗಾಗಿ ಧನ್ಯವಾದ ಎಂದ ಪೂನಾವಾಲಾ!...

ತಮ್ಮ ಕುಟುಂಬದಲ್ಲಿ ಯಾರೂ ರಾಜಕಾರಣದಲ್ಲಿ ಇಲ್ಲದಿದ್ದರೂ ಹಾಗೂ ತಾವು ಮುಸ್ಲಿಂ ಸಮುದಾಯದ ಯುವಕನಾಗಿದ್ದರೂ, ಬಿಜೆಪಿ ತಮ್ಮನ್ನು ಗುರುತಿಸಿ ರಾಷ್ಟ್ರೀಯ ವಕ್ತಾರರಂತಹ ಪ್ರಮುಖ ಹುದ್ದೆ ನೀಡಿದೆ. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಸಾಮಾನ್ಯ ಯುವಕನಿಗೆ ಈ ರೀತಿಯ ಅವಕಾಶ ಸಿಗಲು ಭಾರತ ಮತ್ತು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಅವರು ಹೇಳಿದ್ದಾರೆ

ಪಕ್ಷದ ಪ್ರಮುಖ ಮುಸ್ಲಿಂ ಮುಖವಾಗಿ, ಪೂನಾವಾಲಾ ಅನೇಕ ವಿಷಯಗಳಲ್ಲಿ ಬಿಜೆಪಿಯ ನಿಲುವನ್ನು ಸ್ಪಷ್ಟಪಡಿಸಲು ಮತ್ತು ಹೈಪ್ರೊಫೈಲ್ ರಾಜಕೀಯ ಚರ್ಚೆಗಳಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲು ಸದಾ ಮುಂಚೂಣಿಯಲ್ಲಿದ್ದರು. ತಮ್ಮ ಮೊದಲ ರಾಜೀನಾಮೆಯನ್ನು ಸ್ವೀಕರಿಸದ ಕಾರಣ, ಇದೀಗ ತಮ್ಮನ್ನು ಸಾಂಸ್ಥಿಕ ಜವಾಬ್ದಾರಿಗಳಿಂದ ಅಧಿಕೃತವಾಗಿ ಮುಕ್ತಿಗೊಳಿಸುವಂತೆ ಅವರು ಬಿಜೆಪಿ ನಾಯಕತ್ವವನ್ನು ಕೋರಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net