ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್‌ನ ಭ್ರಷ್ಟಾಚಾರ ಕೇವಲ ಬಂಗಾಳದ ಜನರನ್ನು ಮಾತ್ರವಲ್ಲ, ಅವರದೇ ಶಾಸಕರನ್ನೂ ಬಿಟ್ಟಿಲ್ಲ. ಟಿಎಂಸಿ ತನ್ನದೇ ಶಾಸಕರ ಸಹಿಗಳನ್ನು ಕರಗತ ಮಾಡಿಕೊಂಡಿದೆ (ಕದ್ದಿದೆ). ಈ ಬಗ್ಗೆ ಆ ಪಕ್ಷದ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಾಹಾ ದೂರು ನೀಡಿದ್ದಾರೆ, ಇದರಲ್ಲಿ ನಮ್ಮದೇನು ಪಾತ್ರವಿಲ್ಲ ಎಂದು ತಿಳಿಸಿದ್ದಾರೆ. ಈ ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಸಚಿವಾಲಯವು ಈಗಾಗಲೇ ಪೊಲೀಸ್ ದೂರು ದಾಖಲಿಸಿದ್ದು, ಸಿಐಡಿ ತನಿಖೆ ಆರಂಭಿಸಿದೆ. ಪತ್ರದಲ್ಲಿದ್ದ ಶಾಸಕರ ಸಹಿಗಳ ಮಾದರಿಯನ್ನು ಸಿಐಡಿ ಸಂಗ್ರಹಿಸುತ್ತಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಬಹರುಲ್ ಇಸ್ಲಾಂ, ಅರುಪ್ ರಾಯ್ ಮತ್ತು ಸುಭಾಶಿಶ್ ದಾಸ್ ಎಂಬ ಮೂವರು ಟಿಎಂಸಿ ಶಾಸಕರು ತಾವು ಆ ದಾಖಲೆಗೆ ಸಹಿ ಮಾಡಿಲ್ಲ ಎಂದು ಸಿಐಡಿ ಮುಂದೆ ಒಪ್ಪಿಕೊಂಡಿದ್ದಾರೆ. ತನಿಖಾಧಿಕಾರಿಗಳು ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.