ದೀದಿ ಸಾಮ್ರಾಜ್ಯ ಧೂಳೀಪಟ..! ಸ್ಪೀಕರ್‌ಗೆ 58 ಶಾಸಕರ ಸಹಿ ಪತ್ರ ಸಲ್ಲಿಸಿ ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್ ಕೊಟ್ಟ ಬಂಡಾಯ ನಾಯಕ | TMC Split

TMC Split
TMC Split
Published on
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್​ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ರಿತಬ್ರತಾ ಬ್ಯಾನರ್ಜಿ ಬುಧವಾರ 58 ಶಾಸಕರ ಸಹಿ ಇರುವ ಪತ್ರವನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಸಲ್ಲಿಸಿದ್ದು, ಟಿಎಂಸಿಯಲ್ಲಿ ವಿಭಜನೆ (TMC Split) ಉಂಟಾಗುವ ಮೂಲಕ ದೊಡ್ಡ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಸ್ಪೀಕರ್‌ಗೆ ಸಲ್ಲಿಸಲಾಗಿರುವ ಈ ಪತ್ರದಲ್ಲಿ ರಿತಬ್ರತಾ ಬ್ಯಾನರ್ಜಿ ಅವರನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರೆಂದು ಗುರುತಿಸುವಂತೆ ಕೋರಲಾಗಿದೆ.
ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ರೆಬೆಲ್​ ಶಾಸಕರು ಬಸ್‌ಗಳ ಮೂಲಕ ಒಟ್ಟಿಗೆ ವಿಧಾನಸಭೆಗೆ ತೆರಳಿದ್ದು, ಬಂಡಾಯಗಾರರ ಬಲ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಸದ್ಯ ರಿತಬ್ರತಾ ನೇತೃತ್ವದ ಈ ಬಣಕ್ಕೆ 60ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಮೂಲಗಳು ತಿಳಿಸಿದ್ದು, ಒಂದು ವೇಳೆ ಈ ಸಂಖ್ಯಾಬಲ ನಿಜವೇ ಆದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರವಾಗಿ ವಿಧಾನಸಭೆಯಲ್ಲಿ ಕೇವಲ 20 ಶಾಸಕರು ಮಾತ್ರ ಉಳಿಯಲಿದ್ದಾರೆ.
ಈ ಇಡೀ ನಾಟಕೀಯ ಬೆಳವಣಿಗೆಗಳ ನಡುವೆಯೂ ತೃಣಮೂಲ ಕಾಂಗ್ರೆಸ್ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸಬಲ್ಲ ಈ ಸೂಕ್ಷ್ಮ ಪರಿಸ್ಥಿತಿಯನ್ನು ರಾಜಕೀಯ ವಿಶ್ಲೇಷಕರು ಹತ್ತಿರದಿಂದ ಗಮನಿಸುತ್ತಿದ್ದಾರೆ. ಇದೇ ವೇಳೆ, ಟಿಎಂಸಿ ಹಿರಿಯ ನಾಯಕ ಕಲ್ಯಾಣ್ ಬ್ಯಾನರ್ಜಿ ಎಕ್ಸ್ ಖಾತೆಯ ಮೂಲಕ ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಪಕ್ಷದ ಶಾಸಕಾಂಗ ವಿಭಾಗದ ಪ್ರಮುಖ ನೇಮಕಾತಿಗಳ ಕುರಿತು ಮಾಹಿತಿ ನೀಡಿದ್ದಾರೆ.
ಅದರಂತೆ, ಶೋಭನ್‌ದೇವ್ ಚಟ್ಟೋಪಾಧ್ಯಾಯ ಅವರನ್ನು ಸದನದ ನಾಯಕರನ್ನಾಗಿ, ಅಶಿಮಾ ಪಾತ್ರ ಮತ್ತು ನಯನಾ ಬಂಡೋಪಾಧ್ಯಾಯರನ್ನು ವಿಧಾನಸಭೆಯ ಉಪನಾಯಕರನ್ನಾಗಿ ಹಾಗೂ ಫಿರ್ಹಾದ್ ಹಕೀಮ್​​ರನ್ನು ಮುಖ್ಯ ಸಚೇತಕರನ್ನಾಗಿ (Chief Whip) ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷವು ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಸೋಮವಾರವಷ್ಟೇ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಿತ್ತು. ಈ ಉಚ್ಚಾಟನೆ ನಡೆದ ಕೆಲವೇ ದಿನಗಳಲ್ಲಿ ಈಗ ಇಡೀ ಪಕ್ಷವೇ ಇಬ್ಬಾಗವಾಗುವ ಹಂತಕ್ಕೆ ತಲುಪಿದೆ.

ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದ್ದೇ ಅಷ್ಟೇ!

ಬುಧವಾರ ವಿಧಾನಸಭೆಯ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ಉಚ್ಚಾಟಿತ ಶಾಸಕ ರಿತಬ್ರತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಈಗ ಐ-ಪ್ಯಾಕ್ (I-PAC) ಹೈಜಾಕ್ ಮಾಡಿದ್ದು, ಅದು ಇನ್ನು ಮುಂದೆ ಮಮತಾ ಬ್ಯಾನರ್ಜಿ ಪಕ್ಷವಾಗಿ ಉಳಿದಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಶಾಸಕರ ವಸತಿಗೃಹದಲ್ಲಿ ಕೆಲವು ಶಾಸಕರನ್ನು ಭೇಟಿಯಾಗಿ ಅವರೊಂದಿಗೆ ಮಂಡಕ್ಕಿ (puffed rice) ಸವಿದಿದ್ದನ್ನು ಒಪ್ಪಿಕೊಂಡ ರಿತಬ್ರತಾ, ನಿಮಗೆ 50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆಯೇ ಎಂಬ ವರದಿಗಾರರ ಪ್ರಶ್ನೆಗೆ, ನಾನು ಸದ್ಯದ ಪರಿಸ್ಥಿತಿಯನ್ನಷ್ಟೇ ನಂಬಿ ಬದುಕಲು ಇಷ್ಟಪಡುತ್ತೇನೆ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಶೋಭನ್‌ದೇವ್ ಚಟ್ಟೋಪಾಧ್ಯಾಯರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಟಿಎಂಸಿ ಹೇಳಿಕೆಯನ್ನು ತಿರಸ್ಕರಿಸಿದ ಅವರು, ತಾವು ಕೇವಲ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದ್ದೇ ಅಷ್ಟೇ ಎಂದು ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net