ರಾಮಮಯ ಅಯೋಧ್ಯ

ರಾಮಮಯ ಅಯೋಧ್ಯ
ರಾಮಮಯ ಅಯೋಧ್ಯ
Published on
ಅವು 2020ರ ಮೊದಲ ದೃಶ್ಯಗಳು. ‘ರಾಮಲಲ್ಲಾ ಕಂಹಾ ಹೈ?’ (ರಾಮಲಲ್ಲಾ ಎಲ್ಲಿದ್ದಾನೆ?) ಎಂದು ಅಯೋಧ್ಯೆಗೆ ಭೇಟಿ ನೀಡುತ್ತಿದ್ದ ಭಕ್ತರು ಸ್ಥಳೀಯರನ್ನು ಕೇಳಿದರೆ, ‘ಹೀಗೆ ಹೋಗಿ’ ಎಂದು ಮಾರ್ಗ ತೋರುತ್ತ ‘ಟೆಂಟ್​ನಲ್ಲಿ ಇದ್ದಾನೆ, ದೂರದಿಂದಲೇ ಕೈಮುಗಿಯಬೇಕು. ಭದ್ರತಾ ಪಡೆಯವರು ಹತ್ತಿರ ಬಿಡುವುದಿಲ್ಲ’ ಎಂದು ಸೂಚನೆ ನೀಡುತ್ತಿದ್ದರು. ಪುಟ್ಟ ಟೆಂಟ್​ನಲ್ಲಿ ಬಾಲರಾಮನನ್ನು ಕಂಡು, ಮಂದಿರ ನಿರ್ವಣದ ಕನಸು ಯಾವಾಗ ಸಾಕಾರಗೊಳ್ಳುವುದೋ ಎಂದು ಕಳವಳಪಡುತ್ತ ವಾಪಸ್ ತಮ್ಮ ಊರಿಗೆ ಮರಳಲು ಅನುವಾಗುತ್ತಿದ್ದರು. ಮಾತ್ರವಲ್ಲ, ಅಯೋಧ್ಯೆಯ ಸ್ಥಿತಿ ನೋಡಿ ಮರುಕಪಡುತ್ತಿದ್ದರು.
2020ರ ಆಗಸ್ಟ್ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 5ರಂದು ರಾಮ ಮಂದಿರ ನಿರ್ವಣಕ್ಕೆ ಶಿಲಾನ್ಯಾಸ ನೆರವೇರಿಸುತ್ತಿದ್ದಂತೆ, ಮಂದಿರ ನಿರ್ವಣದ ಕನಸು ಚಿಗುರೊಡೆಯಿತು. ಶಿಲಾನ್ಯಾಸದ ಬಳಿಕ ವಿಳಂಬಕ್ಕೆ ಆಸ್ಪದ ಮಾಡಿಕೊಡದೆ, ಮಂದಿರ ನಿರ್ವಣದ ಕಾಮಗಾರಿಗಳು ಹಂತ-ಹಂತವಾಗಿ ಪ್ರಗತಿ ಕಂಡವು. ಕೊನೆಗೂ ಆ ದಿನ ಬಂದೇ ಬಿಟ್ಟಿತು. ಐನೂರು ವರ್ಷಗಳ ಕಾಯುವಿಕೆಯ ಕೊನೆಯ ಘಟ್ಟ. ದೇಶ ಮಾತ್ರವಲ್ಲ, ಜಾಗತಿಕ ವಲಯದ ಚಿತ್ತ ಅಯೋಧ್ಯೆಯತ್ತ. ಅಂದು 2024ರ ಜನವರಿ 22. ಕೋಟಿ ಕೋಟಿ ಜನರ ಶತಮಾನಗಳ ಹೆಬ್ಬಯಕೆಯಾದ ರಾಮಮಂದಿರದ ಉದ್ಘಾಟನೆ ಆಯಿತು. ವಿವಿಧ ರಂಗಗಳ ಎಂಟು ಸಾವಿರಕ್ಕೂ ಅಧಿಕ ಗಣ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆಸಿಕೊಟ್ಟರು. ಶ್ರೀರಾಮ ಮಂದಿರ ನಿರ್ವಣದ ಮೂಲಕ ಭಾರತದ ಇತಿಹಾಸದಲ್ಲಿ ಮತ್ತೊಂದು ವಿಶಿಷ್ಟ ಅಧ್ಯಾಯ ಸೇರ್ಪಡೆಯಾಯಿತು.
ಈ ಭವ್ಯ ದೇಗುಲವು ಆಧುನಿಕ ಭಾರತದ ಸಾಂಸ್ಕೃತಿಕ ಹೆಗ್ಗುರುತಾಗಿ ಬದಲಾಗಿದೆ. ಕಳೆದ 2 ವರ್ಷಗಳಲ್ಲಿ ಅಯೋಧ್ಯೆ ಎಲ್ಲ ರಂಗಗಳಲ್ಲೂ ಅಭಿವೃದ್ಧಿಗೊಂಡಿದ್ದು, ಮುಖ್ಯವಾಗಿ ಆಧ್ಯಾತ್ಮಿಕ ವಾತಾವರಣ ಮರುಸ್ಥಾಪನೆಯಾಗಿದೆ. ಶ್ರೀರಾಮ ಮಂದಿರ ಟ್ರಸ್ಟ್ ವತಿಯಿಂದ ಪ್ರಾಣಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವವನ್ನು 2025ರ ಡಿಸೆಂಬರ್ 27ರಿಂದ 2026ರ ಜನವರಿ 2ರವರೆಗೆ ಆಚರಿಸಲಾಗಿದೆ. ‘ಹಿಂದೆ ಅಯೋಧ್ಯೆ ದುಸ್ಥಿತಿ ಮತ್ತು ಸಂಘರ್ಷದಲ್ಲಿ ಸಿಲುಕಿತ್ತು. ಈಗ ರಾಮನ ನಗರಿ ಅಯೋಧ್ಯೆ ಉತ್ಸವಗಳ ಜಾಗತಿಕ ರಾಜಧಾನಿಯಾಗಿ ಬದಲಾಗಿದೆ. ಇಲ್ಲಿ ಪ್ರತಿ ದಿನವೂ ಉತ್ಸವವೇ. ಪ್ರತಿ ದಿಕ್ಕಿನಲ್ಲೂ ರಾಮರಾಜ್ಯದ ಪುನರ್ ಸ್ಥಾಪನೆಯ ಪ್ರಯತ್ನಗಳು ನಡೆಯುತ್ತವೆ. ಧರ್ಮಧ್ವಜವು ರಾಷ್ಟ್ರಧರ್ಮದ ಪ್ರತೀಕವಾಗಿದೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಧರ್ಮಧ್ವಜಾರೋಹಣ ಸಂದರ್ಭದಲ್ಲಿ ಹೇಳಿದ್ದು, ಅಯೋಧ್ಯೆಯ ಬದಲಾದ ಚಿತ್ರಣಕ್ಕೆ ಸಾಕ್ಷಿ. ರಾಮನವಮಿ, ಯುಗಾದಿ, ದಸರಾ, ದೀಪಾವಳಿ, ಮಕರ ಸಂಕ್ರಮಣ ಸೇರಿದಂತೆ ಪ್ರಮುಖ ಉತ್ಸವಗಳ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಮಾತ್ರವಲ್ಲದೆ ಖ್ಯಾತ ಆಧ್ಯಾತ್ಮಿಕ ಚಿಂತಕರು, ಸಾಧು-ಸಂತರು, ಮಹಂತರು, ಪೀಠಾ ಧಿಪತಿಗಳು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಸರಯೂ ನದಿ ಪರಿಸರದ ಚಿತ್ರಣವೇ ಬದಲಾಗಿದ್ದು, ಜಪ-ಅನುಷ್ಠಾನ, ಪೂಜೆಯ ದೃಶ್ಯಗಳು ದೈವಿಕ ವಾತಾವರಣ ಸೃಷ್ಟಿಸಿವೆ. ಮುಂಬರುವ ದಿನಗಳಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ವಸ್ತುಸಂಗ್ರಹಾಲಯ ನಿರ್ವಣವಾಗಲಿದ್ದು, ಪ್ರವಾಸಿಗರಿಗೆ ಅಯೋಧ್ಯೆ ಭೇಟಿ ಇನ್ನಷ್ಟು ಮುದ ನೀಡಲಿದೆ.

ಮೂಲಸೌಕರ್ಯ ಮತ್ತು ಅಭಿವೃದ್ಧಿ

ರಾಮ ಮಂದಿರ ನಿರ್ಮಾಣ ಕಾರ್ಯದ ಎಲ್ಲ ಕಾಮಗಾರಿಗಳು 2025ರ ನವೆಂಬರ್​ನಲ್ಲಿ ಪೂರ್ಣಗೊಂಡಿವೆ. ನಗರದಲ್ಲಿ ಜನರ ದಟ್ಟಣೆಯನ್ನು ನಿರ್ವಹಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆಗಳನ್ನು ವಿಸ್ತರಿಸಲಾಗಿದೆ. ನಗರದ ಹೊರವಲಯದಲ್ಲೂ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಒಳಚರಂಡಿ ವ್ಯವಸ್ಥೆ, ವಿದ್ಯುತ್ ಪೂರೈಕೆ, ನೀರು ಸರಬರಾಜು ಮತ್ತು ಸ್ವಚ್ಛತೆಗೆ ಭಾರಿ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲಾಗಿದ್ದು, ಕೆಲ ಯೋಜನೆಗಳು ಪ್ರಗತಿಯಲ್ಲಿವೆ. ಮುಖ್ಯವಾಗಿ, ರಾಮ ಮಂದಿರದ ಶೈಲಿಯಲ್ಲೇ ಹೊಸ ರೈಲು ನಿಲ್ದಾಣ ತಲೆಎತ್ತಿದ್ದು, ದೇಶದ ಎಲ್ಲ ಪ್ರಮುಖ ನಗರಗಳಿಂದ ಅಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ. ಬಸ್ ಟರ್ವಿುನಲ್​ಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶೀಯ ಹಾಗೂ ವಿದೇಶದಿಂದ ಬರುವ ಭಕ್ತರಿಗೆ ಸಂಪರ್ಕವನ್ನು ಸುಲಭಗೊಳಿಸಿದೆ. ಅಂತಾರಾಷ್ಟ್ರೀಯ ದರ್ಜೆಯ ಹೋಟೆಲ್​ಗಳು, ಹೋಮ್್ಟೇಗಳು, ಆಸ್ಪತ್ರೆಗಳು, ವಾಣಿಜ್ಯ ಸೌಲಭ್ಯಗಳು ತ್ವರಿತವಾಗಿ ಹೆಚ್ಚಾಗಿವೆ. ಅಯೋಧ್ಯೆ ಸುತ್ತಮುತ್ತ ಭೂಮಿ ಬೆಲೆಯೂ ಅಧಿಕಗೊಂಡಿದೆ.
ಆರ್ಥಿಕ-ಸಾಮಾಜಿಕ ಬದಲಾವಣೆಗಳು
- ಸ್ಥಳೀಯರಿಗೆ ಹೊಸ ಉದ್ಯೋಗಾವಕಾಶಗಳು ಪ್ರಾಪ್ತವಾಗಿವೆ. ಸ್ಥಳೀಯ ಯುವಕರು ನವೋದ್ಯಮ ಆರಂಭಿಸಿದ್ದಾರೆ. ಪ್ರವಾಸೋದ್ಯಮ, ಆತಿಥ್ಯ ಹಾಗೂ ವ್ಯಾಪಾರ ರಂಗಗಳಲ್ಲಿ ಉದ್ಯೋಗ ಸೃಜನೆಯಾಗುತ್ತಿದ್ದು, ಸ್ಥಳೀಯ ಆರ್ಥಿಕ ಚಟುವಟಿಕೆಗಳು ಭಾರಿ ವೇಗ ಪಡೆದಿವೆ.
- ಭದ್ರತೆಗಾಗಿ ಎನ್​ಎಸ್​ಜಿ ಕೇಂದ್ರ ಇದೇ ವರ್ಷ ಸ್ಥಾಪನೆಯಾಗಲಿದೆ.
- ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ 1ರಿಂದ 1.5 ಲಕ್ಷ ಜನರು ಭೇಟಿ ನೀಡುತ್ತಿದ್ದಾರೆ.

ನಯನಮನೋಹರ ಮೂರ್ತಿ

ದಿವ್ಯ ತೇಜಸ್ಸಿನ ಬಾಲರಾಮನ ಮನಮೋಹಕ, ಸುಂದರ ಹಾಗೂ ದೈವಸ್ವರೂಪಿ ನೋಟ ಭಕ್ತರನ್ನು ಬೆರಗುಗೊಳಿಸುತ್ತಿದೆ. ಬಾಲರಾಮನ ಕಣ್ಣುಗಳಲ್ಲಿ ಮುಗ್ಧತೆ, ತುಟಿಗಳಲ್ಲಿ ನಗು, ಮುಖದಲ್ಲಿ ಅಪೂರ್ವ, ಅದ್ಭುತವಾದ ಕಾಂತಿ ಗೋಚರಿಸುತ್ತದೆ. ಇಂಥದ್ದೊಂದು ದಿವ್ಯ ತೇಜಸ್ಸು, ಓಜಸ್ಸು, ವರ್ಚಸ್ಸಿನ ಮೂರ್ತಿ ಕೆತ್ತಿದ ಮೈಸೂರಿನ ಅರುಣ್ ಯೋಗಿರಾಜ್ ಸೃಜನಶೀಲತೆ ಕೂಡ ಪ್ರಶಂಸೆಗೆ ಪಾತ್ರವಾಯಿತು.

ಜಾಗತಿಕ ದಾಖಲೆ

ಅಯೋಧ್ಯೆಯ ದೀಪಾವಳಿ ಈಗ ಜಗದ್ವಿಖ್ಯಾತವಾಗಿದೆ. ಉತ್ತರ ಪ್ರದೇಶ ಸರ್ಕಾರದಿಂದ 2025ರ ಅಕ್ಟೋಬರ್ 19ರಂದು ಅಯೋಧ್ಯೆಯಲ್ಲಿ ನಡೆದ ದೀಪೋತ್ಸವ ಎರಡು ವಿಶ್ವದಾಖಲೆಗಳನ್ನು ಸೃಷ್ಟಿಸಿತು. ಸರಯೂ ನದಿಯ ಘಾಟ್​ಗಳಲ್ಲಿ ಒಟ್ಟು 26 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸಲಾಯಿತು. ಡ್ರೋನ್ ಮೂಲಕ ದೀಪಗಳ ಸಂಖ್ಯೆಯನ್ನು ಪರಿಶೀಲಿಸಿದ ಗಿನ್ನೆಸ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್​ನ ಪ್ರತಿನಿಧಿಗಳು ಅತಿಹೆಚ್ಚು ಎಣ್ಣೆ ದೀಪ ಬೆಳಗುವ ಮೂಲಕ ಕಳೆದ ಬಾರಿ ಸ್ಥಾಪಿಸಿದ್ದ ಗಿನ್ನೆಸ್ ದಾಖಲೆಯನ್ನು ಮುರಿಯಲಾಗಿದೆ ಎಂದು ಘೋಷಿಸಿದರು. ಇದರೊಂದಿಗೆ 2,128 ಜನರು ಒಟ್ಟಿಗೆ ಆರತಿ ಬೆಳಗಿದ್ದೂ ಸಹ ದಾಖಲೆಗೆ ಸೇರ್ಪಡೆಯಾಯಿತು. ಲೇಸರ್ ಶೋ, ಡ್ರೋನ್ ಶೋಗಳು ಭಕ್ತರನ್ನು ಆಕರ್ಷಿಸಿದವು. 2025ರಲ್ಲೂ ಇದೇ ಮಾದರಿಯಲ್ಲಿ ದೀಪಾವಳಿ ಪರ್ವ ಹೊಸ ವೈಭವ ಮತ್ತು ಸಂಭ್ರಮವನ್ನು ಸೃಷ್ಟಿಸಿತ್ತು.

ಧ್ವಜಸ್ತಂಭದಲ್ಲಿ ರಾರಾಜಿಸಿದ ಧರ್ಮಧ್ವಜ

2025ರ ನವೆಂಬರ್ 25ರಂದು 161 ಅಡಿ ಎತ್ತರದ ಗೋಪುರದ ಮೇಲೆ 42 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಧರ್ಮಧ್ವಜವನ್ನು ಸ್ಥಾಪಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗ್ವತ್ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧರ್ಮ ಧ್ವಜಾರೋಹಣ ನೆರವೇರಿಸಿದರು. ದೇವಾಲಯದ 70 ಎಕರೆ ಸಂಕೀರ್ಣದಲ್ಲಿರುವ ಶೇಷವತಾರ ದೇವಾಲಯ, ಅನ್ನಪೂರ್ಣಾ ದೇವಾಲಯ, ಸಪ್ತ ಮಂಟಪ ಸೇರಿ ಎಲ್ಲ ದೇವಾಲಯಗಳಿಗೂ ಪ್ರಧಾನಿ ಭೇಟಿ ನೀಡಿ, ದರ್ಶನ ಪಡೆದರು. ಧ್ವಜ ಸ್ಥಾಪನೆಯ ಹಿನ್ನೆಲೆಯಲ್ಲಿ ನವೆಂಬರ್ 21ರಿಂದ 25ರವರೆಗೆ ವೈದಿಕ ಅನುಷ್ಠಾನ ಕಾರ್ಯಕ್ರಮಗಳು ನಡೆದವು. ಈ ಅನುಷ್ಠಾನದಲ್ಲಿ ಅಯೋಧ್ಯೆ, ಕಾಶಿ ಹಾಗೂ ದಕ್ಷಿಣ ಭಾರತದ 108 ವೇದ ವಿದ್ವಾಂಸರು ಪಾಲ್ಗೊಂಡಿದ್ದರು.

ಮಂದಿರದ ವೈಶಿಷ್ಟ್ಯ

ಆಕರ್ಷಕ ವಿನ್ಯಾಸ ಹಾಗೂ ತೇಜಸ್ಸಿ ಬಾಲರಾಮ ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ, 161 ಅಡಿ ಎತ್ತರದ ಸುತ್ತಳತೆ ಹೊಂದಿದೆ. 392 ಕಂಬಗಳ ಸಮೂಹದಿಂದ ತಲೆ ಎತ್ತಿರುವ ಮಂದಿರದಲ್ಲಿ, 44 ಬಾಗಿಲುಗಳಿವೆ. ಹಿಂದೂ ದೇವತೆ, ದೇವರ ಸುಂದರ ಕೆತ್ತನೆ, ವಿನ್ಯಾಸದ ಚಿತ್ರಣಗಳಿಂದ ಅಲಂಕರಿಸಲ್ಪಟ್ಟಿರುವ ಈ ದೇಗುಲದ ಕಂಬ, ಗೋಡೆಗಳು ಸೊಗಸಾದ ಕರಕುಶಲತೆಯನ್ನು ಸಾಕ್ಷೀಕರಿಸುತ್ತವೆ. ಮಂದಿರವನ್ನು ಪೂರ್ವ ಭಾಗದಿಂದ ಪ್ರವೇಶಿಸಬಹುದು. ಮುಖ್ಯದ್ವಾರಕ್ಕೆ ತೆರಳಲು 32 ಮೆಟ್ಟಿಲುಗಳಿವೆ. ಮಂದಿರದಲ್ಲಿ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನಾ ಮಂಟಪ ಸೇರಿ ಐದು ಸಭಾಂಗಣಗಳನ್ನು ನಿರ್ವಿುಸಲಾಗಿದೆ. ಮಂದಿರದ ಪಕ್ಕದಲ್ಲಿ, ಪ್ರಾಚೀನ ಕಾಲದ ಸೀತಾ ಕೂಪ್ ಎಂದು ಕರೆಯಲ್ಪಡುವ ಐತಿಹಾಸಿಕ ಬಾವಿಯೊಂದಿದೆ. ನೈಋತ್ಯ ಭಾಗ ಕುಬೇರ್ ಟಿಲಾದಲ್ಲಿ, ಶಿವನ ಪುರಾತನ ಮಂದಿರವನ್ನು ಪುನರ್ ಸ್ಥಾಪಿಸಲಾಗಿದೆ. ಜಟಾಯುವಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ರಾಮಭಕ್ತ ನರೇಂದ್ರ ಮೋದಿ

- 2020ರ ಆಗಸ್ಟ್ 5ರಂದು ಮಂದಿರ ನಿರ್ವಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದು ಪ್ರಧಾನಿ ನರೇಂದ್ರ ಮೋದಿ.
- 2022ರ ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ನಡೆಸಿಕೊಟ್ಟರು. ಪ್ರಾಣಪ್ರತಿಷ್ಠೆ ನಡೆಸಬೇಕಾದ ಹಿನ್ನೆಲೆಯಲ್ಲಿ ಮೋದಿಯವರು 11 ದಿನಗಳ ಉಪವಾಸ ಆಚರಿಸಿದ್ದರು. ಅಲ್ಲದೆ, ನೆಲದ ಮೇಲೆ ಮಲಗಿದ್ದರು. ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನಂತರ ಮುಖ್ಯವೇದಿಕೆಯಲ್ಲಿ ಗೋವಿಂದ ಗಿರಿ ಮಹಾರಾಜ್ ಅವರು ಮೋದಿಯವರಿಗೆ ಚರಣಾಮೃತವನ್ನು (ಧಾರ್ವಿುಕ ವಿಧಿಗಳಿಗೆ ಬಳಸುವ ಹಾಲಿನಲ್ಲಿ ಮಾಡಿದ ಸಿಹಿ ಪಾನೀಯ) ಕುಡಿಸಿ ಉಪವಾಸ ಪೂರ್ಣಗೊಳಿಸಿದರು.
- 2025ರ ನವೆಂಬರ್ 25ರಂದು ಧರ್ಮಧ್ವಜಾರೋಹಣ ಮಾಡುವ ಮೂಲಕ ಭಾವುಕರಾದರು.
- ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ 1ರಿಂದ 1.5 ಲಕ್ಷ ಜನರು ಭೇಟಿ ನೀಡುತ್ತಿದ್ದಾರೆ.
ಹಬ್ಬ, ಉತ್ಸವ, ಮಾಘಮೇಳದಂಥ ವಿಶೇಷ ಸಂದರ್ಭಗಳಲ್ಲಿ ದಿನಕ್ಕೆ 5-6 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. 2025ರ ಜನವರಿ- ಫೆಬ್ರವರಿಯಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಂತೂ ದಿನಕ್ಕೆ ಸರಾಸರಿ 10-12 ಲಕ್ಷ ಭಕ್ತರು ಭೇಟಿ ನೀಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net