‘ವೋಟ್ ಚೋರಿ’ ಆರೋಪದ ನಡುವೆ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ದೀಪಾವಳಿ ಔತಣ! 100ಕ್ಕೂ ಹೆಚ್ಚು ನಾಯಕರು ಭಾಗಿ ..Rahul gandhi

ದೇಶದಲ್ಲಿ ವೋಟ್ ಚೋರಿ ಆರೋಪದ ವಿಚಾರವಾಗಿ ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಸಂಘರ್ಷ ಮುಂದುವರಿದಿರುವ ಬೆನ್ನಲ್ಲೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರಿಗಾಗಿ ದೀಪಾವಳಿ ವಿಶೇಷ ಟೀ ಪಾರ್ಟಿ ಆಯೋಜಿಸಿದ್ದಾರೆ. ಶುಕ್ರವಾರ ನವದೆಹಲಿಯ ಸುನೆಹ್ರಿ ಬಾಗ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ 100ಕ್ಕೂ ಹೆಚ್ಚು ಪ್ರಮುಖ ನಾಯಕರು ಭಾಗವಹಿಸಿದ್ದರು.Rahul gandhi
ರಾಹುಲ್ ಗಾಂಧಿ ದೀಪಾವಳಿ ಔತಣ
ರಾಹುಲ್ ಗಾಂಧಿ ದೀಪಾವಳಿ ಔತಣWEB
Published on: 

ನವದೆಹಲಿ: ದೇಶದಲ್ಲಿ ‘ವೋಟ್ ಚೋರಿ’ ಆರೋಪದ ವಿಚಾರವಾಗಿ ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಸಂಘರ್ಷ ಮುಂದುವರಿದಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರಿಗಾಗಿ ದೀಪಾವಳಿ ಟೀ ಪಾರ್ಟಿ ಆಯೋಜಿಸಿದ್ದಾರೆ. ಶುಕ್ರವಾರ ನವದೆಹಲಿಯ ಸುನೆಹ್ರಿ ಬಾಗ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ 100ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು. ಪಕ್ಷದ ಪ್ರಮುಖ ನಾಯಕರು ಒಂದೆಡೆ ಸೇರಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ್ ರಮೇಶ್, ಸಚಿನ್ ಪೈಲಟ್, ಕುಮಾರಿ ಸೆಲ್ಜಾ ಸೇರಿದಂತೆ ಪಕ್ಷದ ಹಲವು ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಹೌದು, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದಿದ್ದು ನಿಜ!: ತುರ್ತು ಪರಿಸ್ಥಿತಿಯ ಕಹಿ ಸತ್ಯ ಒಪ್ಪಿಕೊಂಡ ಸೋನಿಯಾ ಗಾಂಧಿ | Sonia Gandhi

ಕಾರ್ಯಕ್ರಮದ ವೇಳೆ ರಾಹುಲ್ ಗಾಂಧಿ ಕೇವಲ ಒಂದೆಡೆ ಕುಳಿತುಕೊಳ್ಳದೆ ಪ್ರತಿಯೊಂದು ಮೇಜಿನ ಬಳಿಗೂ ತೆರಳಿ ನಾಯಕರೊಂದಿಗೆ ಆತ್ಮೀಯವಾಗಿ ಮಾತನಾಡಿದ್ದಾರೆ. ಮುಂಬರುವ ದೀಪಾವಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಹಾಸ್ಯಭರಿತ ಮಾತುಕತೆಯ ಮೂಲಕ ಸಮಯ ಕಳೆದಿದ್ದಾರೆ. ಪಕ್ಷದ ಹಿರಿಯ ನಾಯಕರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ರಾಜ್ಯಗಳ ಉಸ್ತುವಾರಿಗಳೊಂದಿಗೆ ಅವರು ಆತ್ಮೀಯವಾಗಿ ಬೆರೆತಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಅಥವಾ ಮುಂದಿನ ಹೋರಾಟದ ಕುರಿತು ಕಾರ್ಯತಂತ್ರ ರೂಪಿಸಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಆದರೆ, ಕಾಂಗ್ರೆಸ್ ಪಕ್ಷವು ‘ವೋಟ್ ಚೋರಿ’ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿರುವ ಸಮಯದಲ್ಲೇ ಈ ಸಮಾಗಮ ನಡೆದಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಪಕ್ಷದ ನಾಯಕರ ನಡುವೆ ಒಗ್ಗಟ್ಟು ಮತ್ತು ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಲಾಗಿದೆ.

ಚುನಾವಣಾ ಆಯೋಗದ ವಿರುದ್ಧ ಸಚಿನ್ ಪೈಲಟ್ ಅಸಮಾಧಾನ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಜವಾಬ್ದಾರಿ ಹೊಂದಿರುವವರೇ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ಹಲವು ಬಾರಿ ಸಾಕ್ಷ್ಯಾಧಾರಗಳನ್ನು ಮಂಡಿಸಿದ್ದಾರೆ. ಆದರೂ ಸಂಬಂಧಪಟ್ಟವರು ಸಮರ್ಪಕವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಪೈಲಟ್ ಹೇಳಿದ್ದಾರೆ.ಜ್ಞಾನೇಶ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ನೀಡಿರುವ ರಕ್ಷಣೆಯ ಬಗ್ಗೆಯೂ ಪ್ರಶ್ನೆ ಎತ್ತಿದ ಅವರು, ದೇಶದ 140 ಕೋಟಿ ಜನರಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಜೀವಿತಾವಧಿಯ ರಕ್ಷಣೆ ಏಕೆ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಆದರೆ, ರಾಹುಲ್ ಗಾಂಧಿ ಆಯೋಜಿಸಿದ್ದ ಟೀ ಪಾರ್ಟಿಯಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಅಮಿತ್ ಶಾ ವಿರುದ್ಧ ಪವನ್ ಖೇರಾ ವಾಗ್ದಾಳಿ

ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಟೀಕೆ ಮಾಡಿದ್ದಾರೆ. ಸಂಸತ್ತಿನ ಹಿಂದಿನ ಅಧಿವೇಶನದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಕುರಿತು ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಗೃಹ ಸಚಿವರು, ಇದೀಗ ಸಂಸತ್ತಿನಲ್ಲೇ ಚರ್ಚೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ಅವರ ಈ ನಿಲುವಿನಲ್ಲಿ ಸ್ಪಷ್ಟತೆಯಿಲ್ಲ ಎಂದು ಖೇರಾ ಆರೋಪಿಸಿದ್ದಾರೆ. ಈ ವಿಚಾರವಾಗಿ ಸಂಸತ್ತಿನಲ್ಲಿ ಮುಕ್ತ ಚರ್ಚೆ ನಡೆಯಲಿ, ದೇಶದ ಜನರು ಈ ಚರ್ಚೆಯನ್ನು ಕೇಳಲು ಬಯಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗ್ರಂಥಾಲಯದ ಪುಸ್ತಕಗಳಲ್ಲೇ ನಕಲಿ ಮಾಹಿತಿ! ತಮಿಳುನಾಡಿನಲ್ಲಿ ಭುಗಿಲೆದ್ದ ವಿವಾದ..Tamil Nadu Library Scam

‘ವೋಟ್ ಬಚಾವೋ, ದೇಶ ಬಚಾವೋ’ ರ್ಯಾಲಿ

ಇತ್ತೀಚೆಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟ ‘ವೋಟ್ ಬಚಾವೋ, ದೇಶ ಬಚಾವೋ’ ಹೆಸರಿನಲ್ಲಿ ಬೃಹತ್ ರ್ಯಾಲಿ ಆಯೋಜಿಸಿತ್ತು. ಚುನಾವಣಾ ಅಕ್ರಮಗಳು ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಈ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೂ ಒಂದು ದಿನ ಮೊದಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮೈತ್ರಿಕೂಟದ ನಾಯಕರು ಸಾರ್ವಜನಿಕವಾಗಿ ಮಹಾಭಿಯೋಗದ ರೀತಿಯ ಪ್ರತಿಭಟನೆ ನಡೆಸಿದ್ದರು.( ಏಜೇನ್ಸಿಸ್​)