

ನವದೆಹಲಿ: ಟಾಟಾ ಗ್ರೂಪ್ನಲ್ಲಿ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಧ್ಯೆ ಎಕ್ಸ್ನಲ್ಲಿ ವಾದ ವಿವಾದ ನಡೆಯುತ್ತಿದೆ. ರಾಹುಲ್ ಗಾಂಧಿಯವರು ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಸೀತಾರಾಮ ಎಂದಷ್ಟೇ ತಪ್ಪಾಗಿ ಬರೆದಿದ್ದು, ಬಿಜೆಪಿಯವರಿಂದ ಟೀಕೆಗೆ ಗುರಿಯಾಗಿತ್ತು.
ಬಿಜೆಪಿ ಬೆಂಬಲಿಗರ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಹುಲ್ ಗಾಂಧಿಯವರ ಪೋಸ್ಟ್ನಲ್ಲಿ ತಪ್ಪಾದ ಹೆಸರು ಉದ್ದೇಶಪೂರ್ವಕಾಗಿಯೇ ಮಾಡಿದ ಕಾಗುಣಿತ ದೋಷ ಎಂದು ಬಣ್ಣಿಸಿದೆ. ಇದನ್ನು ಟೈಪೋ ಮಾರ್ಕೆಟಿಂಗ್ ಎಂದು ಕರೆದಿದ್ದು, ಪೋಸ್ಟ್ ಹೆಚ್ಚಾಗಿ ರೀಚಾಗಲು ಮಾಡಿದ ತಂತ್ರ ಎಂದು ಹೇಳಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕಿ ಮತ್ತು ಐಟಿ ಸೆಲ್ ಮುಖ್ಯಸ್ಥೆ ಸುಪ್ರೀಯಾ ಶ್ರೀನೇಟ್, ಬಿಜೆಪಿಯ ಬಫೂನ್ಗಳು ಬಹಳ ಸುಲಭವಾಗಿ ಬಲೆಗೆ ಬೀಳುತ್ತಾರೆ ಎಂದಿರುವ ಅವರು, ಈ ಆಕ್ರೋಶವು ಕಾಂಗ್ರೆಸ್ ಸಂಸದರ ಟ್ವೀಟ್ ಅನ್ನು ಇನ್ನಷ್ಟು ಹೆಚ್ಚು ಜನರಿಗೆ ತಲುಪುವಂತೆ ಮಾಡಿದೆ ಎಂದು ಪ್ರತಿಪಾದಿಸಿದ್ದಾರೆ.
ಸಂವಹನ ಕ್ಷೇತ್ರದಲ್ಲಿ, ಉದ್ದೇಶಪೂರ್ವಕವಾಗಿ ಕಾಗುಣಿತ ತಪ್ಪು ಮಾಡುವುದು ಗಮನ ಸೆಳೆಯುವ ಒಂದು ತಂತ್ರವಾಗಿದೆ. ಇದನ್ನು 'ಟೈಪೋ ಮಾರ್ಕೆಟಿಂಗ್' ಎಂದು ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಸೀತಾರಾಮನ್ ಅವರು ಪದವನ್ನು ತಪ್ಪಾಗಿ ಬರೆದಿದ್ದಾರೆ ಎಂದು ತೀವ್ರ ಆತುರದಿಂದ ಎತ್ತಿ ತೋರಿಸುವ ಮೂಲಕ, ಟಾಟಾ ಕುರಿತಾದ ರಾಹುಲ್ ಗಾಂಧಿಯವರ ಅವರ ಟ್ವೀಟ್ ಅನ್ನು ಇನ್ನಷ್ಟು ಪ್ರಚುರಪಡಿಸಿದ್ದಕ್ಕಾಗಿ ಧನ್ಯವಾದಗಳು! ಎಂದು ವ್ಯಂಗ್ಯವಾಡಿದ್ದಾರೆ.
ಟಾಟಾ ಗ್ರೂಪ್ನಲ್ಲಿ ನಡೆಯುತ್ತಿರುವ ನಾಯಕತ್ವದ ವಿವಾದದ ನಡುವೆ ಸರ್ಕಾರವು ಕ್ರಿಮಿನಲ್ ರೀತಿಯಲ್ಲಿ ಟಾಟಾ ಸಂಸ್ಥೆಯನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಅವರು, ಟಾಟಾವನ್ನು ಕ್ರಿಮಿನಲ್ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ, ಮತ್ತು ಯಾವುದೇ ಉದ್ಯಮಿಗಳು ಇದರ ಬಗ್ಗೆ ಒಂದು ಮಾತನ್ನೂ ಹೇಳುವ ಧೈರ್ಯ ಮಾಡುವುದಿಲ್ಲ. ನೀವು ಇನ್ನೆಷ್ಟು ಕಾಲ ಮೌನವಾಗಿರುತ್ತೀರಿ? ಅವರು ನಿಮ್ಮನ್ನೇ ತಮ್ಮ ವಶಕ್ಕೆ ತೆಗೆದುಕೊಳ್ಳುವವರೆಗೂ ಕಾಯುತ್ತೀರಾ? ಭಾರತೀಯ ಉದ್ಯಮ ಕ್ಷೇತ್ರವು ಮೋದಿ ಮತ್ತು ಶಾ ಅವರ ಆಟದ ವಸ್ತುವಲ್ಲ. ನಿಮ್ಮಲ್ಲಿ ಧೈರ್ಯವಿಲ್ಲ, ಆದರೆ ನಮ್ಮಲ್ಲಿ ಧೈರ್ಯವಿದೆ. ಈ ಅಪರಾಧಗಳಿಗೆ ನ್ಯಾಯ ಸಿಗುವಂತೆ ನಾವು ಮಾಡುತ್ತೇವೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ನಿರ್ಮಲಾ ಸೀತಾರಾಮನ್ ಅವರು, ಅಪನಂಬಿಕೆ ಮತ್ತು ವಿಷತ್ವ ಹರಡಲು ಉದ್ಯಮಿಗಳನ್ನು ತಮ್ಮೊಂದಿಗೆ ಸೇರುವಂತೆ ಪ್ರಚೋದಿಸಲು ರಾಹುಲ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಮತ್ತು ಪ್ರತಿಯೊಂದು ವಿಷಯವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದ ಅವರು, ವಾಣಿಜ್ಯ ಮತ್ತು ಕಾನೂನು ಸಂಬಂಧಿತ ವಿಷಯಗಳನ್ನು ಸುಮ್ಮನೆ ಕ್ರಿಮಿನಲ್ ಎಂದು ಕರೆಯುವುದು ಸರಿಯಲ್ಲ ಎಂದಿದ್ದರು.
ನಿರ್ಮಲಾ ಸೀತಾರಾಮನ್ ಅವರ ಪೋಸ್ಟ್ ಅನ್ನು ರಿಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಆತ್ಮೀಯ ಶ್ರೀಮತಿ ಸೀತಾರಾಮ ಅವರೇ ಎಂದು ಬರೆದಿದ್ದರು.
ಯಾವ ಕಾನೂನು ಮತ್ತು ವಾಣಿಜ್ಯ ವಿಷಯಕ್ಕಾಗಿ ಟಾಟಾ ಟ್ರಸ್ಟ್ಸ್ ಮತ್ತು ಟಾಟಾ ಸನ್ಸ್ ಪ್ರತಿನಿಧಿಗಳು ಅಮಿತ್ ಶಾ ಅವರ ನಿವಾಸದಲ್ಲಿ ಹಾಜರಿರಬೇಕಾಯಿತು? ನಿಮ್ಮ ಆಪ್ತರಲ್ಲಿ ಮೊದಲನೆಯವರು ಈ ಆಟದಲ್ಲಿ ಯಾವಾಗ ಪ್ರವೇಶಿಸಲಿದ್ದಾರೆ ಮತ್ತು ಟಾಟಾ ಸಂಸ್ಥೆಯ ಯಾವ ಭಾಗಗಳು ಅವರಿಗೆ ಸಿಗಲಿವೆ ಎಂದು ಪ್ರಶ್ನಿಸಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ನಿಮ್ಮ ಆಪ್ತ ಬಳಗದ 3-4 ಮಂದಿಯನ್ನು ಹೊರತುಪಡಿಸಿ, ಭಾರತದ ಉಳಿದೆಲ್ಲಾ ಉದ್ಯಮಗಳಿಗೆ ನಿಮ್ಮೆಲ್ಲರ ಮೇಲೆ ಈಗಾಗಲೇ ತೀವ್ರ ಅಸಮಾಧಾನವಿದೆ. ಹೀಗಾಗಿ, ಅವರಲ್ಲಿ ಅಸಮಾಧಾನವನ್ನು ಕೆರಳಿಸಲು ಬೇರೆ ಯಾವುದೇ ಪ್ರಚೋದನೆಯ ಅಗತ್ಯವಿಲ್ಲ ಎಂದು ಹೇಳಿದ್ದರು (ಏಜೆನ್ಸೀಸ್).