ಚೀನಾ ಸೈನಿಕರು ಭಾರತದ ಗಡಿ ದಾಟಿದ್ದು ಅತಿಕ್ರಮಣವಲ್ಲ, ಇದೊಂದು ಸಾಮಾನ್ಯ ಗಡಿ ಉಲ್ಲಂಘನೆ: ಸಿಎಂ ಪೆಮಾ ಖಂಡು | CM Pema Khandu

ಅರುಣಾಚಲ ಪ್ರದೇಶದ ಭಾರತದ ಗಡಿಯಲ್ಲಿ ಚೀನಾ ಸೈನಿಕರು ಒಳನುಗ್ಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಪೆಮಾ ಖಂಡು, ಇಂತಹ ಘಟನೆಗಳನ್ನು ಒಳನುಸುಳುವಿಕೆ ಎಂದು ಕರೆಯಲಾಗದು, ಬದಲಾಗಿ ಇದೊಂದು ಗಡಿ ಉಲ್ಲಂಘನೆ ಎಂದು ಹೇಳಿದ್ದಾರೆ.
 ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು
ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು
Published on: 

ತವಾಂಗ್: ಅರುಣಾಚಲ ಪ್ರದೇಶದ ಭಾರತದ ಗಡಿಯಲ್ಲಿ ಚೀನಾ ಸೈನಿಕರು ಒಳನುಗ್ಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಪೆಮಾ ಖಂಡು, ಇಂತಹ ಘಟನೆಗಳನ್ನು ಒಳನುಸುಳುವಿಕೆ ಎಂದು ಕರೆಯಲಾಗದು, ಬದಲಾಗಿ ಇದೊಂದು ಗಡಿ ಉಲ್ಲಂಘನೆ ಎಂದು ಹೇಳಿದ್ದಾರೆ.

ತವಾಂಗ್​ನಲ್ಲಿ ಗುರುವಾರ(ಅ. 30) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚೀನಾ ಮೆಕ್‌ಮಹಾನ್ ರೇಖೆಯನ್ನು ಪರಿಗಣಿಸುವುದಿಲ್ಲ. ಅರುಣಾಚಲ ಪ್ರದೇಶವು ಟಿಬೆಟ್ ಮತ್ತು ಚೀನಾದೊಂದಿಗೆ 1,200 ಕಿ.ಮೀ ಉದ್ದದ ಸುದೀರ್ಘ ಗಡಿಯನ್ನು ಹಂಚಿಕೊಂಡಿದೆ. ನಮ್ಮ ಸೈನಿಕರು ಆ ಕಡೆಗೆ ಹೋಗುತ್ತಾರೆ, ಅವರ ಗಸ್ತು ತಂಡಗಳು ಕೆಲವೊಮ್ಮೆ ನಮ್ಮ ಕಡೆಗೆ ಬರುತ್ತವೆ. ಇದೊಂದು ಗಡಿ ಉಲ್ಲಂಘನೆ ಅಷ್ಟೇ, ಒಳನುಸುಳುವಿಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗಡಿ ಉಲ್ಲಂಘನೆ ಖಂಡಿತವಾಗಿ ನಡೆದಿದೆ ಎಂದಿರುವ ಅವರು, ಇದು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಹೊಸ ವಿಷಯವಲ್ಲ. ಅಲ್ಲದೆ, ಸದ್ಯ ಪರಿಸ್ಥಿತಿ ಸಹಜವಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿನ ಗಡಿಯು ನಿಖರವಾಗಿ ವ್ಯಾಖ್ಯಾನಿಸಲ್ಪಟ್ಟಿಲ್ಲ. ನಮ್ಮ ಸಶಸ್ತ್ರ ಪಡೆಗಳು ಗಡಿಯನ್ನು ಚೆನ್ನಾಗಿ ಕಾಯುತ್ತಿವೆ. ಕಳವಳಕಾರಿ ವಿಷಯವಲ್ಲ. ಇಂತಹ ಮುಖಾಮುಖಿ ಘಟನೆಗಳು ರಾಜ್ಯದ ಪ್ರವಾಸೋದ್ಯಮದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ತಿಳಿಸಿದ್ದಾರೆ.

Also Read
ಅನ್ಯ ರಾಜ್ಯಗಳ ಹಾಲಿನ​ ದರ ಎಷ್ಟಿದೆ ಹೇಳಿ? ಬೆಲೆ ಹೆಚ್ಚಳದ ಬಗ್ಗೆ ಸಚಿವರಾದ ಕೃಷ್ಣಭೈರೇಗೌಡ, ಲಕ್ಷ್ಮಣ ಸವದಿ ಸ್ಪಷ್ಟನೆ
 ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು

ಇದೇ ವೇಳೆ ಮಾತನಾಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಇದು ನರೇಂದ್ರ ಮೋದಿಯವರ ಭಾರತ. ಗಡಿಗಳು ಸುರಕ್ಷಿತವಾಗಿವೆ ಎಂದು ಖಚಿತವಾಗಿ ನಂಬಬಹುದು. ಆತಂಕಪಡುವಂತಹ ವಿಷಯವೇನೂ ಇಲ್ಲ. ದುರುದ್ದೇಶದಿಂದ ಸೃಷ್ಟಿಸಲಾಗುತ್ತಿರುವ ಇಂತಹ ಸುಳ್ಳು ನಿರೂಪಣೆಗಳನ್ನು ತಗ್ಗಿಸಲು ನಾವೆಲ್ಲರೂ ನಮ್ಮಿಂದಾದ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದ್ದಾರೆ.

ಇತ್ತೀಚೆಗೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರು, ಅಲ್ವಾರ್‌ನಲ್ಲಿ ಅರುಣಾಚಲ ಪ್ರದೇಶದ ಹಲವಾರು ಸ್ಥಳಗಳಲ್ಲಿ ಭಾರತ ಮತ್ತು ಚೀನಾದ ಸೈನಿಕರು ಮುಖಾಮುಖಿಯಾಗಿದ್ದು, ಇನ್ನೂ ಕೆಲವು ಕಡೆ ಮುಖಾಮುಖಿ ಮುಂದುವರೆದಿದೆ ಎಂದು ಹೇಳಿದ್ದರು (ಏಜೆನ್ಸೀಸ್).