

ನವದೆಹಲಿ: ಎಸ್‌ಐಆರ್ (SIR) ವಿಷಯದಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ, ಅವರು ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಅವಲಂಬಿಸಿ ರಾಜಕೀಯ ನಡೆಸುವ ವಂಚಕ ಮತ್ತು ಅನರ್ಹ ರಾಜಕಾರಣಿ ಎಂದು ಕರೆದಿದೆ.
ಈ ಕುರಿತು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ಹಿರಿಯ ನಾಯಕ ರಾಜೀವ್ ಚಂದ್ರಶೇಖರ್, ರಾಹುಲ್ ಗಾಂಧಿ ಅವರು ಜಾತ್ಯತೀತತೆಯ ರಕ್ಷಕರೂ ಅಲ್ಲ, ಸಂವಿಧಾನದ ರಕ್ಷಕರೂ ಅಲ್ಲ. ಅವರು ತಮ್ಮ ಸ್ವಂತ ಕುಟುಂಬದ ಹಿತಾಸಕ್ತಿಯ ರಕ್ಷಕರು ಎಂದು ಹರಿಹಾಯ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು 'ದೇಶದ್ರೋಹಿ' ಎಂದು ಕರೆದಿರುವುದು, ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕೂಡಿದ ಅವರ ನಕಲಿ ಮತ್ತು ಸುಳ್ಳಿನ ರಾಜಕೀಯದ ಪರಮ ನಿದರ್ಶನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಫಾರ್ಮ್ 6 ಕಾನೂನು ಬಾಹಿರ ಬದಲಾವಣೆಗೆ ಆದೇಶಿಸಿದ್ಯಾರು ಎಂಬ ರಾಹುಲ್ ಗಾಂಧಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಭಾರತೀಯ ರಾಜಕೀಯದಲ್ಲಿ ಒಬ್ಬ ಪ್ರಮುಖ ವಂಚಕ. ಯಾವುದೇ ರಚನಾತ್ಮಕ ಕಾರ್ಯಸೂಚಿಯಿಲ್ಲದೆ ಸುಳ್ಳು ಮತ್ತು ತಪ್ಪು ಮಾಹಿತಿ ಅವಲಂಬಿಸಿ ರಾಜಕೀಯ ನಡೆಸುವ ನೈಜತೆಯಿಲ್ಲದ ರಾಜಕಾರಣಿ ಎಂದು ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ತಪ್ಪು ಮಾಹಿತಿ ಮತ್ತು ಸುಳ್ಳನ್ನು ಹರಡುವ ಚಾಳಿ ಹೊಂದಿದ್ದಾರೆ. ಗೊಬೆಲ್ಸ್ ಸಿದ್ದಾಂತವನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಇವಿಎಂಗಳನ್ನು ವ್ಯವಸ್ಥಿತವಾಗಿ ಹ್ಯಾಕ್ ಮಾಡಲಾಗಿದೆ ಎಂದರು. ಆದರೆ ಅದು ತಪ್ಪು ಎಂದು ಸಾಬೀತಾಯಿತು. ಪ್ರಜಾಪ್ರಭುತ್ವವನ್ನು ಕದಿಯಲಾಗುತ್ತಿದೆ ಎಂದರು. ಅದು ಪ್ಪು ಎಂದು ಪದೇ ಪದೇ ಸಾಬೀತಾಗಿದೆ ಎಂದಿದ್ದಾರೆ.
ಇನ್ನೂ ಎಕ್ಸ್ನಲ್ಲಿ ರಾಹುಲ್ ಗಾಂಧಿ, ಚುನಾವಣಾ ಆಯೋಗದ ಆಯುಕ್ತರೇ ಹೇಳಿರುವಂತೆ, ಆನ್‌ಲೈನ್ 'ಫಾರ್ಮ್ 6' ಅನ್ನು ಅಕ್ರಮವಾಗಿ ಬದಲಾಯಿಸಲಾಗಿದೆ. ಆ ಬದಲಾವಣೆಯನ್ನು ಮಾಡುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ಗೆ ಚುನಾವಣಾ ಆಯೋಗದ ಯಾರಾದರೂ ಆದೇಶ ನೀಡಿದ್ದರೇ? ಅಥವಾ ಬದಲಾವಣೆಯನ್ನು ಮಾಡಲು ಆ ಐಟಿ ಕಂಪನಿಯ ಮೇಲೆ ಒತ್ತಡ ಹೇರಲಾಗಿತ್ತೇ ಎಂದು ಪ್ರಶ್ನಿಸಿದ್ದಾರೆ (ಏಜೆನ್ಸೀಸ್).