ಹೈದರಾಬಾದ್: ಹಾಸ್ಟೆಲ್ನಿಂದ ಹೊರಹೋಗಲು ಹಿಂಬಾಗಿಲಿನ ಮೂಲಕ ತೆರಳಲು ಯತ್ನಿಸಿದ ಇಬ್ಬರು ಬಾಲಕಿಯರಿಗೆ ವಿದ್ಯುತ್ ತಂತಿ ಮಾರಕವಾಗಿ ಪರಿಣಮಿಸಿದೆ. ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿ 11 ವರ್ಷದ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಹೈದರಾಬಾದ್ನ ಮುಷೀರಾಬಾದ್ ಪ್ರದೇಶದಲ್ಲಿರುವ ಮಕ್ಕಳ ವಸತಿ ಕೇಂದ್ರದಲ್ಲಿ ನಡೆದ ಈ ದುರಂತ ಆತಂಕ ಮೂಡಿಸಿದೆ.
ಮೃತ ಬಾಲಕಿಯನ್ನು ರೆಬೆಕ್ಕಾ ಎಂದು ಗುರುತಿಸಲಾಗಿದೆ. ಈಕೆ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದು, ನೈಟ್ ಏಂಜೆಲ್ ಹೋಮ್ ಎಂಬ ಮಕ್ಕಳ ವಸತಿ ಕೇಂದ್ರದಲ್ಲಿ ವಾಸವಾಗಿದ್ದಳು. ಗಾಯಗೊಂಡ ವಿದ್ಯಾರ್ಥಿನಿ ನಂದಿನಿ ಎಂಬಾಕೆಯ ಕೈಗಳಿಗೆ ತೀವ್ರ ಗಾಯಗಳಾಗಿವೆ.
ಪೊಲೀಸರ ಪ್ರಕಾರ, ಇಬ್ಬರು ಬಾಲಕಿಯರು ವಸತಿ ಕೇಂದ್ರದ ಹಿಂಭಾಗದಲ್ಲಿರುವ ಗೇಟ್ ಮೂಲಕ ಹೊರಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಗೇಟ್ ಸಮೀಪವಿದ್ದ ಹೈವೋಲ್ಟೇಜ್ ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಬಂದಿದ್ದಾರೆ. ಕಬ್ಬಿಣದ ವಸ್ತುವಿನ ಮೂಲಕ ವಿದ್ಯುತ್ ಪ್ರವಹಿಸಿದ್ದರಿಂದ ರೆಬೆಕ್ಕಾಗೆ ತೀವ್ರ ವಿದ್ಯುತ್ ಆಘಾತ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂದಿನಿಯ ಕೈಗಳಿಗೂ ಗಂಭೀರ ಗಾಯಗಳಾಗಿದ್ದು, ಮತ್ತೊಬ್ಬ ಬಾಲಕಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾಳೆ.
ಘಟನೆ ತಿಳಿಯುತ್ತಿದ್ದಂತೆ ವಸತಿ ಕೇಂದ್ರದ ನಿರ್ವಹಣಾಧಿಕಾರಿ ಮುಷೀರಾಬಾದ್ ಪೊಲೀಸರಿಗೆ ಮಾಹಿತಿ ನೀಡಿ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಗೆ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗಿದೆ.
ಮಕ್ಕಳ ವಸತಿ ಕೇಂದ್ರದ ಹಿಂಭಾಗದಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳು ಇದ್ದಿದ್ದು, ಸೂಕ್ತ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿತ್ತೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಬಾಲಕಿಯರು ಹೊರಹೋಗಲು ಪ್ರಯತ್ನಿಸಿದ ಸಂದರ್ಭ, ಗೇಟ್ ಬಳಿ ವಿದ್ಯುತ್ ತಂತಿಗಳ ಅಪಾಯ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಯಾರ ನಿರ್ಲಕ್ಷ್ಯ ಕಾರಣ ಎಂಬುದು ತನಿಖೆಯ ಬಳಿಕ ತಿಳಿದುಬರಬೇಕಿದೆ.