ಮುಂಬೈ : ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಿರುಕುಳ ನೀಡಿ ಪರಾರಿಯಾಗಿದ್ದ ವ್ಯಕ್ತಿ, ತಪ್ಪಿಸಿಕೊಳ್ಳಲು ಸಾರ್ವಜನಿಕ ಶೌಚಾಲಯದಲ್ಲಿ ಅಡಗಿದ್ದರೂ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮುಂಬೈನ ಅಸಲ್ಫಾ ಪ್ರದೇಶದಲ್ಲಿ ನಡೆದ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದ್ದು, 31 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಸಕಿನಾಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. 39 ವರ್ಷದ ಮಹಿಳೆಯೊಬ್ಬರು ಮನೆಯ ಸಮೀಪದ ಅಂಗಡಿಯಿಂದ ಮಸಾಲೆ ಪದಾರ್ಥಗಳನ್ನು ಖರೀದಿಸಿ ವಾಪಸ್ ಬರುತ್ತಿದ್ದಾಗ, ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಆಕೆಗೆ ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಆತ ಸ್ಥಳದಿಂದ ತಕ್ಷಣ ಪರಾರಿಯಾಗಿದ್ದಾನೆ.
ಸಂತ್ರಸ್ತ ಮಹಿಳೆ ಗೃಹಿಣಿಯಾಗಿದ್ದು, ಜುಹುವಿನ ಕಾಲೇಜೊಂದರಲ್ಲಿ ಮೊದಲ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಘಟನೆ ನಡೆದ ಬಳಿಕ ಆಕೆಯ ಸ್ನೇಹಿತ ಶರದ್ ಎಚ್. ಏನಾಯಿತು ಎಂದು ವಿಚಾರಿಸಿದ್ದು, ಮಹಿಳೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಇಬ್ಬರೂ ಆರೋಪಿಯನ್ನು ಹುಡುಕಲು ಮುಂದಾಗಿದ್ದಾರೆ. ಈ ವೇಳೆ ಧೋಬಿಘಾಟ್ ಪ್ರದೇಶದ ಸಾರ್ವಜನಿಕ ಶೌಚಾಲಯದಲ್ಲಿ ಅಡಗಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ : ತಾಯ್ತನದ ಸಂಭ್ರಮದಲ್ಲಿ ನಟಿ ಸಮಂತಾ: ಪತಿ ರಾಜ್ ನಿಡಿಮೋರು ಜತೆ ವಿಶೇಷ ಪೂಜೆ | Samantha Ruth Prabhu
ಆರೋಪಿಯನ್ನು ಕಂಡ ಸ್ಥಳೀಯರು ಜಮಾಯಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆ ಮಹಿಳೆಯ ಅತ್ತಿಗೆ ಪೊಲೀಸರ ಸಹಾಯವಾಣಿ 100ಕ್ಕೆ ಕರೆ ಮಾಡಿದ್ದು, ಸಕಿನಾಕಾ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪಿನಿಂದ ಆರೋಪಿಯನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು 31 ವರ್ಷದ ಸಿಕಂದರ್ ಯಾದವ್ ಎಂದು ಗುರುತಿಸಲಾಗಿದೆ. ನಿರುದ್ಯೋಗಿಯಾಗಿರುವ ಈತ ಸಂತ್ರಸ್ತ ಮಹಿಳೆ ವಾಸಿಸುವ ಪ್ರದೇಶದಲ್ಲೇ ನೆಲೆಸಿದ್ದ ಎನ್ನಲಾಗಿದೆ. ಮಹಿಳೆ ಮನೆಯಿಂದ ಹೊರಬರುವುದನ್ನು ಗಮನಿಸಿ, ಆಕೆಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಸ್ಥಳದಲ್ಲಿ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75(1)(i) ಅಡಿಯಲ್ಲಿ ಅನಪೇಕ್ಷಿತ ಲೈಂಗಿಕ ಉದ್ದೇಶದ ಸ್ಪರ್ಶ ಮತ್ತು ವರ್ತನೆಗೆ ಸಂಬಂಧಿಸಿದ ಆರೋಪ ದಾಖಲಿಸಲಾಗಿದೆ. ಆರೋಪಿ ಸದ್ಯ ಪೊಲೀಸ್ ವಶದಲ್ಲಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.