ಕ್ವಾಡ್ ಶೃಂಗಸಭೆ: ಚೀನಾ ದರ್ಪಕ್ಕೆ ಸೆಡ್ಡು ಹೊಡೆದ ಭಾರತ! ಇಂಡೋ-ಪೆಸಿಫಿಕ್ ಜಾಗತಿಕ ಬೆಳವಣಿಗೆಯ ಇಂಜಿನ್ ಆಗಿರಬೇಕು ಎಂದು ಡ್ರ್ಯಾಗನ್​ಗೆ ಜೈಶಂಕರ್ ವಾರ್ನಿಂಗ್! Jaishankar

ಕ್ವಾಡ್ ಶೃಂಗಸಭೆ: ಚೀನಾ ದರ್ಪಕ್ಕೆ ಸೆಡ್ಡು ಹೊಡೆದ ಭಾರತ! ಹಿಂದೂ-ಪೆಸಿಫಿಕ್ ಜಾಗತಿಕ ಬೆಳವಣಿಗೆಯ ಇಂಜಿನ್ ಆಗಿರಬೇಕು ಎಂದು ಡ್ರ್ಯಾಗನ್​ಗೆ ಜೈಶಂಕರ್ ವಾರ್ನಿಂಗ್!
ಕ್ವಾಡ್ ಶೃಂಗಸಭೆ: ಚೀನಾ ದರ್ಪಕ್ಕೆ ಸೆಡ್ಡು ಹೊಡೆದ ಭಾರತ! ಹಿಂದೂ-ಪೆಸಿಫಿಕ್ ಜಾಗತಿಕ ಬೆಳವಣಿಗೆಯ ಇಂಜಿನ್ ಆಗಿರಬೇಕು ಎಂದು ಡ್ರ್ಯಾಗನ್​ಗೆ ಜೈಶಂಕರ್ ವಾರ್ನಿಂಗ್!
Published on
ನವದೆಹಲಿ: ಜಾಗತಿಕ ಆರ್ಥಿಕತೆ ಮತ್ತು ಭದ್ರತೆಯ ಪ್ರಮುಖ ಕೇಂದ್ರಬಿಂದುವಾಗಿರುವ ಹಿಂದೂ-ಪೆಸಿಫಿಕ್ ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಮಿಲಿಟರಿ ದರ್ಪ ಹಾಗೂ ವಿಸ್ತರಣಾವಾದಿ ನೀತಿಗೆ ಜಾಗತಿಕ ಮಹಾಶಕ್ತಿಗಳು ದೆಹಲಿ ಮಣ್ಣಿನಲ್ಲಿ ನಿಂತು ತಿರುಗೇಟು ನೀಡಿವೆ. ಭಾರತದ ಆತಿಥ್ಯದಲ್ಲಿ ಮಂಗಳವಾರ (ಮೇ,26) ನಡೆದ ಅತ್ಯಂತ ನಿರ್ಣಾಯಕ ಕ್ವಾಡ್ ಒಕ್ಕೂಟದ ವಿದೇಶಾಂಗ ಸಚಿವರ ಹೈ-ಲೆವೆಲ್ ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್(Jaishankar), ಹಿಂದೂ-ಪೆಸಿಫಿಕ್ ವಲಯವು ಜಾಗತಿಕ ಪ್ರಗತಿ ಮತ್ತು ಸ್ಥಿರತೆಯ ಪ್ರಮುಖ ಚಾಲನಾ ಶಕ್ತಿಯಾಗಿ ಮುಂದುವರಿಯಬೇಕು ಎಂದು ಡ್ರ್ಯಾಗನ್ ರಾಷ್ಟ್ರ ಚೀನಾಕ್ಕೆ ನೇರ ಸಂದೇಶ ರವಾನಿಸಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ನೇತೃತ್ವದಲ್ಲಿ ನಡೆದ ಈ ಐತಿಹಾಸಿಕ ಸಭೆಯಲ್ಲಿ ಅಮೆರಿಕದ ನೂತನ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಮತ್ತು ಜಪಾನ್‌ನ ವಿದೇಶಾಂಗ ಸಚಿವ ತೋಶಿಮಿತ್ಸು ಮೊಟೆಗಿ ಭಾಗವಹಿಸಿದ್ದರು. ಹಿಂದೂ-ಪೆಸಿಫಿಕ್ ಮಹಾಸಾಗರ ವಲಯದಲ್ಲಿ ಚೀನಾದ ಯುದ್ಧ ನೌಕೆಗಳು ಹಾಗೂ ಕಡಲ ಸೇನೆಯ ಅನಗತ್ಯ ಹಸ್ತಕ್ಷೇಪದ ವಿರುದ್ಧ ನಾಲ್ಕೂ ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದೇ ವೇದಿಕೆಯಲ್ಲಿ ಕಠಿಣ ನಿಲುವು ತಳೆದಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

"ಸರಬರಾಜು ಜಾಲದ ಮೇಲೆ ಏಕಸ್ವಾಮ್ಯ ಒಪ್ಪಲ್ಲ!: ಜೈಶಂಕರ್ ಖಡಕ್ ಮಾತು

ಚೀನಾದ ಹೆಸರೆತ್ತದೆ ಅದರ ಆರ್ಥಿಕ ಮತ್ತು ಕಡಲ ದಬ್ಬಾಳಿಕೆಯನ್ನು ತರಾಟೆಗೆ ತೆಗೆದುಕೊಂಡ ಜೈಶಂಕರ್, ನಮ್ಮ ಸಂಪೂರ್ಣ ಗಮನ ಇರುವುದು ಕ್ವಾಡ್ ಒಕ್ಕೂಟದ ನಿರ್ದಿಷ್ಟ ಮಿತಿಯಾದ ಹಿಂದೂ-ಪೆಸಿಫಿಕ್ ವಲಯದ ಮೇಲೆಯೇ ಆಗಿದೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಜಾಗತಿಕ ಸರಬರಾಜು ಜಾಲದ ಸ್ಥಿತಿಸ್ಥಾಪಕತ್ವ, ಕಡಲ ಸಾರಿಗೆ ಸಂಪರ್ಕದ ಅಡೆತಡೆಗಳು, ಉತ್ಪಾದನೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕೇಂದ್ರೀಕರಣ ಹಾಗೂ ಮೂಲಸೌಕರ್ಯಗಳ ಕೊರತೆಯನ್ನು ನಾವು ತುರ್ತಾಗಿ ಬಗೆಹರಿಸಬೇಕಾಗಿದೆ. ಈ ಸವಾಲುಗಳನ್ನು ಎದುರಿಸಲು ನಮಗೆ ಪಾರದರ್ಶಕ ಮತ್ತು ನಂಬಿಕಸ್ಥ ಜಾಗತಿಕ ಪಾಲುದಾರಿಕೆ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಮುಂದುವರಿದು ಮಾತನಾಡಿದ ಜೈಶಂಕರ್, ಕಡಲ ತಟದ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಬಹುತ್ವದ ಸಮಾಜವಾಗಿ ಮತ್ತು ಮುಕ್ತ ಮಾರುಕಟ್ಟೆ ಆರ್ಥಿಕತೆಯ ದೇಶಗಳಾಗಿ, ಮುಕ್ತ ಹಾಗೂ ಸುರಕ್ಷಿತ ಹಿಂದೂ-ಪೆಸಿಫಿಕ್ ವಲಯವನ್ನು ಕಾಪಾಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಈ ಪ್ರದೇಶದಲ್ಲಿ ವ್ಯೂಹಾತ್ಮಕ ನಂಬಿಕೆಯನ್ನು ಹೆಚ್ಚಿಸುವುದು ಮತ್ತು ಕಡಲ ಭದ್ರತೆಯನ್ನು ಬಲಪಡಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.

ಭಾರತದ ಹೆಜ್ಜೆಗೆ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಸಾಥ್!

ಸಭೆಯಲ್ಲಿ ಭಾಗವಹಿಸಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಭಾರತದ ನಿಲುವನ್ನು ಸಂಪೂರ್ಣವಾಗಿ ಬೆಂಬಲಿಸಿದರು. ವಿಶ್ವದ ಇತ್ತೀಚಿನ ಬಿಕ್ಕಟ್ಟುಗಳು ಹಾಗೂ ಕಡಲ ಮಾರ್ಗಗಳ ಮೇಲಿನ ದಾಳಿಗಳನ್ನು ಗಮನಿಸಿದರೆ ಕ್ವಾಡ್ ಒಕ್ಕೂಟದ ಪ್ರಸ್ತುತತೆ ಜಗತ್ತಿಗೆ ಇನ್ನಷ್ಟು ಹೆಚ್ಚಾಗಿದೆ. ಇಂಧನ ಭದ್ರತೆ, ಮುಕ್ತ ಕಡಲ ಸಂಚಾರದ ಸ್ವಾತಂತ್ರ್ಯ ಮತ್ತು ನಿರ್ಣಾಯಕ ಖನಿಜಗಳ ಪೂರೈಕೆಯಂತಹ ಪ್ರಮುಖ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸಲು ಕ್ವಾಡ್ ಅತ್ಯಂತ ಶಕ್ತಿಶಾಲಿ ವೇದಿಕೆಯಾಗಿದೆ ಎಂದು ರೂಬಿಯೋ ಬಣ್ಣಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್, ಕ್ವಾಡ್ ಒಕ್ಕೂಟವನ್ನು ಜಾಗತಿಕವಾಗಿ ಅತ್ಯಂತ ಬಲಿಷ್ಠ ಮತ್ತು ಪರಿಣಾಮಕಾರಿ ಶಕ್ತಿಯನ್ನಾಗಿ ಮಾಡಲು ಆಸ್ಟ್ರೇಲಿಯಾ ಬದ್ಧವಾಗಿದೆ. ನಾವು ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಹಿಂದೂ-ಪೆಸಿಫಿಕ್ ವಲಯವನ್ನು ಬಯಸುತ್ತೇವೆ ಎಂದು ಪ್ರಕಟಿಸಿದರು. ಜಪಾನ್ ವಿದೇಶಾಂಗ ಸಚಿವ ತೋಶಿಮಿತ್ಸು ಮೊಟೆಗಿ ಕೂಡ ಕಡಲ ಗಡಿ ರಕ್ಷಣೆಗೆ ಜಂಟಿ ಕಾರ್ಯಾಚರಣೆಯ ಅಗತ್ಯತೆಯನ್ನು ಒತ್ತಿಹೇಳಿದರು.

ಡ್ರ್ಯಾಗನ್ ರಾಷ್ಟ್ರಕ್ಕೆ ನಡುಕ ಹುಟ್ಟಿಸಿದ ದೆಹಲಿ ಘೋಷಣೆ!

ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಚೀನಾ ಸಮುದ್ರ ಹಾಗೂ ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಸೈನಿಕ ನೆಲೆಯನ್ನು ವಿಸ್ತರಿಸುತ್ತಾ ಸಣ್ಣ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದಿರುವ ಕ್ವಾಡ್ ವಿದೇಶಾಂಗ ಸಚಿವರ ಸಭೆಯು ಕೇವಲ ಚರ್ಚೆಗೆ ಸೀಮಿತವಾಗದೆ, ಆರ್ಥಿಕ ಅವಕಾಶಗಳ ವಿಸ್ತರಣೆ ಮತ್ತು ಜಂಟಿ ಕಡಲ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ.
ಹೊಸ ದೆಹಲಿಯ ಈ ಮಹಾಸಂಗಮವು ಜಾಗತಿಕ ರಾಜಕಾರಣದಲ್ಲಿ ಭಾರತದ ನಾಯಕತ್ವ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ದೃಢ ರಾಜತಾಂತ್ರಿಕತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಇಡೀ ವಿಶ್ವದ ಗಮನ ಈಗ ದೆಹಲಿ ಘೋಷಣೆಯ ಮುಂದಿನ ಆಕ್ಷನ್ ಪ್ಲಾನ್ ಮೇಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net