ನುಸುಳುಕೋರರೇನು ನಮ್ಮ ಅಳಿಯಂದಿರಾ? ಸರ್ಕಾರ ಆಕ್ಷನ್ ತಗೋಳೋ ಮುನ್ನವೇ ಬಂಗಾಳ ಬಿಟ್ಟು ಓಡಿ ಹೋಗಿ! ಸಿಎಂ ಸುವೇಂದು ಡೆಡ್ಲಿ ವಾರ್ನಿಂಗ್​ | Suvendu Adhikari

ನುಸುಳುಕೋರರೇನು ನಮ್ಮ ಅಳಿಯಂದಿರಾ? ಸರ್ಕಾರ ಆಕ್ಷನ್ ತಗೋಳೋ ಮುನ್ನವೇ ಬಂಗಾಳ ಬಿಟ್ಟು ಓಡಿ ಹೋಗಿ! ಸಿಎಂ ಸುವೇಂದು ಡೆಡ್ಲಿ ವಾರ್ನಿಂಗ್
ನುಸುಳುಕೋರರೇನು ನಮ್ಮ ಅಳಿಯಂದಿರಾ? ಸರ್ಕಾರ ಆಕ್ಷನ್ ತಗೋಳೋ ಮುನ್ನವೇ ಬಂಗಾಳ ಬಿಟ್ಟು ಓಡಿ ಹೋಗಿ! ಸಿಎಂ ಸುವೇಂದು ಡೆಡ್ಲಿ ವಾರ್ನಿಂಗ್
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಣ್ಣಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ನುಸುಳುಕೋರರೇ, ಸರ್ಕಾರ ಕಾನೂನು ಅಸ್ತ್ರ ಪ್ರಯೋಗಿಸುವ ಮುನ್ನವೇ ನೀವಾಗಿಯೇ ಗಡಿ ದಾಟಿ ಓಡಿ ಹೋಗಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ(Suvendu Adhikari) ಅವರು ಅಕ್ರಮ ವಲಸಿಗರಿಗೆ ಗಡೀಪಾರಿನ ಅಂತಿಮ ಎಚ್ಚರಿಕೆಯನ್ನು ನೀಡಿದ್ದಾರೆ.
ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಾಗಳ ವಿರುದ್ಧ ಆಡಳಿತ ಯಂತ್ರ ಹಿಂದೆಂದೂ ಕಾಣದ ರೀತಿಯಲ್ಲಿ ಮುಗಿಬಿದ್ದಿದೆ. ಈ ಕುರಿತು ಮಂಗಳವಾರ (ಮೇ,26) ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸುವೇಂದು ಅಧಿಕಾರಿ, ನುಸುಳುಕೋರರ ವಿರುದ್ಧ ಗುಡುಗಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ ರಾಜ್ಯಾದ್ಯಂತ ಡಿಟೆಕ್ಟ್, ಡಿಲೀಟ್ ಮತ್ತು ಡಿಪೋರ್ಟ್ ಎಂಬ ತ್ರಿಸೂತ್ರ ನೀತಿಯನ್ನು ಗೃಹ ಇಲಾಖೆ ಜಾರಿಗೆ ತಂದಿರುವುದಾಗಿ ಪ್ರಕಟಿಸಿದ್ದಾರೆ.

ಅವರನ್ನು ಜೈಲಿನಲ್ಲಿಟ್ಟು ಸಾಕೋಕೆ ನುಸುಳುಕೋರರೇನು ನಮ್ಮ ಅಳಿಯಂದಿರಾ?

ತಮ್ಮ ಆಡಳಿತಾತ್ಮಕ ಶೈಲಿಯಲ್ಲಿ ಕಠಿಣ ನಿರ್ಧಾರ ಕೈಗೊಂಡಿರುವ ಸಿಎಂ ಸುವೇಂದು ಅಧಿಕಾರಿ, ಅಕ್ರಮವಾಗಿ ಸಿಕ್ಕಿಬೀಳುವ ಬಾಂಗ್ಲಾದೇಶಿ ಪ್ರಜೆಗಳನ್ನು ಯಾವುದೇ ಕಾರಣಕ್ಕೂ ಜೈಲಿಗೆ ಕಳುಹಿಸದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ನಾವು ಅವರನ್ನು ಜೈಲಿನಲ್ಲಿಟ್ಟು ಭಾರತದ ಸಂಪನ್ಮೂಲಗಳನ್ನು ಹಾಗೂ ತೆರಿಗೆದಾರರ ಹಣವನ್ನು ಏಕೆ ಪೋಲು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಈ ಅಕ್ರಮ ನುಸುಳುಕೋರರೇನು ನಮ್ಮ ದೇಶದ ಅಳಿಯಂದಿರಾ ಅವರಿಗೆ ನಾವು ಆತಿಥ್ಯ ನೀಡಲು ಎಂದು ಗುಡುಗಿದ್ದಾರೆ. ಅಲ್ಲದೆ, ನೀವಾಗಿಯೇ ಮರ್ಯಾದೆಯಿಂದ ದೇಶ ಬಿಟ್ಟು ತೊಲಗಿ, ಇಲ್ಲದಿದ್ದರೆ ಸರ್ಕಾರ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸುವೇಂದು ವಾರ್ನಿಂಗ್​ ನೀಡಿದ್ದಾರೆ.
ಇದೇ ವೇಳೆ, ಈ ಕಾರ್ಯಾಚರಣೆಯು ಯಾವುದೇ ಹೊಸ ಕಾನೂನಿನ ಅಡಿಯಲ್ಲಿ ನಡೆಯುತ್ತಿಲ್ಲ, ಬದಲಿಗೆ ದೇಶದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ವಿದೇಶಿಗರ ಕಾಯ್ದೆ ಅಡಿಯಲ್ಲೇ ಈ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ದೇಶದ ನಾಗರಿಕರನ್ನು ಮರಳಿ ಸ್ವೀಕರಿಸಲು ಬಾಂಗ್ಲಾದೇಶ ಸರ್ಕಾರ ಈಗಾಗಲೇ ಸಮ್ಮತಿಸಿದೆ ಎಂದೂ ಸುವೇಂದು ತಿಳಿಸಿದ್ದಾರೆ.

ಗಡಿ ಭಾಗದಲ್ಲಿ ಸೃಷ್ಟಿಯಾದ ನೂಕುನುಗ್ಗಲು!; ಕಣ್ಣೀರಿಟ್ಟ ವಲಸಿಗರು

ಮುಖ್ಯಮಂತ್ರಿಗಳ ಈ ಭೀಕರ ಎಚ್ಚರಿಕೆಯ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಹಕಿಂಪುರ್ ಗಡಿ ಪ್ರದೇಶದಲ್ಲಿ ಮಂಗಳವಾರ ಮುಂಜಾನೆಯಿಂದಲೇ ಸಾವಿರಾರು ಅಕ್ರಮ ಬಾಂಗ್ಲಾದೇಶಿ ವಲಸಿಗರ ಹಿಂಡು ಜಮಾಯಿಸಿದೆ. ಸರ್ಕಾರದ ಕಠಿಣ ತಪಾಸಣಾ ಡ್ರೈವ್‌ನಿಂದ ತಪ್ಪಿಸಿಕೊಳ್ಳಲು ಇವರೆಲ್ಲರೂ ತಾವಾಗಿಯೇ ಬಾಂಗ್ಲಾದೇಶಕ್ಕೆ ಮರಳಲು ಗಡಿ ಕಾವಲು ಪಡೆಯ (BSF) ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.
ಡಮ್ ಡಮ್ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯೊಬ್ಬ ಮಾಧ್ಯಮಗಳ ಎದುರು ಕಣ್ಣೀರಿಟ್ಟು, ಇಲ್ಲಿನ ಆಡಳಿತ ನಮ್ಮನ್ನು ಇಟ್ಟುಕೊಳ್ಳಲು ಸಿದ್ಧವಿಲ್ಲದ ಮೇಲೆ ನಾವು ಮಾಡುವುದಾದರೂ ಏನೂ ಇಲ್ಲ ಎಂದಿದ್ದಾರೆ. ಅಲ್ಲದೆ, ಜೈಲಿಗೆ ಹೋಗುವ ಬದಲು ನಮ್ಮ ದೇಶಕ್ಕೆ ಮರಳುವುದೇ ವಾಸಿ ಎಂದು ಅಳಲು ತೋಡಿಕೊಂಡಿದ್ದಾನೆ. ಈ ಹಿಂದೆ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆಯೂ ಇಂತಹದೇ ಪಲಾಯನದ ದೃಶ್ಯಗಳು ಕಂಡುಬಂದಿದ್ದವು.

ಮಾಲ್ಡಾದಲ್ಲಿ ಮೊದಲ ಅಧಿಕೃತ 'ಹೋಲ್ಡಿಂಗ್ ಸೆಂಟರ್' ಕಾರ್ಯಾರಂಭ!

ಬಂಗಾಳ ಸರ್ಕಾರದ ಗೃಹ ಮತ್ತು ಗಿರಿಪ್ರದೇಶ ವ್ಯವಹಾರಗಳ ಇಲಾಖೆಯ ನಿರ್ದೇಶನದ ಮೇರೆಗೆ ರಾಜ್ಯದ ಎಲ್ಲಾ 23 ಜಿಲ್ಲಾಡಳಿತಗಳು ಅಕ್ರಮ ವಿದೇಶಿಗರನ್ನು ಮತ್ತು ಗಡೀಪಾರು ಮಾಡಲು ಕಾಯುತ್ತಿರುವ ಜೈಲು ಮುಕ್ತ ವಿದೇಶಿ ಕೈದಿಗಳನ್ನು ತಾತ್ಕಾಲಿಕವಾಗಿ ಇರಿಸಲು ಪ್ರತ್ಯೇಕ ಬಂಧನ ಕೇಂದ್ರಗಳನ್ನು ಸ್ಥಾಪಿಸುತ್ತಿವೆ. ಇದರ ಅಂಗವಾಗಿ ಮಾಲ್ಡಾ ಜಿಲ್ಲೆಯ ಇಂಗ್ಲಿಷ್ ಬಜಾರ್‌ನ ಚಂದನ್ ಪಾರ್ಕ್​ನಲ್ಲಿ ಪಶ್ಚಿಮ ಬಂಗಾಳದ ಮೊದಲ ಅಧಿಕೃತ ಹೋಲ್ಡಿಂಗ್ ಸೆಂಟರ್ ಅನ್ನು ಸೋಮವಾರ ರಾತ್ರಿ ಕಾರ್ಯಾಚರಣೆಗೆ ತರಲಾಗಿದೆ.
ಪ್ರಸ್ತುತ ಗಾಜೋಲ್‌ನ ಪಾಂಡುವಾ ಪ್ರದೇಶದಲ್ಲಿ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದ ಒಂಬತ್ತು ಮಂದಿ ಬಾಂಗ್ಲಾ ಪ್ರಜೆಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಈ ಕೇಂದ್ರಕ್ಕೆ ಕರೆತರಲಾಗಿದೆ. ಇವರಲ್ಲಿ ಮೂವರು ಮಹಿಳೆಯರು ಹಾಗೂ ಆರು ಮಂದಿ ಅಪ್ರಾಪ್ತ ವಯಸ್ಕರಿದ್ದಾರೆ. ಈ ಕೇಂದ್ರದ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು, ಸಿವಿಲ್ ಡಿಫೆನ್ಸ್ ಸಿಬ್ಬಂದಿ ಹಾಗೂ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದ್ದು, ಊಟೋಪಚಾರದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡಿದೆ.
ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತಿದ್ದ ರೋಹಿಂಗ್ಯಾಗಳು ಹಾಗೂ ಬಾಂಗ್ಲಾದೇಶಿ ಅಕ್ರಮ ವಲಸಿಗರ ವೋಟ್ ಬ್ಯಾಂಕ್ ಸಿಂಡಿಕೇಟ್ ಅನ್ನು ಮುರಿಯಲು ಸಿಎಂ ಸುವೇಂದು ಅಧಿಕಾರಿ ಕೈಗೊಂಡಿರುವ ಈ ಕಠಿಣ 'ಬುಲ್ಡೋಜರ್ ಆಕ್ಷನ್' ಇಡೀ ದೇಶಾದ್ಯಂತ ಭಾರಿ ಸಂಚಲನಕ್ಕೆ ಕಾರಣವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net