ರ‍್ಯಾಲಿಗೆ ಬನ್ನಿ, ಸ್ಥಳೀಯ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಿ ಸಣ್ಣ ವ್ಯಾಪಾರಿಗಳನ್ನು ಬೆಂಬಲಿಸಿ: ಕೈ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಕರೆ! | Rahul Gandhi

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on: 

ನವದೆಹಲಿ: ಇಂದು (ನವೆಂಬರ್ 1) ದೆಹಲಿಯ ರಾಮಲೀಲಾ ಮೈದಾನದಲ್ಲಿ ನಿಗದಿಯಾಗಿರುವ ಇಂಡಿಯಾ ಒಕ್ಕೂಟದ ಬೃಹತ್ ರ‍್ಯಾಲಿಯಿಂದ ವ್ಯಾಪಾರಕ್ಕೆ ಅಡ್ಡಿಯಾಗಲಿದೆ ಎಂಬ ವಲಯದ ಆತಂಕದ ನಡುವೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮಹತ್ವದ ಹೇಳಿಕೆ ನೀಡಿದ್ದಾರೆ. ರ‍್ಯಾಲಿಗೆ ಆಗಮಿಸುವ ಲಕ್ಷಾಂತರ ಮಂದಿ ಕಾರ್ಯಕರ್ತರು ಸ್ಥಳೀಯ ಮಾರುಕಟ್ಟೆಗಳಲ್ಲಿ ಹಬ್ಬದ ಶಾಪಿಂಗ್ ಮಾಡುವ ಮೂಲಕ ಸಣ್ಣ ವ್ಯಾಪಾರಿಗಳನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರತಿಭಟನೆಯ ಜೊತೆಗೆ ಹಬ್ಬದ ಶಾಪಿಂಗ್ ಕೂಡ ಮಾಡುವುದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ತಿಳಿಸಿದ್ದಾರೆ. ರ‍್ಯಾಲಿಯಿಂದ ವ್ಯಾಪಾರ ವಹಿವಾಟಿಗೆ ಧಕ್ಕೆಯಾಗುತ್ತದೆ ಎಂಬ ವಾಪಾರಿಗಳ ಆರೋಪವನ್ನು ತಳ್ಳಿಹಾಕಿರುವ ಅವರು, ಬಿಜೆಪಿ ಈ ಕುರಿತು ವಿನಾಕಾರಣ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ. ಹಬ್ಬದ ದಿನಗಳಲ್ಲಿ ರ‍್ಯಾಲಿಯೂ ನಡೆಯಲಿದೆ, ಜೊತೆಗೆ ದೇಶದ ಮೂಲೆ ಮೂಲೆಗಳಿಂದ ಬರುವ ಜನತೆ ದೆಹಲಿಯ ಸಣ್ಣ ಅಂಗಡಿಗಳಲ್ಲಿ ಖರೀದಿಯನ್ನೂ ನಡೆಸಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

2024ರ ಚುನಾವಣೆಯೇ ಅಕ್ರಮ ಎಂದ ರಾಹುಲ್​

ನವದೆಹಲಿಯಲ್ಲಿ ಶನಿವಾರ ಇಂಡಿಯಾ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಂಕೇತಿಕ ಸಾರ್ವಜನಿಕ ಮಹಾಭಿಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್​, ಸಿಇಸಿ ಜ್ಞಾನೇಶ್ ಕುಮಾರ್ ಹುದ್ದೆಯಲ್ಲಿ ಮುಂದುವರಿಯದಂತೆ ತಡೆಯಲು ತಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಎಚ್ಚರಿಸಿದ್ದಾರೆ. ಬಿಜೆಪಿ ಸರ್ಕಾರವು ಚುನಾವಣಾ ಆಯೋಗವನ್ನು ಬಳಸಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಾಗಿ ಉಳಿಯುವುದಿಲ್ಲ. ಈ ವ್ಯಕ್ತಿಯು ಅಧಿಕಾರದಲ್ಲಿ ಮುಂದುವರಿಯದಂತೆ ನೋಡಿಕೊಳ್ಳಲು ನಮ್ಮ ಬಳಿ ಈಗಾಗಲೇ ಸಾಕಷ್ಟು ಪುರಾವೆಗಳಿವೆ. ಆ ಸಾಕ್ಷ್ಯಗಳನ್ನು ಬಹಿರಂಗಪಡಿಸಿದ ನಂತರವೂ ಅವರನ್ನು ಮುಂದುವರಿಸಲು ಹಠ ಹಿಡಿದರೆ, ಬಿಜೆಪಿ ಸರ್ಕಾರದ ಆಟವೇನು ಎಂಬುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು.

Also Read
ನಾವು ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಹೋಗಲ್ಲ: ಮಮತಾ ಬ್ಯಾನರ್ಜಿ ಭೇಟಿಯ ಬೆನ್ನಲ್ಲೇ ದೀಪ್ಕೆ ಸ್ಪಷ್ಟನೆ! | Abhijeet Dipke
ರಾಹುಲ್ ಗಾಂಧಿ

ಉಭಯ ಸದನಗಳ ಸಂಸತ್ ಸದಸ್ಯರು ಮತ್ತು ಸಾರ್ವಜನಿಕರು ಸೇರಿರುವ ಈ ಸಭೆಯು ಕೇವಲ ಒಂದು ರಾಜಕೀಯ ಸಭೆಯಲ್ಲ, ಅದೊಂದು ಪ್ರಬಲ ರಾಜಕೀಯ ಅಸ್ತ್ರ ಎಂದು ಕರೆದ ರಾಹುಲ್​, ಇದು ಜ್ಞಾನೇಶ್ ಕುಮಾರ್ ಅವರಿಗೆ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ದೇಶದ ಮತಗಳನ್ನು ಅಳಿಸಿಹಾಕಲು ಸಂಚು ಹೂಡಿದ ಪ್ರತಿಯೊಬ್ಬರಿಗೂ ನೇರವಾಗಿ ಗುರಿಯಿಟ್ಟಿರುವ ಅಸ್ತ್ರವಾಗಿದೆ ಎಂದರು. ಸಾಂವಿಧಾನಿಕ ಹುದ್ದೆಗಳಲ್ಲಿರುವವರು ತಾವು ನೇತೃತ್ವ ವಹಿಸುವ ಸಂಸ್ಥೆಗಳ ಹಿಂದೆ ಎಂದೆಂದಿಗೂ ಅಕ್ಕಪಕ್ಕದಲ್ಲಿ ಅಡಗಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ವ್ಯಾಪಾರಿಗಳ ಸಂಘಟನೆಗಳಿಂದ ಆತಂಕವೇನು..?

ದೀಪಾವಳಿ ಹಬ್ಬದ ಸೀಸನ್‌ನಲ್ಲಿಯೇ ಈ ದೊಡ್ಡ ರ‍್ಯಾಲಿ ಆಯೋಜಿಸಿರುವುದಕ್ಕೆ ದೆಹಲಿಯ ಪ್ರಮುಖ ವ್ಯಾಪಾರಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ರಾಹುಲ್ ಗಾಂಧಿಗೆ ಸಾಲು ಸಾಲು ಪತ್ರ ಬರೆದು, ನವೆಂಬರ್ 1ರ ರ‍್ಯಾಲಿಯಿಂದಾಗಿ ಮಧ್ಯ ದೆಹಲಿಯ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 2.5 ಲಕ್ಷ ಅಂಗಡಿಗಳು ಮುಚ್ಚುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಸುಮಾರು 20 ಪ್ರಮುಖ ಮಾರುಕಟ್ಟೆಗಳ ಶೇ.80ರಷ್ಟು ವ್ಯಾಪಾರಕ್ಕೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ದೀಪಾವಳಿ ಸೀಸನ್‌ನಲ್ಲಿ ಪ್ರತಿದಿನ ನಡೆಯುವ 10,000 ರಿಂದ 12,000 ಕೋಟಿ ರೂ.ವರೆಗಿನ ವಹಿವಾಟು ಅಪಾಯಕ್ಕೆ ಸಿಲುಕಲಿದೆ ಎಂದು ಸಿಟಿಐ ಕಳವಳ ವ್ಯಕ್ತಪಡಿಸಿದೆ. ಧನ್‌ತೇರಸ್‌ನಿಂದ ದೀಪಾವಳಿಯವರೆಗೆ ಅಂದಾಜು 25,000 ಕೋಟಿ ರೂ.ಗಳಷ್ಟು ಬ್ಯುಸಿನೆಸ್ ನಡೆಯಲಿದ್ದು, ಸಣ್ಣ ವ್ಯಾಪಾರಿಗಳು, ಸಿಬ್ಬಂದಿ ಹಾಗೂ ದಿನಗೂಲಿ ನೌಕರರು ಈ ಅವಧಿಯ ಮಾರಾಟವನ್ನೇ ನಂಬಿಕೊಂಡಿದ್ದಾರೆ ಎಂದು ಫೆಡರೇಷನ್ ಆಫ್ ಸದರ್ ಬಜಾರ್ ಟ್ರೇಡರ್ಸ್ ಅಸೋಸಿಯೇಷನ್ ಕೂಡ ತಿಳಿಸಿದೆ. ಹಬ್ಬದ ಈ ಸೀಸನ್ ವ್ಯಾಪಾರಕ್ಕೆ ಅಡ್ಡಿಯಾದರೆ ವಾರ್ಷಿಕ ಆದಾಯಕ್ಕೆ ಹೊಡೆತ ಬೀಳಲಿದೆ ಎಂದು ಹೇಳಿರುವ ವ್ಯಾಪಾರಿ ಸಂಘಟನೆಗಳು, ರಾಲಿಯನ್ನು ನವೆಂಬರ್ 10ರ ಬಳಿಕ ಮುಂದೂಡುವಂತೆ ಮನವಿ ಮಾಡಿದ್ದವು(ಏಜೆನ್ಸೀಸ್​).