ನಾವು ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಹೋಗಲ್ಲ: ಮಮತಾ ಬ್ಯಾನರ್ಜಿ ಭೇಟಿಯ ಬೆನ್ನಲ್ಲೇ ದೀಪ್ಕೆ ಸ್ಪಷ್ಟನೆ! | Abhijeet Dipke

ನಾವು ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಹೋಗಲ್ಲ: ಮಮತಾ ಬ್ಯಾನರ್ಜಿ ಭೇಟಿಯ ಬೆನ್ನಲ್ಲೇ ದೀಪ್ಕೆ ಸ್ಪಷ್ಟನೆ! | Abhijeet Dipke
Published on: 

ನವದೆಹಲಿ: ಕಾಕ್ರೋಚ್​ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ದೆಹಲಿಯಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ನೀಟ್ ಪೇಪರ್ ಸೋರಿಕೆ ಪ್ರಕರಣ ಹಾಗೂ ಚುನಾವಣಾ ಆಯೋಗದ ವಿರುದ್ಧ ನಡೆದ ಜೆನ್​-ಜೀ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿದ್ದಕ್ಕಾಗಿ ದೀಪ್ಕೆ ಈ ವೇಳೆ ದೀದಿಗೆ ಧನ್ಯವಾದ ಅರ್ಪಿಸಿದರು.

ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾರನ್ನು ದೆಹಲಿ ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ನೀಡಿದ ಬೆಂಬಲವನ್ನು ದೀಪ್ಕೆ ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ.

ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಇಂಡಿಯಾ ಬ್ಲಾಕ್‌ನ ಬೃಹತ್ ರ‍್ಯಾಲಿಯ ಕುರಿತು ಮಾತನಾಡಿದ ಅಭಿಜಿತ್ ದೀಪ್ಕೆ, ತಮ್ಮ ಸಂಘಟನೆಯು ವಿರೋಧ ಪಕ್ಷಗಳ ಒಕ್ಕೂಟದ ಹೋರಾಟದ ಉದ್ದೇಶಕ್ಕೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ತಿಳಿಸಿದರು. ಆದರೆ, ಸಿಜೆಪಿ ಒಂದು ಸ್ವತಂತ್ರ ಸಂಘಟನೆ ಮತ್ತು ತಟಸ್ಥ ವೇದಿಕೆಯಾಗಿರುವುದರಿಂದ, ರಾಮಲೀಲಾ ಮೈದಾನದಲ್ಲಿ ನಡೆಯುವ ರ‍್ಯಾಲಿಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Also Read
2024ರ ಚುನಾವಣೆಯೇ ಅಕ್ರಮ! ಬಿಜೆಪಿ ಅಧಿಕಾರಕ್ಕೆ ಬಂದಿದ್ದು ವಾಮಮಾರ್ಗದಿಂದ: ರಾಹುಲ್ ಗಾಂಧಿ ಗಂಭೀರ ಆರೋಪ | Rahul Gandhi
ನಾವು ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಹೋಗಲ್ಲ: ಮಮತಾ ಬ್ಯಾನರ್ಜಿ ಭೇಟಿಯ ಬೆನ್ನಲ್ಲೇ ದೀಪ್ಕೆ ಸ್ಪಷ್ಟನೆ! | Abhijeet Dipke

ಪಕ್ಷದ ಸ್ವತಂತ್ರ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿರುವ ದೀಪ್ಕೆ, ಚುನಾವಣಾ ಅಕ್ರಮ ಮತ್ತು ಮತ ಕಳ್ಳತನದ ವಿರುದ್ಧ ಹೋರಾಡುವ ಯಾವುದೇ ರಾಜಕೀಯೇತರ ಅಥವಾ ರಾಜಕೀಯ ಸಂಘಟನೆಗಳ ಜೊತೆ ತಮ್ಮ ಬೆಂಬಲ ಸದಾ ಇರಲಿದೆ ಎಂದು ಪುನರುಚ್ಚರಿಸಿದರು.

ಮಮತಾ ಬ್ಯಾನರ್ಜಿ ಶ್ಲಾಘನೆ!...

ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅಭಿಜಿತ್ ದೀಪ್ಕೆ ಮತ್ತು ಅವರ ತಂಡ ನಡೆಸುತ್ತಿರುವ ಹೋರಾಟವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಎಸ್​​ಐಆರ್​ ವಿರುದ್ಧದ ಪ್ರತಿಭಟನೆಗಳಲ್ಲಿ ಈ ಯುವಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬೆನ್ನು ತಟ್ಟಿದರು. ಸಿಜೆಪಿ ಕಾರ್ಯಕರ್ತರು ಭಾನುವಾರದ ಇಂಡಿಯಾ ಬ್ಲಾಕ್ ರ‍್ಯಾಲಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು, ತಾವು ಕೂಡ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದರು. ಇಷ್ಟು ಕಷ್ಟಗಳ ನಡುವೆಯೂ ಧೃತಿಗೆಡದೆ ಹೋರಾಟವನ್ನು ಮುಂದುವರಿಸಿರುವ ಯುವಕರನ್ನು ತಾವೇ ಹೆಮ್ಮೆಯಿಂದ ಅಭಿನಂದಿಸುತ್ತೇನೆ ಎಂದರು.

ಅಷ್ಟೇ ಅಲ್ಲದೆ, ಸಿಜೆಪಿ ಕಾರ್ಯಕರ್ತರನ್ನು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಅಲ್ಲಿಯೂ ತಮ್ಮ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆಹ್ವಾನಿಸಿದ ದೀದಿ, ಬಂಗಾಳಕ್ಕೆ ಭೇಟಿ ನೀಡುವುದು ಅಥವಾ ಕಾರ್ಯಕ್ರಮ ರೂಪಿಸುವುದರ ಕುರಿತು ಅಂತಿಮ ತೀರ್ಮಾನವನ್ನು ಸಿಜೆಪಿ ನಾಯಕರಿಗೆ ಬಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು(ಏಜೆನ್ಸೀಸ್​).