

ನವದೆಹಲಿ: ಭಾರತದಲ್ಲಿ ದಶಕಗಳ ಹಿಂದೆಯೇ ಅಳಿದುಹೋಗಿದ್ದ ಚೀತಾಗಳು ಮತ್ತೆ ಕಾಡಿನಲ್ಲಿ ಓಡಾಡುವಂತಾಗಿವೆ. ಚೀತಾಗಳ ಸಂತತಿಯನ್ನು ರಕ್ಷಿಸಿ ಬೆಳೆಸಲು ಜಾರಿಗೊಳಿಸಿರುವ ‘ಪ್ರಾಜೆಕ್ಟ್ ಚೀತಾ’ ( Project Cheetah ) ಕಾರ್ಯಕ್ರಮ ಇದೀಗ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದೆ. 2022ರ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಎಂಟು ಚೀತಾಗಳನ್ನು ಭಾರತಕ್ಕೆ ಕರೆತರುವ ಮೂಲಕ ಆರಂಭವಾದ ಈ ಯೋಜನೆ ಇದೀಗ ಮಹತ್ವದ ಮೈಲಿಗಲ್ಲು ತಲುಪಿದೆ. ದೇಶದಲ್ಲಿ ಚೀತಾಗಳ ಒಟ್ಟು ಸಂಖ್ಯೆ 52ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 32 ಚೀತಾಗಳು ಭಾರತದಲ್ಲೇ ಜನಿಸಿರುವುದು ವಿಶೇಷವಾಗಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಪ್ರಾಣಿಗಳ ಸಂತತಿ ಅಳಿವಿನಂಚಿನಲ್ಲಿದೆ. ಇದಕ್ಕೆ ಅರಣ್ಯಗಳ ನಾಶ, ಪ್ರಾಣಿಗಳ ಕಳ್ಳ ಸಾಗಾಣಿಕೆ, ಸಂತಾನೋತ್ಪತಿ ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಹಾಗೆಯೇ ಅಳಿವಿನಂಚಿಗೆ ತಲುಪಿದ್ದ ಚೀತಾ ಸಂತತಿಯನ್ನು ಬೆಳೆಸಲು ನಾಲ್ಕು ವರ್ಷಗಳ ಹಿಂದೆ ಕೇವಲ ಎಂಟು ಚೀತಾಗಳೊಂದಿಗೆ ಆರಂಭವಾದ ‘ಪ್ರಾಜೆಕ್ಟ್ ಚೀತಾ’ ಇದೀಗ ಮಹತ್ವದ ಮೈಲಿಗಲ್ಲು ತಲುಪಿದೆ. ಸಂತಾನೋತ್ಪತ್ತಿ, ಮರಿಗಳ ಬದುಕುಳಿಯುವಿಕೆ ಮತ್ತು ಹೊಸ ಆವಾಸ ಸ್ಥಾನಗಳ ವಿಸ್ತರಣೆಯೊಂದಿಗೆ ದೇಶದಲ್ಲಿ ಚೀತಾಗಳನ್ನು ಕಾಣುವಂತಾಗಿದೆ. ನಾಲ್ಕು ವರ್ಷಗಳಲ್ಲಿ ಚೀತಾಗಳ ಸಂತತಿ ಹೇಗೆ ಬೆಳೆಯಿತು? ಕುನೋದಿಂದ ಗಾಂಧಿ ಸಾಗರ್‌ವರೆಗೆ ಈ ಯೋಜನೆ ಹೇಗೆ ವಿಸ್ತರಣೆಯಾಗಿದೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಸಂಪೂರ್ಣ ಉತ್ತರ.
ಈ ಪ್ರಾಜೆಕ್ಟ್ ಚೀತಾ ಯೋಜನೆ ಜಾರಿಯಾಗಿದ್ದು ಮಧ್ಯಪ್ರದೇಶದಲ್ಲಿ. ಇಲ್ಲಿನ ಕುನೋ ರಾಷ್ಟ್ರೀಯ ಉದ್ಯಾನವನ ಮತ್ತು ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ಚೀತಾಗಳನ್ನು ಸಂರಕ್ಷಿಸಲಾಗುತ್ತಿದೆ. ಪ್ರಸ್ತುತ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 49 ಚೀತಾಗಳಿದ್ದರೆ, ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ಮೂರು ಚೀತಾಗಳಿವೆ. ಸಂತಾನೋತ್ಪತ್ತಿ, ಮರಿಗಳ ಬದುಕುಳಿಯುವಿಕೆ ಹಾಗೂ ಹೊಸ ಆವಾಸಸ್ಥಾನಗಳಿಗೆ ಚೀತಾಗಳನ್ನು ಪರಿಚಯಿಸುವ ಮೂಲಕ ಈ ಯೋಜನೆ ಹಂತ ಹಂತವಾಗಿ ವಿಸ್ತರಣೆಯಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2022ರ ಸೆಪ್ಟೆಂಬರ್ 17ರಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ಕರೆತರಲಾಗಿದ್ದ ಎಂಟು ಚೀತಾಗಳೊಂದಿಗೆ ಈ ಕಾರ್ಯಕ್ರಮವನ್ನು ಆರಂಭಿಸಿದರು. ನಮೀಬಿಯಾದಿಂದ ತಂದಿದ್ದ ಚೀತಾಗಳು ಭಾರತದ ಪರಿಸರಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಈ ಯೋಜನೆ ಉದ್ದೇಶವಾಗಿತ್ತು. ಆದರೆ, ವಿಶೇಷವೆಂದರೆ ಆ ಚೀತಾಗಳು ಭಾರತದ ಪರಿಸಕ್ಕೆ ಬೇಗನೆ ಹೊಂದೊಕೊಂಡವು. ಮೊದಲ ವರ್ಷದಲ್ಲಿ ಚೀತಾಗಳ ನಡವಳಿಕೆ, ಆರೋಗ್ಯ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಸವಾಲುಗಳು ಎದುರಾಗಿದ್ದವು. ಈ ಅನುಭವಗಳು ಮುಂದಿನ ದಿನಗಳಲ್ಲಿ ಸಂತಾನೋತ್ಪತ್ತಿ ಮತ್ತು ಚೀತಾಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳಿಗೆ ನೆರವಾದವು.
ಭಾರತದಲ್ಲಿ ಚೀತಾಗಳನ್ನು 1952ರಲ್ಲಿ ಭಾರತದಲ್ಲಿ ಅಳಿದುಹೋದ ಪ್ರಾಣಿ ಪ್ರಭೇದವೆಂದು ಘೋಷಿಸಲಾಗಿತ್ತು. ಹಲವು ದಶಕಗಳ ಬಳಿಕ ಅವುಗಳನ್ನು ಮತ್ತೆ ದೇಶಕ್ಕೆ ಪರಿಚಯಿಸುವ ಪ್ರಯತ್ನ ಆರಂಭಿಸಲಾಯಿತು. ಅಳಿದುಹೋದ ಪ್ರಭೇದವೊಂದನ್ನು ಮತ್ತೆ ತನ್ನ ನೈಸರ್ಗಿಕ ಪರಿಸರಕ್ಕೆ ಪರಿಚಯಿಸುವುದು ಸುಲಭದ ಕೆಲಸವಲ್ಲ. ಚೀತಾಗಳ ಸಂತಾನೋತ್ಪತ್ತಿ, ಅವುಗಳ ಆರೋಗ್ಯ ಮತ್ತು ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಾಜೆಕ್ಟ್ ಚೀತಾ ಯೋಜನೆಯನ್ನು ರೂಪಿಸಲಾಗಿದೆ.
ಭಾರತದಲ್ಲಿ ಇವುಗಳ ಸಂತಾನೋತ್ಪತ್ತಿಯು ಎರಡನೇ ವರ್ಷದಿಂದ ಪ್ರಾರಂಭವಾಯಿತು. ಭಾರತದಲ್ಲೇ ಜನಿಸಿದ ಚೀತಾ ಮರಿಗಳ ಬದುಕುಳಿಯುವಿಕೆ ಮತ್ತು ಬೆಳವಣಿಗೆಯತ್ತ ಹೆಚ್ಚಿನ ಗಮನ ಹರಿಸಲಾಯಿತು. ಯೋಜನೆಯ ನಾಲ್ಕು ವರ್ಷಗಳ ಪ್ರಗತಿ ವರದಿಯ ಪ್ರಕಾರ, 13 ಚೀತಾ ಮರಿಗಳು ಜನಿಸಿದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಬದುಕುಳಿದಿವೆ. ಭಾರತದಲ್ಲಿ ಜನಿಸಿದ ಎರಡನೇ ತಲೆಮಾರಿನ ಮರಿಗಳ ಬದುಕುಳಿಯುವಿಕೆಯೂ ಯೋಜನೆಯ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.
ನಮೀಬಿಯಾದಿಂದ ಕರೆತರಲಾಗಿದ್ದ ಎಂಟು ಚೀತಾಗಳಲ್ಲಿ ಪ್ರಸ್ತುತ ಮೂರು ಜೀವಂತವಾಗಿದ್ದು, ಭಾರತದಲ್ಲಿ ಜನಿಸಿದ 22 ಮರಿಗಳೊಂದಿಗೆ ಈ ಗುಂಪಿನ ಒಟ್ಟು ಸಂಖ್ಯೆ 25 ಆಗಿದೆ. ಇನ್ನು 2023ರ ಫೆಬ್ರವರಿ 18ರಂದು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ಕರೆತರಲಾಗಿತ್ತು. ಅವುಗಳಲ್ಲಿ ಎಂಟು ಚೀತಾಗಳು ಪ್ರಸ್ತುತ ಜೀವಂತವಾಗಿದ್ದು, ಭಾರತದಲ್ಲಿ ಜನಿಸಿದ 10 ಮರಿಗಳೂ ಸೇರಿ ಈ ಗುಂಪಿನ ಒಟ್ಟು ಸಂಖ್ಯೆ 18 ಆಗಿದೆ.
ಆರಂಭದಲ್ಲಿ ಕೇವಲ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಮಾತ್ರ ಸೀಮಿತವಾಗಿದ್ದ ಈ ಯೋಜನೆಯನ್ನು ಪ್ರಸ್ತುತ ಮಧ್ಯಪ್ರದೇಶದ ಗಾಂಧಿ ಸಾಗರ್ ಅಭಯಾರಣ್ಯಕ್ಕೂ ಯೋಜನೆಯನ್ನು ವಿಸ್ತರಿಸಲಾಗಿದ್ದು, ಪ್ರಸ್ತುತ ಅಲ್ಲಿ ಮೂರು ಚೀತಾಗಳಿವೆ. ಇದಲ್ಲದೆ, ಈ ವರ್ಷದ ಫೆಬ್ರವರಿಯಲ್ಲಿ ಬೋಟ್ಸ್‌ವಾನಾದಿಂದ ಒಂಬತ್ತು ಚೀತಾಗಳನ್ನು ಭಾರತಕ್ಕೆ ಕರೆತರಲಾಗಿದೆ. ವಿವಿಧ ಆಫ್ರಿಕನ್ ಪ್ರದೇಶಗಳಿಂದ ಚೀತಾಗಳನ್ನು ಕರೆತರುವ ಮೂಲಕ ದೇಶದಲ್ಲಿ ದೀರ್ಘಕಾಲೀನ ಚೀತಾ ಸಂತತಿಯನ್ನು ಸ್ಥಾಪಿಸುವ ಪ್ರಯತ್ನ ಮುಂದುವರಿದಿದೆ.
ಪ್ರಾಜೆಕ್ಟ್ ಚೀತಾದ ಮುಂದಿನ ಗುರಿ ಭಾರತದಲ್ಲಿ ಚೀತಾಗಳ ದೀರ್ಘಕಾಲೀನ ಸಂತತಿಯನ್ನು ನಿರ್ಮಿಸುವುದಾಗಿದೆ. ಇದಕ್ಕಾಗಿ ಸೂಕ್ತ ಆವಾಸಸ್ಥಾನಗಳನ್ನು ವಿಸ್ತರಿಸುವುದು, ಚೀತಾಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣ ಕಲ್ಪಿಸುವುದು, ಮರಿಗಳ ಬದುಕುಳಿಯುವಿಕೆಯನ್ನು ಹೆಚ್ಚಿಸುವುದು ಮತ್ತು ಅವುಗಳು ನೈಸರ್ಗಿಕ ಪರಿಸರಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳುವುದು ಪ್ರಮುಖ ಉದ್ದೇಶಗಳಾಗಿವೆ. ಕುನೋ ರಾಷ್ಟ್ರೀಯ ಉದ್ಯಾನವನದ ಜೊತೆಗೆ ಗಾಂಧಿ ಸಾಗರ್ ಅಭಯಾರಣ್ಯ ಸೇರಿದಂತೆ ಇತರ ಸೂಕ್ತ ಪ್ರದೇಶಗಳಿಗೂ ಯೋಜನೆಯನ್ನು ವಿಸ್ತರಿಸಿ, ಭಾರತದಲ್ಲಿ ಚೀತಾಗಳ ಸ್ಥಿರ ಮತ್ತು ಸ್ವಾವಲಂಬಿ ಸಂತತಿಯನ್ನು ಬೆಳೆಸುವತ್ತ ಗಮನಹರಿಸಲಾಗಿದೆ, (ಏಜೆನ್ಸೀಸ್).