ಕ್ಲಾಡ್​​ ಬಳಸಿ ಓಪನ್​ಎಐ ಹ್ಯಾಕ್​ ಮಾಡಿ ಇಡೀ ಎಐ ಜಗತ್ತನ್ನೇ ಶೇಕ್​ ಮಾಡಿದ ಮೂವರು ಭಾರತೀಯರು ಇವರೇ...OpenAI

ಭಾರತೀಯ ಮೂಲದ ಮೂವರು ಸೈಬರ್ ಭದ್ರತಾ ಸಂಶೋಧಕರ ಸಾಹಸಗಾಥೆಯು ಸದ್ಯ ತಂತ್ರಜ್ಞಾನ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
OpenAI
ಹರ್ಷ್ ಜೈಸ್ವಾಲ್, ಮೋಹನ್ ಪೇಧಪತಿ ಮತ್ತು ರಾಹುಲ್ ಮೈನಿ
Published on

ನವದೆಹಲಿ: ಆಂಥ್ರೊಪಿಕ್‌ನ ಕ್ಲಾಡ್​ (Claude) ಎಐ ಚಾಟ್‌ಬಾಟ್ ಬಳಸಿ ಓಪನ್‌ಎಐ ( OpenAI ) ಸಿಸ್ಟಮ್‌ ಅನ್ನು ಹ್ಯಾಕ್ ಮಾಡಿ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಸಂಚಲನ ಮೂಡಿಸಿರುವ ಭಾರತೀಯ ಮೂಲದ ಮೂವರು ಸೈಬರ್ ಭದ್ರತಾ ಸಂಶೋಧಕರ ಸಾಹಸಗಾಥೆಯು ಸದ್ಯ ತಂತ್ರಜ್ಞಾನ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಜುಲೈನಲ್ಲಿ ಹ್ಯಾಕ್ಟ್ರನ್ ಎಐ (Hacktron AI) ಸೈಬರ್ ಭದ್ರತಾ ಸ್ಟಾರ್ಟ್‌ಅಪ್‌ನ ಭಾರತೀಯ ಮೂಲದ ಮೂವರು ಸಂಶೋಧಕರು ಓಪನ್‌ಎಐ ಸಿಸ್ಟಮ್‌ಗೆ ಅಧಿಕೃತ ಭದ್ರತಾ ಪರೀಕ್ಷೆಯನ್ನು ನಡೆಸಿದರು. ಈ ವೇಳೆ ಸಾಫ್ಟ್‌ವೇರ್ ದೋಷವೊಂದನ್ನು ಬಳಸಿಕೊಳ್ಳಲು ಕ್ಲಾಡ್​ ಎಐ ನೆರವು ಪಡೆದ ಅವರು, ಅಂತಿಮವಾಗಿ ಓಪನ್‌ಎಐ ಉದ್ಯೋಗಿಗಳ ಖಾತೆಗಳು ಹಾಗೂ ಕಂಪನಿಯ ಖಾಸಗಿ ಗಿಟ್​ಹಬ್ (GitHub) ಪ್ರದೇಶಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು. ಅಂದರೆ, ಓಪನ್​ಎಐ ಹ್ಯಾಕ್​ ಮಾಡಿದರು.

ವಲ್‌ನರಬಿಲಿಟಿ ಅಥವಾ ಭದ್ರತಾ ದೋಷಗಳನ್ನು ಪತ್ತೆ ಹಚ್ಚುವ ಓಪನ್‌ಎಐನ ಬಗ್-ಬೌಂಟಿ ಕಾರ್ಯಕ್ರಮದ ಭಾಗವಾಗಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಹರ್ಷ್ ಜೈಸ್ವಾಲ್, ಮೋಹನ್ ಪೇಧಪತಿ ಮತ್ತು ರಾಹುಲ್ ಮೈನಿ ಎಂಬ ಮೂವರು ಪ್ರತಿಭಾವಂತ ಸಂಶೋಧಕರು ಈ ಹ್ಯಾಕಿಂಗ್​ ಸಾಹಸದ ಹಿಂದೆ ಇದ್ದು, ಸಿಸ್ಟಮ್‌ನಲ್ಲಿದ್ದ ಲೋಪವನ್ನು ಪತ್ತೆ ಹಚ್ಚಿ ಅದನ್ನು ಸದುಪಯೋಗಪಡಿಸಿಕೊಳ್ಳಲು ಎಐ ಸಹಾಯ ಪಡೆದರು.

ವಾಲ್‌ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಮೊದಲ ದೋಷವನ್ನು ಪತ್ತೆಹಚ್ಚುವುದರಿಂದ ಹಿಡಿದು ಓಪನ್‌ಎಐನ ಖಾಸಗಿ ರೆಪೊಸಿಟರಿಗೆ ಪ್ರವೇಶ ಪಡೆಯುವವರೆಗಿನ ಸಂಪೂರ್ಣ ಪ್ರಯೋಗವು ಕೇವಲ 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಂಡಿದೆ. ಈ ಪರೀಕ್ಷೆಯ ವೇಳೆ ಸಂಶೋಧಕರು ಎಐ ಟೋಕನ್‌ಗಳಿಗಾಗಿ ಸುಮಾರು 3,000 ಡಾಲರ್‌ಗಿಂತ ಕಡಿಮೆ ವೆಚ್ಚ ಮಾಡಿದ್ದು, ಬಳಿಕ ಓಪನ್‌ಎಐ ಆ ದೋಷಗಳನ್ನು ಸರಿಪಡಿಸಿ ತಂಡಕ್ಕೆ 6,500 ಡಾಲರ್ ಬಗ್ ಬೌಂಟಿ ಬಹುಮಾನ ನೀಡಿದೆ.

Also Read
ಏನಿದು ಕಸ್ತೂರಿ ರಂಗನ್​ ವರದಿ? ಕೇಂದ್ರ ಸರ್ಕಾರಕ್ಕೆ ಇದನ್ನು ಸಲ್ಲಿಸಿದ ಕಸ್ತೂರಿ ರಂಗನ್ ಯಾರು? ಇಲ್ಲಿದೆ ವಿವರ | Kasturirangan Report
OpenAI

ಈ ಸಂಶೋಧನಾ ತಂಡದ ಮುಂಚೂಣಿಯಲ್ಲಿರುವ ಮೋಹನ್ ಪೇಧಪತಿ ಅವರು ಹ್ಯಾಕ್ಟ್ರನ್ ಎಐನ ಸಹ-ಸ್ಥಾಪಕ ಮತ್ತು ಸಿಟಿಒ ಆಗಿದ್ದಾರೆ. ವೆಬ್ ಎಕ್ಸ್‌ಪ್ಲೈಟೇಶನ್, ಸೋರ್ಸ್ ಕೋಡ್ ರಿವ್ಯೂ ಹಾಗೂ ಮೊಬೈಲ್ ಅಪ್ಲಿಕೇಶನ್ ಭದ್ರತೆಯಲ್ಲಿ ಪರಿಣತಿ ಹೊಂದಿರುವ ಇವರು ಈ ಹಿಂದೆ ಎಲೆಕ್ಟ್ರೋವೋಲ್ಟ್ ಇನ್ಫೋಸೆಕ್ ಸಂಸ್ಥೆಯನ್ನು ಸ್ಥಾಪಿಸುವುದಲ್ಲದೆ, ಕ್ಯೂರ್53 (Cure53) ಸಂಸ್ಥೆಯಲ್ಲಿ ಭದ್ರತಾ ಸಲಹೆಗಾರರಾಗಿ ಹಾಗೂ ಆಂಧ್ರಪ್ರದೇಶದ ಆರ್‌ಜಿಪಿಯುಕೆಟಿ ನುಜ್ವೀಡ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಅಭ್ಯಾಸ ಮಾಡಿದ್ದಾರೆ.

ಇನ್ನುಳಿದಂತೆ, ಹರ್ಷ್ ಜೈಸ್ವಾಲ್ ಅವರು ಹ್ಯಾಕ್ಟ್ರನ್ ಎಐನ ಸಹ-ಸ್ಥಾಪಕರಾಗಿದ್ದು, ಭದ್ರತಾ ದೋಷಗಳನ್ನು ಪತ್ತೆಹಚ್ಚುವಲ್ಲಿ 10 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದಾರೆ. ಪ್ರಾಜೆಕ್ಟ್ ಡಿಸ್ಕವರಿ, ಜೊಮ್ಯಾಟೊ ಹಾಗೂ ಹ್ಯಾಕರ್ ಒನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಜೈಸ್ವಾಲ್, ಆ್ಯಪಲ್, ಪೇಪಾಲ್ ಮತ್ತು ಗಿಟ್​ಹಬ್‌ನಂತಹ ದಿಗ್ಗಜ ಕಂಪನಿಗಳ ಉತ್ಪನ್ನಗಳಲ್ಲೂ ಭದ್ರತಾ ದೋಷಗಳನ್ನು ಪತ್ತೆಹಚ್ಚಿ ಸೈಬರ್ ಭದ್ರತಾ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ: ಪದೇ ಪದೇ ತಲೆಸುತ್ತಾ? ತಕ್ಷಣ ಶಮನಕ್ಕೆ ಇಲ್ಲಿದೆ ಸರಳ ಟಿಪ್ಸ್! Dizziness Remedies

ಮೂರನೇ ಸಂಶೋಧಕರಾದ ರಾಹುಲ್ ಮೈನಿ ಅವರು ಬಗ್-ಬೌಂಟಿ ಸಮುದಾಯದಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಕೋಬಾಲ್ಟ್, ಸಿನಾಕ್, ಹ್ಯಾಕರ್ ಒನ್ ಮತ್ತು ಬಗ್‌ಕೌಡ್‌ನಂತಹ ಪ್ರತಿಷ್ಠಿತ ಪ್ಲಾಟ್‌ಫಾರ್ಮ್‌ಗಳಲ್ಲಿ ಕೋರ್ ಪೆಂಟೆಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಎಟಿ ಆ್ಯಂಡ್ ಟಿ ಹಾಲ್ ಆಫ್ ಫೇಮ್ ಮನ್ನಣೆ ಪಡೆದಿರುವ ಇವರು ದೆಹಲಿಯ ಭಾರತಿ ವಿದ್ಯಾಪೀಠದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು, ಸೈಬರ್ ಭದ್ರತಾ ಕ್ಷೇತ್ರದಲ್ಲಿ ಉಜ್ವಲ ಸಾಧನೆ ತೋರಿದ್ದಾರೆ.

ಓಪನ್‌ಎಐನ ಸಾರ್ವಜನಿಕ ಕಮ್ಯುನಿಟಿ ಫೋರಮ್‌ನಲ್ಲಿ ಪತ್ತೆಯಾದ ದೋಷವನ್ನು ಎಐ ಸಹಾಯದಿಂದ ಶೋಧಿಸಿ ಯಶಸ್ವಿಯಾಗಿ ಎಕ್ಸ್‌ಪ್ಲೈಟ್ ಮಾಡಲಾಗಿದೆ. ಕ್ಲಾಡ್​ ಚಾಟ್‌ಬಾಟ್ ಎಕ್ಸ್‌ಪ್ಲೈಟ್ ಕೋಡ್ ಬರೆಯಲು, ಡಿಬಗ್ ಮಾಡಲು ಮತ್ತು ಸರಿಪಡಿಸಲು ನೆರವಾಯಿತು ಎಂದು ಸಂಶೋಧಕರು ತಿಳಿಸಿದ್ದು, ಈ ಐತಿಹಾಸಿಕ ಯಶಸ್ಸು ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಭದ್ರತೆಯ ಭವಿಷ್ಯದ ದಿಕ್ಸೂಚಿಯನ್ನು ಬದಲಾಯಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net