ಬೆಂಗಳೂರು: ಕಸ್ತೂರಿ ರಂಗನ್ ವರದಿ (Kasturirangan Report) ಏನಾದರೂ ಜಾರಿಯಾದರೆ ಪಶ್ಚಿಮ ಘಟ್ಟಗಳ (Western Ghats) ಭಾಗದಲ್ಲಿ ಬದುಕು ಕಟ್ಟಿಕೊಂಡಿರುವ ರೈತರು, ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಕೂಗುಗಳು ಸದ್ಯ ಜೋರಾಗಿವೆ. ಇದಕ್ಕೆ ಪುಷ್ಠಿ ಎನ್ನುವಂತೆ ಇತ್ತೀಚೆಗಷ್ಟೇ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ರೈತರು ಸೇರಿದಂತೆ ಇತರೆ ಸಂಘಟನೆಗಳು ಬಂದ್ಗೆ ಕರೆ ನೀಡಿತ್ತು. ಈಗ ರಾಜ್ಯ ರಾಜಕಾರಣದಲ್ಲಿಯೂ ಈ ವಿಷಯ ಭಾರಿ ಸದ್ದು ಮಾಡಲಾರಂಭಿಸಿದೆ.
ಜೈವಿಕ ವೈವಿಧ್ಯತೆಯನ್ನು ಹಾಗೂ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸಲ್ಲಿಸಲಾದ ಪ್ರಮುಖ ಶಿಫಾರಸು ಈ ಕಸ್ತೂರಿ ರಂಗನ್ ವರದಿ. ವಿಜ್ಞಾನಿ ಮತ್ತು ಬಾಹ್ಯಾಕಾಶ ಸಂಶೋಧಕ ಡಾ. ಕೆ. ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯು ಈ ವರದಿಯನ್ನು ಏ.15, 2013ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಇದೇ ಇಂದಿನ ವಿರೋಧ, ಆಕ್ಷೇಪ, ಪ್ರತಿಭಟನೆಗೆ ಮೂಲ ಕಾರಣವಾಗಿದೆ.
ಈ ಹಿಂದೆ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು ಪಶ್ಚಿಮ ಘಟ್ಟಗಳ ರಕ್ಷಣೆಗೆ ಕಟ್ಟುನಿಟ್ಟಿನ 'ಗಾಡ್ಗೀಳ್ ವರದಿ'ಯನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ, ಆ ವರದಿ ಸ್ಥಳೀಯರ ತೀವ್ರ ವಿರೋಧಕ್ಕೆ ಗುರಿಯಾದ ಕಾರಣ, ಅದರಲ್ಲಿನ ಅಂಶಗಳನ್ನು ಪರಿಶೀಲಿಸಿ ಪ್ರಾಯೋಗಿಕ ಜಾರಿಗೆ ತರಬಹುದಾದ ಹೊಸ ವರದಿ ನೀಡಲು ಕಸ್ತೂರಿ ರಂಗನ್ ಸಮಿತಿಯನ್ನು ರಚಿಸಲಾಯಿತು. ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಎಂಬ 6 ರಾಜ್ಯಗಳಲ್ಲಿ ಪಶ್ಚಿಮ ಘಟ್ಟಗಳು ಹರಡಿಕೊಂಡಿದ್ದು, ಇವುಗಳ ನಾಶ ತಡೆಗಟ್ಟುವುದೇ ರಂಗನ್ ವರದಿಯ ಪ್ರಮುಖ ಉದ್ದೇಶ.
ಪಶ್ಚಿಮ ಘಟ್ಟಗಳ ಒಟ್ಟು ವಿಸ್ತೀರ್ಣದಲ್ಲಿ ಶೇ.37ರಷ್ಟು ಪ್ರದೇಶವನ್ನು (ಸುಮಾರು 60,000 ಚದರ ಕಿ.ಮೀ) 'ಪರಿಸರ ಸೂಕ್ಷ್ಮ ಪ್ರದೇಶ' (Ecologically Sensitive Area - ESA) ಎಂದು ಘೋಷಿಸಬೇಕು.
ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾದ ಭಾಗಗಳಲ್ಲಿ ಯಾವುದೇ ರೀತಿಯ ಗಣಿಗಾರಿಕೆ, ಕ್ವಾರಿ (ಕಲ್ಲು ಗಣಿಗಾರಿಕೆ) ಹಾಗೂ ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು (Thermal Power Plants) ಹಾಗೂ ಭಾರಿ ಮಾಲಿನ್ಯ ಉಂಟುಮಾಡುವ ಕೆಂಪು ವರ್ಗದ (Red Category) ಕೈಗಾರಿಕೆಗಳನ್ನು ಸ್ಥಾಪಿಸಬಾರದು.
20,000 ಚದರ ಮೀಟರ್‌ಗಿಂತ ದೊಡ್ಡದಾದ ಬೃಹತ್ ಕಟ್ಟಡ ನಿರ್ಮಾಣ ಮತ್ತು ಟೌನ್‌ಶಿಪ್‌ಗಳಿಗೆ ಅನುಮತಿ ನೀಡಬಾರದು.
ಸಾಂಪ್ರದಾಯಿಕ ಕೃಷಿ, ಅಡಿಕೆ, ತೋಟಗಾರಿಕೆ ಮತ್ತು ಜನವಸತಿಗೆ ಯಾವುದೇ ಧಕ್ಕೆ ತರದಂತೆ ಯೋಜನೆ ರೂಪಿಸಬೇಕು ಎಂಬುದು ಉಲ್ಲೇಖವಾಗಿದೆ.
ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನ ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಈ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಸ್ತೂರಿ ರಂಗನ್ ಸಮಿತಿಯ ಸಲ್ಲಿಸಿರುವ ವರದಿ ಜಾರಿಯಾದರೆ ಮಲೆನಾಡಿನ ಹಳ್ಳಿಗಳ ಜನರನ್ನು ಜಾಗದಿಂದ ಒಕ್ಕಲೆಬ್ಬಿಸಲಾಗುತ್ತದೆ ಮತ್ತು ಹೊಸ ಮನೆ ಕಟ್ಟಿಕೊಳ್ಳಲು, ಮೂಲಸೌಕರ್ಯ ಅಭಿವೃದ್ಧಿಪಡಿಸಲು ತೊಂದರೆಯಾಗುತ್ತದೆ ಎಂಬ ಭಯ ಸ್ಥಳೀಯರಲ್ಲಿ ಕಾಡಲಾರಂಭಿಸಿದೆ.
ಮಲೆನಾಡಿನ ಬಹತೇಕರು ಕೃಷಿ, ಅಡಿಕೆ ಮತ್ತು ತೋಟಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಹೀಗಾಗಿ, ರೈತರಿಗೆ ತೊಂದರೆ ಆಗದಂತೆ ವಿನಾಯಿತಿ ಕೊಡಿ ಎಂದು ವರದಿ ಹೇಳಿದ್ದರೂ, ಭವಿಷ್ಯದಲ್ಲಿ ಕಠಿಣ ಪರಿಸರ ನಿಯಮಗಳಿಂದಾಗಿ ಕೃಷಿಕರ ಜೀವನೋಪಾಯಕ್ಕೆ ತೊಡಕು ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬ ಆತಂಕ ಎದುರಾಗಿದೆ. ವ್ಯಾಪಕ ವಿರೋಧಗಳು ಭುಗಿಲೆದ್ದಿರುವ ಹಿನ್ನೆಲೆ ಕರ್ನಾಟಕದ ರಾಜಕೀಯ ಪಕ್ಷಗಳು ಈ ವರದಿಯನ್ನು ಇದ್ದಂತೆಯೇ ಜಾರಿಗೊಳಿಸಲು ಒಪ್ಪಿಗೆ ಸೂಚಿಸಿಲ್ಲ.
ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಯ ಆಧಾರದ ಮೇಲೆ ಪರಿಸರ ಸೂಕ್ಷ್ಮ ಪ್ರದೇಶಗಳನ್ನು (ESA) ಗುರುತಿಸಿ ಕರಡು ಅಧಿಸೂಚನೆಗಳನ್ನು (Draft Notifications) ಹೊರಡಿಸುತ್ತಲೇ ಬಂದಿದೆಯಾದರೂ, ಸಂಬಂಧಪಟ್ಟ ರಾಜ್ಯಗಳ ತೀವ್ರ ವಿರೋಧ ಹಾಗೂ ಆಕ್ಷೇಪಣೆಗಳಿಂದಾಗಿ ಈ ವರದಿಯನ್ನು ಇನ್ನೂ ಸಂಪೂರ್ಣವಾಗಿ ಜಾರಿಗೆ ತರುವಲ್ಲಿ ವಿಫಲವಾಗಿದೆ.
ಡಾ. ಕೃಷ್ಣಸ್ವಾಮಿ ಕಸ್ತೂರಿ ರಂಗನ್ ಅವರು 24 ಅಕ್ಟೋಬರ್, 1940ರಲ್ಲಿ ಕೇರಳದ ಎರ್ನಾಕುಲಂನಲ್ಲಿ ಜನಿಸಿದರು. 1994ರಿಂದ 2003 ರವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಭಾರತೀಯ ಬಾಹ್ಯಾಕಾಶ ವಿಜ್ಞಾನಿಯಾದ ಇವರು, 2003ರಿಂದ 2009ರವರೆಗೆ ರಾಜ್ಯಸಭೆ ಸದಸ್ಯರೂ ಆಗಿದ್ದರು. ನಂತರ ಕೇಂದ್ರ ಸರ್ಕಾರದ ಯೋಜನಾ ಆಯೋಗದ ಸದಸ್ಯರಾದರು. ಇದಾದ ಬಳಿಕ ಕಸ್ತೂರಿ ರಂಗನ್ ಸಮಿತಿಯ ಅಧ್ಯಕ್ಷರಾಗಿ ಈ ವರದಿಗೆ ಕಾರಣರಾದರು.
ಕಸ್ತೂರಿ ರಂಗನ್ ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶ ಅಂದರೆ ಶೇ.36.4ರಷ್ಚು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಸೇರಿದಂತೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್ ಯೋಜನೆಗಳನ್ನು ಸಂಪೂರ್ಣವಾಗಿ ನಿಷೇಧ ಹೇರಬೇಕು. ಎಲ್ಲಾ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿತ್ತಿದ್ದಂತೆ ಸ್ಥಗಿತಗೊಳಿಸಬೇಕು. 20,000 ಚ,ಮೀ, ಬೃಹತ್ ರೀತಿಯ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್ಎನಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುದಿದ್ದರೂ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿಯನ್ನು ಪಡೆಯಬೇಕು. ಈ ಪ್ರದೇಶದಲ್ಲಿ ಕಲ್ಲು, ಸಿಮೆಂಟು, ಕೆಮಿಕಲ್ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಾಗಲಿ, ಅನುಮತಿಯಾಗಲಿ ಇಲ್ಲ ಎನ್ನಲಾಗಿದೆ.
ಕಸ್ತೂರಿ ರಂಗನ್ ಸಮಿತಿಯ ವರದಿಯ ಪ್ರಕಾರ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳು ಸೇರಿದಂತೆ ಒಟ್ಟು 56,874 ಚದರ ಕಿಲೋಮೀಟರ್ ಪ್ರದೇಶವನ್ನು 'ಪರಿಸರ ಸೂಕ್ಷ್ಮ ಪ್ರದೇಶ' (ESA) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಜೈಶಂಕರ್, ಕೇಜ್ರಿವಾಲ್, ಸಿಬಿಐ ನಿರ್ದೇಶಕರು... ವಿವಿಐಪಿಗಳಿಗೂ ತಲುಪಿದ ಎಸ್ಐಆರ್ ನೋಟಿಸ್ ಹಿಂದಿದೆ ಈ ಕಾರಣ | SIR Notice
ಕರ್ನಾಟಕದಲ್ಲಿ ಒಟ್ಟು 44,448 ಚದರ ಕಿ.ಮೀ ವಿಸ್ತೀರ್ಣದ ಪಶ್ಚಿಮ ಘಟ್ಟ ಶ್ರೇಣಿಯಿದ್ದು, ಅದರಲ್ಲಿ 20,668 ಚದರ ಕಿ.ಮೀ ಭಾಗವು ಈ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತದೆ. ಇದು ರಾಜ್ಯದ ಬರೋಬ್ಬರಿ 1,573 ಗ್ರಾಮಗಳನ್ನು ಒಳಗೊಳ್ಳುವುದರಿಂದ ಸ್ಥಳೀಯರ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸಿ, ಈ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು 850 ಗ್ರಾಮಗಳಿಗೆ ಸೀಮಿತಗೊಳಿಸಬೇಕೆಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ.