ಅಧಿಕೃತವಾಗಿ ಫೋಟೋದ ಜೊತೆ ಪುತ್ರ ರೈಹಾನ್ ವಾದ್ರಾ ನಿಶ್ಚಿತಾರ್ಥ ಘೋಷಣೆ ಮಾಡಿದ ಪ್ರಿಯಾಂಕಾ ಗಾಂಧಿ | Priyanka Gandhi
ರೈಹಾನ್ ವಾದ್ರಾ ಮತ್ತು ಅವಿವಾ ಬೇಗ್
Published on:
Copied
Follow Us
ನವದೆಹಲಿ: ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದ ಪುತ್ರನ ವಿವಾಹದ ಸುದ್ದಿಯ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್ ನಾಯಕಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ನಿನ್ನೆ(ಜ. 02) ರಂದು ರಾತ್ರಿ ಅಧಿಕೃತವಾಗಿ ರೈಹಾನ್ ವಾದ್ರಾ-ಅವಿವಾ ಬೇಗ್ ನಿಶ್ಚಿತಾರ್ಥದ ಫೋಟೋ ಶೇರ್ ಮಾಡಿ ಘೋಷಣೆ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜೋಡಿಯ ಫೋಟೋ ಹಂಚಿಕೊಂಡು, ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುತ್ತೇನೆ. ನೀವು ಯಾವಾಗಲೂ ಒಬ್ಬರನ್ನೊಬ್ಬರು ಪ್ರೀತಿಸಿ, ಗೌರವಿಸಿ, ಉತ್ತಮ ಸ್ನೇಹಿತರಾಗಿಯೇ ಉಳಿಯಲಿ ಎಂದು ಬರೆದುಕೊಂಡಿದ್ದಾರೆ.
ಎರಡೂ ಕುಟುಂಬದ ಆಪ್ತ ಸದಸ್ಯರು ಭಾಗವಹಿಸಿದ್ದ ಸಮಾರಂಭದ ಫೋಟೋಗಳನ್ನು ಪ್ರಿಯಾಂಕಾ ಗಾಂಧಿ ಮತ್ತು ಪತಿ ರಾಬರ್ಟ್ ವಾದ್ರಾ ಹಂಚಿಕೊಂಡಿದ್ದಾರೆ. ರಾಜಸ್ಥಾನದ ರಣಥಂಬೋರ್‌ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಪೋಟೋದಲ್ಲಿ ರೈಹಾನ್ ಮತ್ತು ಅವಿವಾ ಸಂಜೆಯ ಆಚರಣೆಯ ಸಮಯದಲ್ಲಿ ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿ ಒಟ್ಟಿಗೆ ನಿಂತಿದ್ದಾರೆ.
ಮತ್ತೊಂದು ಚಿತ್ರದಲ್ಲಿ ದಂಪತಿಗಳು ಮಕ್ಕಳಾಗಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವುದನ್ನು ತೋರಿಸಲಾಗಿದೆ. ರೈಹಾನ್ ಬಿಳಿ ಕುರ್ತಾ-ಪೈಜಾಮ ಧರಿಸಿದ್ದರೆ, ಅವಿವಾ ಸಾಸಿವೆ-ಹಳದಿ ಬಣ್ಣದ ಸೂಟ್ ಧರಿಸಿದ್ದಾರೆ.
ಮೂಲಗಳ ಪ್ರಕಾರ 25 ವರ್ಷದ ರೈಹಾನ್ ಕಳೆದ ವಾರ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಅವಿವಾಗೆ ಪ್ರಪೋಸ್ ಮಾಡಿದ್ದು, ಅವರು ಒಪ್ಪಿಕೊಂಡಿದ್ದಾರೆ. ಕಳೆದ 7 ವರ್ಷಗಳಿಂದ ಇಬ್ಬರು ಸಂಬಂಧದಲ್ಲಿದ್ದರು ಎನ್ನಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಮದುವೆ ನಡೆಯುವ ನಿರೀಕ್ಷೆಯಿದೆ.
ರೈಹಾನ್ ಮದುವೆಯಾಗುತ್ತಿರುವ ಅವಿವಾ ದೆಹಲಿ ಮೂಲದ ಕುಟುಂಬದವರು. ತಂದೆ ಇಮ್ರಾನ್ ಬೇಗ್, ತಾಯಿ ನಂದಿತಾ ಬೇಗ್ ಇಂಟೆರಿಯರ್ ಡಿಸೈನರ್. ಜೊತೆಗೆ ಪ್ರಿಯಾಂಕಾ ಗಾಂಧಿಯ ಬಹುಕಾಲದ ಸ್ನೇಹಿತೆಯಾಗಿದ್ದು, ಈಗ ಸಂಬಂಧಿಗಳಾಗುತ್ತಿದ್ದಾರೆ (ಏಜೆನ್ಸೀಸ್).