ಉದ್ಯಮಗಳಿಗೆ ಕರೆಂಟ್ ಶಾಕ್

 ಹೊಸ ವಿದ್ಯುತ್ ಸಂಪರ್ಕ
ಹೊಸ ವಿದ್ಯುತ್ ಸಂಪರ್ಕ
Published on
ಬೆಂಗಳೂರು: ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ರಾಜ್ಯದಲ್ಲಿ ಬರದಿಂದಾಗಿ ಜನಜೀವನದ ಮೇಲೆ ಸಂಕಷ್ಟ ಕವಿದಿರುವ ಹೊತ್ತಿನಲ್ಲಿಯೇ, ಹೊಸ ವಿದ್ಯುತ್ ಸಂಪರ್ಕ ಸಿಗದಿರುವುದು ಮತ್ತೊಂದು ರೀತಿಯ ಸಮಸ್ಯೆ ತಂದಿಟ್ಟಿದೆ. ಇದರಿಂದಾಗಿ ವಾಣಿಜ್ಯ ಕಟ್ಟಡ, ಹೊಸ ಉದ್ಯಮಗಳ ಪಾಲಿಗೆ ಬರಸಿಡಿಲು ಬಡಿದಂತಾಗಿದ್ದು, ಪರಿಣಾಮವಾಗಿ ಉದ್ಯೋಗ ಸೃಷ್ಟಿಗೆ ಹಿನ್ನಡೆ ಆಗುವ ಜತೆಗೆ ಸರ್ಕಾರದ ಆದಾಯಕ್ಕೂ ಹೊಡೆತ ಬಿದ್ದಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ, 2025ರ ಏ.4ರಿಂದ ರಾಜ್ಯದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಇದ್ದರಷ್ಟೇ ಅರ್ಜಿ ಸಲ್ಲಿಸುವಂತೆ ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಗಳು ಷರತ್ತು ವಿಧಿಸಿದವು. ಪರಿಣಾಮ ಏ.4ಕ್ಕೂ ಮೊದಲು ಸಲ್ಲಿಸಿದ್ದ 2.50 ಲಕ್ಷ ಅರ್ಜಿಗಳು ಹಾಗೂ ಇದಾದ ಮೇಲೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಸಲ್ಲಿಸಿದ್ದ 4.50 ಲಕ್ಷ ಸೇರಿ ಒಟ್ಟಾರೆ ಏಳು ಲಕ್ಷ ಜನರು ಹೊಸ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಮಾನವಿಯತೆ ಆಧಾರದ ಮೇಲೆ 2,400 ಚದರಡಿವರೆಗಿನ(+ಶೇ.20 ಹೆಚ್ಚುವರಿ ವ್ಯಾತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಜಿ+3 ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಪಾರ್ಕಿಂಗ್+4 ಮಹಡಿ ನಿರ್ಮಾಣ ಕಾರ್ಯ ಆ.15ರ ಒಳಗೆ ಪೂರ್ಣವಾಗಿರುವ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.
ಆದರೆ, ವಾಣಿಜ್ಯ ಕಟ್ಟಡ ಮತ್ತು ಹೊಸ ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೆ ಇರುವುದರಿಂದ ಬಂಡವಾಳ ಹೂಡಿಕೆದಾರರಲ್ಲಿ ಆತಂಕ ಹೆಚ್ಚಾಗುತ್ತಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಹಂಚಿಕೆ ಮಾಡಿರುವ ಸೈಟುಗಳಲ್ಲಿ ನಿರ್ಮಾಣ ಆಗುತ್ತಿರುವ ಕೈಗಾರಿಕಾ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಸಿಗುತ್ತಿದೆ. ಅದರಲ್ಲಿಯೂ 2,500 ಚದರಡಿ ಇರುವ ಜಾಗದಲ್ಲಿ ಕಟ್ಟಡ ನಿರ್ಮಾಣದ ವೇಳೆ ಷರತ್ತು ಪಾಲಿಸಲು ಉದ್ಯಮಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯುತ್ ಸಂಪರ್ಕ ಸಹ ಸಿಗುತ್ತಿಲ್ಲ. ಇನ್ನು, ಕೆಐಎಡಿಬಿ ಅಭಿವೃದ್ಧಿಪಡಿಸಿದ ಬಡಾವಣೆ ಅಲ್ಲದೆ, ಕಂದಾಯ ಜಾಗದಲ್ಲಿಯೂ ಕೈಗಾರಿಕೆಗಳನ್ನು ಸ್ಥಾಪಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಉದ್ದಿಮೆಗಳ ಕಷ್ಟವೇನು?

ಉದಾಹರಣೆಗೆ ಬೆಂಗಳೂರು ನಗರದಲ್ಲೇ ಮಾಗಡಿ ರಸ್ತೆಯ ಸೀಗೇಹಳ್ಳಿ ಗೇಟ್, ಕುಂಬಳಗೋಡು, ಮಾದನಾಯಕನಹಳ್ಳಿ, ರಾಮೋಹಳ್ಳಿಯಂತಹ ಪ್ರದೇಶದಲ್ಲಿ ಸಾಕಷ್ಟು ಕೈಗಾರಿಕೆಗಳು ನಡೆಯುತ್ತಿವೆ. ಇಂತಹ ಜಾಗದಲ್ಲಿ ಹೊಸ ಕೈಗಾರಿಕೆ ಶುರು ಮಾಡಲು ಬ್ಯಾಂಕ್ ಸಾಲ ಪಡೆದು ಕಟ್ಟಡ ನಿರ್ಮಿಸಿರುವ ಜತೆಗೆ ವಿದೇಶದಿಂದ ಯಂತ್ರಗಳನ್ನು ಖರೀದಿಸಿದ್ದಾರೆ. ವಿದ್ಯುತ್ ಸಂಪರ್ಕ ಸಿಗದೆ ಕೈಗಾರಿಕೆಗೆ ಚಾಲನೆ ನೀಡಲು ಸಾಧ್ಯವಾಗುತ್ತಿಲ್ಲ. ಇತ್ತ ಹೊಸ ಉದ್ಯೋಗ ಸಹ ಸೃಷ್ಟಿಯಾಗದೆ ನಿರುದ್ಯೋಗ ಹೆಚ್ಚಾಗುತ್ತಿದೆ. ಕೈಗಾರಿಕೆಗಳಿಗೆ ವಿದ್ಯುತ್ ಮಾರಾಟದಿಂದಲೇ ಇಂಧನ ಇಲಾಖೆಗೆ ಶೇ.80 ಲಾಭಾಂಶ ಸಿಗುತ್ತಿತ್ತು. ಇದೀಗ ವಾರ್ಷಿಕ ಆದಾಯದಲ್ಲಿ ಇಳಿಮುಖವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಳುಬಿದ್ದ ವಾಣಿಜ್ಯ ಕಟ್ಟಡ

ಹೊರವರ್ತುಲ ರಸ್ತೆಗಳು ಮತ್ತು 80 ಅಡಿ ರಸ್ತೆ ಸೇರಿದಂತೆ ವಿವಿಧೆಡೆ ನಿರ್ಮಾಣ ಮಾಡಿರುವ ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನಿಲ್ಲಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ಯಾವುದೇ ಷರತ್ತು ವಿಧಿಸದೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದವು. ಇದರಿಂದ ಸೈಟ್ ಮಾಲೀಕರು ಬಾಡಿಗೆ ಹಣ ಬರಲಿದೆ ಎಂಬ ಭರವಸೆಯಲ್ಲಿ ಬ್ಯಾಂಕ್ ಮತ್ತು ಕೈಸಾಲ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟು ಕಟ್ಟಡ ನಕ್ಷೆ, ಒಸಿ ಇಲ್ಲದೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ವಸತಿ ಕಟ್ಟಡಗಳಿಗೆ ಕೊಟ್ಟ ರೀತಿಯಲ್ಲೇ ಒಮ್ಮೆ ಸರ್ಕಾರ ವಿನಾಯಿತಿ ಕೊಡಲಿದೆ ಎಂದು ಬಹುತೇಕರು ಕಟ್ಟಡ ನಿರ್ಮಾಣ ಪೂರ್ಣ ಮಾಡಿದ್ದಾರೆ. ಇನ್ನೂ ಕೆಲವರು ಅರ್ಧಕ್ಕೆ ನಿಲ್ಲಿಸಿದ್ದು, ಪಾಳುಬಿದ್ದಿವೆ. ಬಾಡಿಗೆ ಹಣವೂ ಇಲ್ಲದೆ ಬ್ಯಾಂಕ್ ಸಾಲದ ಕಂತು ಪಾವತಿ ಮಾಡುವ ಪರಿಸ್ಥಿತಿ ಎದುರಾಗಿದ್ದು, ಲಕ್ಷಾಂತರ ಜನರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಸ್ವಂತ ಮನೆಯಲ್ಲಿ ಕಚೇರಿಗೂ ಬ್ರೇಕ್ :

ಹೊಸ ಮನೆ ನಿರ್ಮಾಣದ ವೇಳೆ ನೆಲಮಹಡಿಯಲ್ಲಿ ಸ್ವಂತ ಕಚೇರಿ ತೆರೆಯಲು ಶೆಟರ್ ಅಳವಡಿಕೆ ಅಥವಾ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದರೂ ವಾಣಿಜ್ಯ ಕಟ್ಟಡವೆಂದು ಪರಿಗಣಿಸಿ ಸರ್ಕಾರ ವಿನಾಯಿತಿ ಕೊಡುತ್ತಿಲ್ಲ. ವಕೀಲರು, ವೈದ್ಯರು, ಸಿವಿಲ್ ಇಂಜಿನಿಯರ್‌ಗಳು, ಸಿಎಗಳು ಸೇರಿದಂತೆ ವೃತ್ತಿಪರರು ತಮ್ಮ ಸ್ವಂತ ಮನೆಯಲ್ಲಿ ಕಚೇರಿ ತೆರೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ವಾಸದ ಮನೆಗೂ ವಿದ್ಯುತ್ ಸಂಪರ್ಕ ಸಿಗದೆ ಪರದಾಟ ನಡೆಸುವಂತಾಗಿದೆ. ಶೆಟರ್ ತೆಗೆದು ಗೋಡೆ ಕಟ್ಟಿ ವಿದ್ಯುತ್ ಸಂಪರ್ಕ ಪಡೆದಿರುವ ಸಾಕಷ್ಟು ಉದಾಹರಣೆಗಳಿವೆ. ಕೆಲವರು ಕೇವಲ ವಾಸಕ್ಕೆ ಬಳಸುತ್ತೇವೆ, ವಾಣಿಜ್ಯ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಪ್ರಮಾಣಪತ್ರ ಬರೆದುಕೊಡುತ್ತೇವೆ ಎಂದರೂ ಎಸ್ಕಾಂಗಳು ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ.

ಸ್ಟಾರ್ಟಪ್‌ಗೂ ಕಂಟಕ

ನವೋದ್ಯಮಿಗಳು ಹೊಸ ಕಂಪನಿ ಆರಂಭಿಸಲು ವಿದ್ಯುತ್ ಸಂಪರ್ಕ ಪಡೆಯುವುದೇ ದೊಡ್ಡ ತಲೆನೋವಾಗಿದೆ. ಕಡಿಮೆ ಬಂಡವಾಳದಲ್ಲಿ ಸ್ಟಾರ್ಟಪ್ ಶುರು ಮಾಡಬೇಕೆಂದುಕೊಂಡರೆ ಸಣ್ಣದೊಂದು ಕಚೇರಿ ಅಥವಾ ವಾಣಿಜ್ಯ ಕಟ್ಟಡ ಸಿಗುತ್ತಿಲ್ಲ. ಏಕೆಂದರೆ ವಿದ್ಯುತ್ ಸಂಪರ್ಕ ಇಲ್ಲದೆ ಲಕ್ಷಾಂತರ ಕಟ್ಟಡಗಳ ಗೃಹಪ್ರವೇಶವೇ ಆಗಿಲ್ಲ.
ಆಸ್ಪತ್ರೆ, ಶಾಲೆಗೂ ಸಿಗದ ಬೆಳಕು
ಸ್ವಂತ ಮನೆಯಲ್ಲಿ ಕ್ಲಿನಿಕ್ ಶುರು ಮಾಡಲು ವೈದ್ಯರಿಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ದಂತ ವೈದ್ಯರು ನೆಲಮಹಡಿಯಲ್ಲಿ ಕ್ಲಿನಿಕ್ ತೆರೆಯಬೇಕಾದರೆ ಯಂತ್ರಗಳ ಚಾಲನೆಗೆ ಕನಿಷ್ಠ 3 ರಿಂದ 4 ಕಿಲೋವಾಟ್ ವಿದ್ಯುತ್ ಬೇಕಿದೆ. ಇದಕ್ಕೆ ಎಸ್ಕಾಂಗಳು ಅನುಮತಿಸುತ್ತಿಲ್ಲ. ಆಸ್ಪತ್ರೆ, ಶಾಲೆಗಳನ್ನು ತೆರೆಯಲು ಸ್ಥಳೀಯ ಸಂಸ್ಥೆಗಳು ಅನುಮತಿ ನೀಡಿದ್ದು, ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ. ಇವುಗಳನ್ನು ವಾಣಿಜ್ಯ ಕಟ್ಟಡವೆಂದು ಪರಿಗಣಿಸಿ ಬೆಳಕು ನೀಡುವ ವಿಚಾರದಲ್ಲಿ ಸರ್ಕಾರ ದೂರ ಇಟ್ಟಿದೆ.

ಹೊಸ ವಿದ್ಯುತ್ ಸಂಪರ್ಕ ಸಿಗದಿದ್ದರ ಪರಿಣಾಮಗಳು

*ಆಂಧ್ರಪ್ರದೇಶ, ತಮಿಳುನಾಡು ಗಡಿಯತ್ತ ಕೈಗಾರಿಕೆಗಳ ಸ್ಥಳಾಂತರ
*ವಾಣಿಜ್ಯ ಕಟ್ಟಡ ಹಾಗೂ ಕೈಗಾರಿಕೆಗಳಿಗೆ ವಿದ್ಯುತ್ ಮಾರಾಟ ಇಳಿಕೆ
*ಇಂಧನ ಇಲಾಖೆಯ ಆದಾಯ ಪ್ರಮಾಣದಲ್ಲಿ ತೀವ್ರ ಮಟ್ಟದ ಕುಸಿತ
*ಹೊಸ ಕೈಗಾರಿಕೆ ಶುರುವಾಗದೆ ಉದ್ಯೋಗ ಸಹ ಸೃಜನೆ ಆಗದ ಸ್ಥಿತಿ
* ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕುಸಿತ, ಕೂಲಿ ಸಿಗದೆ ಪರದಾಟ
*ಸಾಲದ ಸುಳಿಗೆ ಸಿಲುಕಿದ ಸಣ್ಣ, ಗುಡಿ ಕೈಗಾರಿಕೆಗಳ ಉದ್ಯಮಿಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net