

ನವದೆಹಲಿ: ಕಾನೂನು ವ್ಯಾಪ್ತಿ ನಿಮ್ಮದಲ್ಲ ಅಂದ್ರೆ ರಾಜೀನಾಮೆ ನೀಡಿ ಎಂದು ಸಿಜೆಐ ಸೂರ್ಯಕಾಂತ್ ಅವರನ್ನು ಗುರಿಯಾಗಿಸಿ ಎಕ್ಸ್ನಲ್ಲಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್‌ನ ಎಲ್ಲಾ ಪದಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ಶುಕ್ರವಾರ(ನ. 06) ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಪೋಸ್ಟ್‌ಗೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್ ಪರವಾಗಿ ಬೇಷರತ್ತಾದ ಕ್ಷಮೆಯಾಚನೆಯನ್ನು ಸಲ್ಲಿಸಲಾಗಿದ್ದರೂ, ನ್ಯಾಯಾಲಯವು ಕ್ಷಮೆಯಾಚನೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸಿದೆ. ಮತ್ತು ಸಂವಿಧಾನದ 139ನೇ ವಿಧಿಯ ಅಡಿಯಲ್ಲಿ ನ್ಯಾಯಾಂಗ ನಿಂದನೆ ಕ್ರಮಗಳನ್ನು ಏಕೆ ಪ್ರಾರಂಭಿಸಬಾರದು ಎಂದು ಕೇಳಿದೆ.
ನ್ಯಾ. ಅರವಿಂದ್ ಕುಮಾರ್ ಮತ್ತು ನ್ಯಾ. ವಿಪುಲ್ ಎಂ ಪಾಂಚೋಲಿ ಅವರನ್ನೊಳಗೊಂಡ ಪೀಠವು, ಸಿಜೆಐ ಸೂರ್ಯಕಾಂತ್ ವಿರುದ್ಧ ಕೇರಳ ಕಾಂಗ್ರೆಸ್‌ನ 'ಎಕ್ಸ್' ಹ್ಯಾಂಡಲ್‌ನಲ್ಲಿ ಪ್ರಕಟವಾದ ಪೋಸ್ಟ್‌ಗೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ವಿಚಾರಣೆ ವೇಳೆ, ತೀರ್ಪುಗಳು ಯಾವಾಗಲೂ ಟೀಕೆಗೆ ಮುಕ್ತವಾಗಿರುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯವು ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಬೆದರಿಕೆಯ ಗುರಾಣಿಯಾಗಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ನ್ಯಾಯಾಲಯದ ಅಧಿಕಾರವನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಕಬ್ಬಿಣದ ಕೈಯಿಂದ ಎದುರಿಸಬೇಕಾಗುತ್ತದೆ ಎಂದು ಪೀಠ ಹೇಳಿದೆ.
ನ್ಯಾಯಾಲಯದ ಅಧಿಕಾರಕ್ಕೆ ರಾಜಕೀಯ ಅನುಮೋದನೆ ಅಗತ್ಯವಿಲ್ಲ. ಅದು ಕಾನೂನಿನ ಆಳ್ವಿಕೆಯ ಮೇಲೆ ನಿಂತಿದೆ. ನ್ಯಾಯದ ಆಡಳಿತವು ಸ್ಥಾಪನೆಯಾದಾಗ, ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳಬೇಕು. ನ್ಯಾಯಾಂಗದ ಸ್ವಾತಂತ್ರ್ಯವು ರಾಜಕೀಯ ಅನುಕೂಲತೆಯ ವಿಷಯವಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
ಈ ವಿಷಯದಲ್ಲಿ ಕ್ರಿಮಿನಲ್ ಅಥವಾ ನಾಗರಿಕ ನ್ಯಾಯಾಂಗ ನಿಂದನೆ ನಿಬಂಧನೆಗಳು ಅನ್ವಯವಾಗುತ್ತವೆಯೇ ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್ ಹಿರಿಯ ವಕೀಲರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿತು ಮತ್ತು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ಸಹಾಯವನ್ನೂ ಕೋರಿತು.
ಇನ್ನೂ ಕೇರಳ ಕಾಂಗ್ರೆಸ್ ಘಟಕದ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪ್ರಕಟವಾದ ವಿವಾದಾತ್ಮಕ ಪೋಸ್ಟ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಮೀನೇಶ್ ದುಬೆ ಕಾನೂನು ನೋಟಿಸ್ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಕ್ಟೋಬರ್ 27ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಕ್ಷಮೆಯಾಚಿಸಿತ್ತು.
ವಿಚಾರಣೆ ವೇಳೆ ಕೆಪಿಸಿಸಿ ಪರ ಹಾಜರಿದ್ದ ವಕೀಲರು, ಈ ವಿಷಯದಲ್ಲಿ ಅಫಿಡವಿಟ್ ಸಲ್ಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೋಟಿಸ್ ಅನ್ನು ಕೇವಲ ಒಬ್ಬ ವ್ಯಕ್ತಿಗೆ ಅಲ್ಲ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿತು.
ಮುಂದುವರೆದು, ಅಫಿಡವಿಟ್ ನಿಮ್ಮ ಲೇಖನಿಯಿಂದ ಬಂದಿದೆಯೇ ಅಥವಾ ನಿಮ್ಮ ಹೃದಯದಿಂದ ಬಂದಿದೆಯೇ ಎಂದು ನಾವು ನೋಡುತ್ತೇವೆ. ಕ್ಷಮೆಯಾಚನೆಯ ಪ್ರಾಮಾಣಿಕತೆ ಮತ್ತು ನೈಜತೆಯನ್ನು ನಿರ್ಣಯಿಸಿದ ನಂತರವೇ ಮುಂದಿನ ಕ್ರಮವನ್ನು ಪರಿಗಣಿಸುವುದಾಗಿ ಸೂಚಿಸಿತು.
ಅ. 12ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಸಿಜೆಐ ಭೇಟಿಗೆ ಇಂಡಿಯಾ ಬ್ಲಾಕ್ ನಾಯಕರು ಸಮಯ ಕೇಳಿದ್ದರು. ಆದ್ರೆ ಸಿಜೆಐ ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಅರ್ಜಿಗಳು ತಮ್ಮ ಪೀಠದ ಮುಂದೆ ಇರುವುದರಿಂದ ಭೇಟಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಬಳಿಕ ಇಂಡಿಯಾ ಬ್ಲಾಕ್ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸಿದ ಅರ್ಜಿ ಸಲ್ಲಿಸಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಜೆಐ ಸೂರ್ಯಕಾಂತ್ ಕಾನೂನು ಸುವ್ಯವಸ್ಥೆ ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ತಕ್ಷಣ ಕೇರಳ ಕಾಂಗ್ರೆಸ್ ಘಟಕ, ಮಿಸ್ಟರ್ ಸೂರ್ಯಕಾಂತ್, ಕಾನೂನು ಸುವ್ಯವಸ್ಥೆ ನಿಮ್ಮ ವ್ಯಾಪ್ತಿ ಅಲ್ಲ ಅಂದ್ರೆ ರಾಜೀನಾಮೆ ನೀಡಿ. ನಿಮ್ಮ ಸ್ಥಾನಕ್ಕೆ ಬದಲಿ ವ್ಯಕ್ತಿಯನ್ನು ನಾವು ಹುಡುಕುತ್ತೇವೆ ಎಂದು ಪೋಸ್ಟ್ ಹಾಕಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿತ್ತು (ಏಜೆನ್ಸೀಸ್).