ಮುಂಬೈ: ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವುದು ಮಾತ್ರವಲ್ಲ, ಪ್ರಶ್ನಿಸುವ ಪೊಲೀಸರ ಮೇಲೆಯೇ ವಾಹನ ಚಲಾಯಿಸುವ ಘಟನೆಗಳು ಹೆಚ್ಚಾಗುತ್ತಿವೆಯೇ? ಮುಂಬೈನಲ್ಲಿ ಸಂಚಾರ ಪೊಲೀಸರ ಮೇಲೆ ವಾಹನ ಸವಾರರು ನಡೆಸುತ್ತಿರುವ ದಾಳಿಗಳು ಇದೀಗ ಗಂಭೀರ ಚರ್ಚೆಗೆ ಕಾರಣವಾಗಿವೆ. ಇತ್ತೀಚೆಗೆ ಜುಹು ಪ್ರದೇಶದಲ್ಲಿ ಜೂಹಿ ಮೆಹ್ತಾ ಎಂಬ ಮಹಿಳೆ ತನ್ನ ಬಿಎಂಡಬ್ಲ್ಯು ಕಾರನ್ನು ಟ್ರಾಫಿಕ್ ಕಾನ್ಸ್ಟೇಬಲ್ ಕಡೆಗೆ ಚಲಾಯಿಸಿದ ಆರೋಪ ಕೇಳಿಬಂದಿದೆ. ಇಂತಹ ಘಟನೆಗಳು ವಾಹನ ಸವಾರರಲ್ಲಿ ಕಾನೂನಿನ ಭಯ ಕಡಿಮೆಯಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ.
ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚಿಸುವ ಪೊಲೀಸರ ಮೇಲೆಯೇ ವಾಹನ ಚಲಾಯಿಸುವ ಘಟನೆಗಳು ಒಂದೆರಡಲ್ಲ. 2025ರ ಸೆಪ್ಟೆಂಬರ್ 9ರಂದು ವರ್ಲಿಯ ಕೋಸ್ಟಲ್ ರೋಡ್ ಮತ್ತು ಬಾಂದ್ರಾ-ವರ್ಲಿ ಸೀ ಲಿಂಕ್ ಸಂಪರ್ಕ ರಸ್ತೆಯಲ್ಲಿ ವೇಗವಾಗಿ ಬಂದ ಹುಂಡೈ ಗ್ರ್ಯಾಂಡ್ ಐ10 ಕಾರು ಇಬ್ಬರು ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ದತ್ತಾತ್ರೇಯ ಕುಂಬಾರ್ ಎಂಬ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟಿದ್ದರು.ಇನ್ನು 2026ರ ಜನವರಿ 1ರಂದು ವರ್ಲಿಯ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಸಮೀಪ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ತಪಾಸಣೆ ನಡೆಯುತ್ತಿತ್ತು. ಈ ವೇಳೆ ವೇಗವಾಗಿ ಬಂದ ಸ್ಕೂಟರ್ ಟ್ರಾಫಿಕ್ ಕಾನ್ಸ್ಟೇಬಲ್ ಆಶಿಶ್ ನಿಘೋಟ್ ಅವರಿಗೆ ಡಿಕ್ಕಿ ಹೊಡೆದಿತ್ತು ಎಂದು ವರದಿಯಾಗಿದೆ.
ಇಂತಹ ಘಟನೆಗಳ ಹಿಂದೆ ಹಲವು ಕಾರಣಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಾಂಬೆ ಹೈಕೋರ್ಟ್ ವಕೀಲ ತ್ರಿವಿಕ್ರಮ್ ಕುಮಾರ್ ಕರ್ನಾನಿ ಅವರ ಪ್ರಕಾರ, ಸಂಚಾರ ದಟ್ಟಣೆಯಿಂದ ಉಂಟಾಗುವ ಕಿರಿಕಿರಿ, ನಾಗರಿಕ ಪ್ರಜ್ಞೆಯ ಕೊರತೆ ಮತ್ತು ಪೊಲೀಸರು ಅನ್ಯಾಯವಾಗಿ ದಂಡ ವಿಧಿಸುತ್ತಿದ್ದಾರೆ ಎಂಬ ಅಸಮಾಧಾನ ಇಂತಹ ವರ್ತನೆಗೆ ಕಾರಣವಾಗಬಹುದು. ಆದರೆ ಕಾನೂನನ್ನು ಕಟ್ಟುನಿಟ್ಟಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿಗೊಳಿಸುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
ಮಾಜಿ ಸಹಾಯಕ ಪೊಲೀಸ್ ಆಯುಕ್ತ ವಿಶ್ರಾಮ್ ಅಭ್ಯಂಕರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಕಾನೂನು ಉಲ್ಲಂಘನೆಯ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲ ಇನ್ಫ್ಲುಯೆನ್ಸರ್ಗಳು ಒಂದೇ ಬೈಕ್ನಲ್ಲಿ ಮೂವರು ಪ್ರಯಾಣಿಸುವುದು, ಕಾರಿನ ಬಾನೆಟ್ ಮೇಲೆ ಕುಳಿತುಕೊಳ್ಳುವುದು ಮತ್ತು ಅತಿವೇಗದಲ್ಲಿ ವಾಹನ ಚಲಾಯಿಸುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇಂತಹ ಕೃತ್ಯಗಳನ್ನು ಹೆಮ್ಮೆಯ ಸಂಗತಿಯಂತೆ ತೋರಿಸುವುದು ಇತರರ ಮೇಲೂ ಪ್ರಭಾವ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಪೊಲೀಸ್ ಅಧಿಕಾರಿ ಹಾಗೂ ಹೈಕೋರ್ಟ್ ವಕೀಲ ಧನಂಜಯ್ ಕಂಧಾರ್ಕರ್ ಅವರ ಪ್ರಕಾರ, ದುರ್ಬಲ ಕಾನೂನು ಜಾರಿ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿನ ವಿಳಂಬದಿಂದ ಸಂಚಾರ ನಿಯಮಗಳ ಬಗ್ಗೆ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ.ರಸ್ತೆ ನಿಯಮ ಉಲ್ಲಂಘನೆ ಕೇವಲ ದಂಡ ಪಾವತಿಸುವ ವಿಚಾರವಲ್ಲ. ಅದು ಸಾರ್ವಜನಿಕರ ಮತ್ತು ಪೊಲೀಸರ ಜೀವಕ್ಕೂ ಅಪಾಯ ತಂದೊಡ್ಡಬಹುದು. ಹಣ ಅಥವಾ ಪ್ರಭಾವದಿಂದ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಎಂಬ ಮನಸ್ಥಿತಿಗೆ ಕಡಿವಾಣ ಹಾಕಲು ಕಾನೂನಿನ ಸಮಾನ ಮತ್ತು ಕಟ್ಟುನಿಟ್ಟಿನ ಜಾರಿ ಅಗತ್ಯವಾಗಿದೆ, ( ಏಜೆನ್ಸಿಸ್).