ರಸ್ತೆಬದಿಯ ಅಂಗಡಿಯಲ್ಲಿ 'ಜಲಮುರಿ' ಸವಿದ ಪ್ರಧಾನಿ ಮೋದಿ; ಜಾರ್ಗ್ರಾಮ್‌ ಜನರ ಮನಗೆದ್ದ ಅನಿರೀಕ್ಷಿತ ಭೇಟಿ! | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಮುಗಿಸಿ ವಾಪಸಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಹಠಾತ್ ಆಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ರಸ್ತೆಬದಿಯ ಸಣ್ಣ ಅಂಗಡಿಯೊಂದಕ್ಕೆ ಭೇಟಿ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಬಂಗಾಳದ ಅತ್ಯಂತ ಜನಪ್ರಿಯ ತಿಂಡಿಯಾದ ಜಲಮುರಿ ಅಂಗಡಿಯ ಮುಂದೆ ನಿಂತ ಪ್ರಧಾನಿ, ಅಲ್ಲಿನ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತರು. ಅಂಗಡಿಯ ಮಾಲೀಕರು ಮೋದಿ ಸಮ್ಮುಖದಲ್ಲೇ ತಾಜಾ ಜಲಮುರಿಯನ್ನು ಸಿದ್ಧಪಡಿಸಿದರು. ಇದನ್ನು ಕುತೂಹಲದಿಂದ ಗಮನಿಸಿದ ಪ್ರಧಾನಿ ಮೋದಿ ತಿಂಡಿಯನ್ನು ರುಚಿ ನೋಡಿದರು.
ಇದು ಕೇವಲ ತಿಂಡಿ ಸವಿಯುವುದಕ್ಕೆ ಸೀಮಿತವಾಗದೆ, ಅಂಗಡಿಯ ಮಾಲೀಕರು ಮತ್ತು ಸುತ್ತಮುತ್ತಲ ನಿವಾಸಿಗಳೊಂದಿಗೆ ಅತ್ಯಂತ ಸಹಜವಾಗಿ ಸಂವಹನ ನಡೆಸಿದರು. ಅವರ ದೈನಂದಿನ ಜೀವನೋಪಾಯ ಮತ್ತು ಕೆಲಸದ ಬಗ್ಗೆ ವಿಚಾರಿಸಿದರು. ಈ ಅನಿರೀಕ್ಷಿತ ಭೇಟಿಯಿಂದ ಉತ್ತೇಜಿತರಾದ ಸ್ಥಳೀಯರು ಮೋದಿ, ಮೋದಿ ಮತ್ತು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುವ ಮೂಲಕ ಆ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದರು.
ಮಕ್ಕಳೊಂದಿಗೆ ತಿಂಡಿ ಹಂಚಿಕೊಂಡ ಪ್ರಧಾನಿ
ಈ ಭೇಟಿಯ ವೇಳೆ ಪ್ರಧಾನಿ ಮೋದಿ ಸರಳತೆ ಎದ್ದು ಕಾಣುತ್ತಿತ್ತು. ತಾವು ಸವಿಯುತ್ತಿದ್ದ ಜಲಮುರಿಯನ್ನು ಅಲ್ಲಿ ಹಾಜರಿದ್ದ ಪುಟ್ಟ ಮಕ್ಕಳೊಂದಿಗೆ ಹಂಚಿಕೊಂಡರು. ಅಲ್ಲದೆ, ಸ್ಥಳೀಯ ಮಹಿಳೆಯರೊಂದಿಗೆ ಸಂಕ್ಷಿಪ್ತವಾಗಿ ಮಾತನಾಡಿದರು. ಈ ವೇಳೆ ಮಹಿಳೆಯೊಬ್ಬರು, ಸರ್ಕಾರದ ಯೋಜನೆಗಳು ತಮ್ಮ ಕುಟುಂಬದ ಜೀವನೋಪಾಯವನ್ನು ಸುಧಾರಿಸಲು ಹೇಗೆ ಸಹಕಾರಿಯಾದವು ಎಂಬುದನ್ನು ನೆನಪಿಸಿಕೊಂಡು ಭಾವುಕರಾದರು ಎನ್ನಲಾಗಿದೆ.
ಅಂಗಡಿಯ ಮಾಲೀಕರು ಈ ಬಗ್ಗೆ ಪ್ರತಿಕ್ರಿಯಿಸಿ, ಪ್ರಧಾನಿಯವರ ಭೇಟಿಯ ಬಗ್ಗೆ ತಮಗೆ ಯಾವುದೇ ಮುನ್ಸೂಚನೆ ಇರಲಿಲ್ಲ, ಅವರು ಬಂದು ನೇರವಾಗಿ ಒಳ್ಳೆಯ ಜಲಮುರಿ ಕೊಡಿ ಎಂದು ಕೇಳಿದರು ಎಂದು ಸಂಭ್ರಮದಿಂದ ಹಂಚಿಕೊಂಡರು. ಈ ಭೇಟಿಯ ಫೋಟೋಗಳನ್ನು ಪ್ರಧಾನಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net