ನೆರೆರಾಷ್ಟ್ರದ ನವೋದಯಕ್ಕೆ ಭಾರತದ ಶುಭ ಹಾರೈಕೆ.. ತಾರಿಕ್ ರೆಹಮಾನ್​- ಮೋದಿ ಫೋನ್ ಸಂಭಾಷಣೆಯಲ್ಲಿ ಅಡಗಿದೆ ದೊಡ್ಡ ಸಂದೇಶ! | PM Modi dials Tarique Rahman

PM Modi dials Tarique Rahman
PM Modi dials Tarique Rahman
Published on
ಢಾಕಾ: ಬಾಂಗ್ಲಾದೇಶದ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿರುವ ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್​ರಿಗೆ ಇಂದು (ಫೆ.13 ಶುಕ್ರವಾರ) ದೂರವಾಣಿ ಕರೆ ಮಾಡಿರುವ ಪ್ರಧಾನಿ ಮೋದಿ (PM Modi dials Tarique Rahman), ತಾರಿಕ್​ರನ್ನು ಅಭಿನಂದಿಸುತ್ತಾ, ಭಾರತ ಬೆಂಬಲದ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ.
ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿರುವ ಪ್ರಧಾನಿ ಮೋದಿ, ತಾರಿಕ್ ರೆಹಮಾನ್ ಅವರೊಂದಿಗೆ ಮಾತನಾಡಲು ಸಂತೋಷವಾಯಿತು. ಬಾಂಗ್ಲಾದೇಶ ಚುನಾವಣೆಯಲ್ಲಿನ ಗಮನಾರ್ಹ ಗೆಲುವಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.
ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಅವರ ಪ್ರಯತ್ನಕ್ಕೆ ನನ್ನ ಶುಭಾಶಯಗಳು ಮತ್ತು ಬೆಂಬಲವನ್ನು ತಿಳಿಸಿದ್ದೇನೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಎರಡು ನಿಕಟ ನೆರೆಹೊರೆಯವರಾಗಿ, ನಮ್ಮ ಎರಡೂ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ಪುನರುಚ್ಚರಿಸಿದ್ದೇನೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.
ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ದ ತಾರಿಕ್ ರೆಹಮಾನ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಗೆಲುವು ಬಾಂಗ್ಲಾದೇಶದ ಜನರು ನಿಮ್ಮ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ಭಾರತವು ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ ಬೆಂಬಲವಾಗಿ ನಿಲ್ಲುವುದನ್ನು ಮುಂದುವರಿಸುತ್ತದೆ.
ನಮ್ಮ ಬಹುಮುಖಿ ಸಂಬಂಧಗಳನ್ನು ಬಲಪಡಿಸಲು ಮತ್ತು ಸಾಮಾನ್ಯ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
13ನೇ ಸಂಸತ್ ಚುನಾವಣೆಯಲ್ಲಿ ಬಿಎನ್‌ಪಿ ಭರ್ಜರಿ ಜಯ ಸಾಧಿಸಿದ್ದು, ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಬಿಎನ್‌ಪಿ 213, ಜಮಾತ್ ಮತ್ತು ಮಿತ್ರಪಕ್ಷಗಳು 71, ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶ ಒಂದು ಮತ್ತು ಇತರರು 6 ಸ್ಥಾನಗಳನ್ನು ಗೆದ್ದಿದ್ದಾರೆ. ಚುನಾವಣೆಯಲ್ಲಿ ಮುಖ್ಯವಾಗಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ ಮತ್ತು ಅದರ ಹಿಂದಿನ ಮಿತ್ರ ಪಕ್ಷ ಜಮಾತ್-ಇ-ಇಸ್ಲಾಮಿ ನಡುವೆ ಸ್ಪರ್ಧೆ ಕಂಡುಬಂದಿದೆ. ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವು ಪಕ್ಷವನ್ನು ವಿಸರ್ಜಿಸಲಾಗಿರುವುದರಿಂದ ಭಾಗವಹಿಸಲಿಲ್ಲ.
ಬಿಎನ್‌ಪಿ ಸರ್ಕಾರ ರಚಿಸಿದರೆ, ತಾರಿಕ್ ರೆಹಮಾನ್ 36 ವರ್ಷಗಳ ಬಳಿಕ ಬಾಂಗ್ಲಾದೇಶದ ಮೊದಲ ಪುರುಷ ಪ್ರಧಾನಿಯಾಗಲಿದ್ದಾರೆ. 17 ವರ್ಷಗಳಿಗೂ ಹೆಚ್ಚು ಕಾಲ ಸ್ವಯಂ-ಗಡಿಪಾರಾಗಿದ್ದ ಅವರು ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಿದ್ದರು. ಪಕ್ಷದ ಕಾರ್ಯಕರ್ತರು ವಿಜಯೋತ್ಸವದ ಮೆರವಣಿಗೆ ಬಿಟ್ಟು ದೇಶಾದ್ಯಂತ ವಿಶೇಷ ಪ್ರಾರ್ಥನೆಗಳನ್ನು ನಡೆಸುವಂತೆ ಒತ್ತಾಯಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net