"ಅವನ ಬ್ಯಾಗ್‌ನಲ್ಲಿ ಗಾಂಜಾ ಹಾಕಿ": ಯುವಕನಿಗೆ ಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿ ವಿಡಿಯೋ ವೈರಲ್! ತನಿಖೆಗೆ ಆದೇಶ| Fake Marijuana Case

Viral CCTV footage of a police officer threatening a young man with a ganja case at a hotel in Seoni, Madhya Pradesh.
ಮಧ್ಯಪ್ರದೇಶದ ಸಿಯೋನಿ ಹೋಟೆಲ್‌ನಲ್ಲಿ ಯುವಕನಿಗೆ ಗಾಂಜಾ ಕೇಸ್ ಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿಯ ವೈರಲ್ ಸಿಸಿಟಿವಿ ದೃಶ್ಯ
Published on: 

ಮಧ್ಯಪ್ರದೇಶ: ಪೊಲೀಸರೆಂದರೆ ಭಯವಲ್ಲ, ಭರವಸೆ. ಪೊಲೀಸರೆಂದರೆ ಭದ್ರತೆ ಎಂಬೆಲ್ಲಾ ಘೋಷಣೆಗಳನ್ನು ಕೇಳಿರುತ್ತೇವೆ. ಸದಾ ನಾಗರಿಕರ ಸುರಕ್ಷೆಗಾಗಿ ಇರುವ ಪೊಲೀಸರೇ, ಜನರ ಭಕ್ಷಕರಾದರೇ ಸ್ಥಿತಿ ಏನಾಗಬೇಡ? ಮೊದಲೇ ಪೊಲೀಸ್​ ಇಲಾಖೆ ಮೇಲೆ ಜನರಿಗೆ ನಂಬಿಕೆ ಕಡಿಮೆ ಇರುವ ವಾತಾವರಣದಲ್ಲಿ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿರುವ ಘಟನೆ ಇಲಾಖೆಗೆ ಇನ್ನಷ್ಟು ಕೆಟ್ಟ ಹೆಸರನ್ನು ತಂದುಕೊಟ್ಟಿದೆ ಎಂದರೆ ಸುಳ್ಳಳ್ಳ.

ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾನಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೋನಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು, ಹೋಟೆಲ್​ನಲ್ಲಿ ಸಿಕ್ಕಿಬಿದ್ದ ಹುಡುಗನ ವಿರುದ್ಧ ಸುಳ್ಳು ಮಾದಕ ವಸ್ತು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರುವ ವಿಡಿಯೋ ವೈರಲ್​ ಆಗುತ್ತಿದೆ.

ಅವನ ಬ್ಯಾಗ್​ನಲ್ಲಿ ಗಾಂಜಾ ಹಾಕಿ!

ಮಾಹಿತಿ ಪ್ರಕಾರ, ಈ ಘಟನೆ ನವೆಂಬರ್​ 13 ರಂದು ನಡೆದಿದೆ ಎಂದು ತಿಳಿದುಬಂದಿದ್ದು, ದುಂಡಸಿವನಿ ಪ್ರದೇಶದಲ್ಲಿರುವ ಹೋಟೆಲ್​ವೊಂದರ ಮೇಲೆ ಪೊಲೀಸರು ದಾಳಿ ಮಾಡಿದಾಗ ಒಬ್ಬ ವಯಸ್ಕ ಹುಡುಗ ಮತ್ತು ಹುಡುಗಿ ಸಿಕ್ಕಿಬಿದ್ದಿದ್ದಾರೆ. ಆಗ ಅವರನ್ನು ಅಲ್ಲಿಯೇ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಹುಡುಗ, ನಾನು ನನ್ನ ಪಾಲಕರೊಂದಿಗೆ ಮಾತನಾಡಬೇಕು, ನನ್ನ ಮೊಬೈಲ್​ ಪೋನ್​ ಕೊಡಿ ಎಂದು ಪೊಲೀಸರಲ್ಲಿ ಕೇಳಿದ್ದಾನೆ. ಆಗ ಅಲ್ಲಿದ್ದ ಅಡಿಶನಲ್​ ಎಸ್ಪಿ, ಸಂಜಯ್ ಸನೋಡಿಯಾ ಈ ಹುಡುಗನ ಬ್ಯಾಗ್​ನಲ್ಲಿ ಸ್ವಲ್ಪ ಗಾಂಜಾ ಹಾಕಿ, ನಾರ್ಕೋ ಕೇಸ್​ನಲ್ಲಿ ಅಂದರ್​ ಮಾಡೋಣ, ಆಗ ಜೈಲಿಗೆ ಹೋಗುತ್ತಾನೆ. ಈಗಲೂ ನಿನಗೆ ಜೈಲೇ ಗತಿ ಎಂದು ಬೆದರಿಕೆ ಹಾಕಿರುವುದು ಹೋಟೆಲ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸರಿಗೆ ಮಂತ್ಲಿ ಕೊಡಬೇಕು!

ಇನ್ನೂ ಈ ಈಡೀ ಘಟನೆಗೆ ಸಾಕ್ಷಿ ಎಂಬಂತೆ ಹೋಟೆಲ್​ ಮಾಲೀಕ ಕೂಡ, ಪೊಲೀಸರು ಆ ಹುಡುಗನಿಗೆ ಗಾಂಜಾ ಕೇಸ್​ ಹಾಕುವುದಾಗಿ ಹೆದರಿಸಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ. ಅಂತಯೇ, ತಮ್ಮಿಂದ ತಿಂಗಳಿಗೆ 25 ಸಾವಿರ ಮಂತ್ಲಿ (ಲಂಚ) ಗೆ ಬೇಡಿಕೆ ಇಟ್ಟಿದ್ದರೆಂದು ಪೊಲೀಸ್​ ಸಿಬ್ಬಂದಿ ಮೇಲೆ ಲಂಚದ ಆರೋಪವನ್ನು ಮಾಡಿದ್ದಾರೆ. ನನಗೆ ಇಲ್ಲಿಯ ಇನ್ಸ್​ಪೆಕ್ಟರ್​ ಹಾಗೂ ಎಎಸ್ಪಿ ತಿಂಗಳಿಗೆ 25 ಸಾವಿರ ಲಂಚ ನೀಡುವಂತೆ ಒತ್ತಾಯಿಸುತ್ತಾರೆ. ನಾನು ಈಗಾಗಲೇ 10 ಸಾವಿರ ಅವರಿಗೆ ನೀಡಿದ್ದೇನೆಂದು ಹೋಟೆಲ್​ ಮಾಲೀಕ ಹೇಳಿದ್ದಾರೆ.

Also Read
ಮಾತನಾಡುವ ಸೌಜನ್ಯ ಇಲ್ಲ, ದುರಹಂಕಾರ ಟಾಪ್​ನಲ್ಲಿದೆ: ನವಾಜುದ್ದೀನ್ ಸಿದ್ದಿಕಿ ವಿರುದ್ಧ ಸಿಡಿದ್ದೆದ್ದ ದಿಯಾ ಮಿರ್ಜಾ! Dia Mirza
Viral CCTV footage of a police officer threatening a young man with a ganja case at a hotel in Seoni, Madhya Pradesh.

ಪೊಲೀಸರ ವಿರುದ್ಧ ವಿಚಾರಣೆ ಆರಂಭ!

ಇನ್ನು ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ಮಧ್ಯಪ್ರದೇಶ ಪೊಲೀಸರು ಹೈ ಅಲರ್ಟ್​ ಆಗಿದ್ದಾರೆ. ಈ ಪ್ರಕರಣ ಬೆಳಕೆಗೆ ಬರುತ್ತಿದ್ದಂತೆ ಸಿಯೋನಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಲಾಲ್ ಚಂದಾನಿ, ವಿಡಿಯೋನಲ್ಲಿರುವ ಪೊಲೀಸರ ವಿರುದ್ಧ ವಿಚಾರಣೆ ನಡೆಸಲು ಆದೇಶಿಸಿದ್ದಾರೆಂದು ತಿಳಿದುಬಂದಿದೆ.

ನೆಟ್ಟಿಗರ ಆಕ್ರೋಶ!

ಇನ್ನೂ ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನಟ್ಟಿಗರು ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ. ಮೊದಲೇ ಪೊಲೀಸರನ್ನು ಜನ ನಂಬುತ್ತಿಲ್ಲ. ಅದರಲ್ಲಿ ಈ ವಿಡಿಯೋ ನೋಡಿದವ ಯಾರು ಪೊಲೀಸ್​ ಸ್ಟೇಷನ್​ ಮೆಟ್ಟಿಲನ್ನೂ ಹತ್ತಲ್ಲ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.

ಹೀಗೆ ಅದೆಷ್ಟು ಸುಳ್ಳು ಗಾಂಜಾ ಕೇಸ್​​ ಹಾಕಿ ಯುವಕರ ಭವಿಷ್ಯ ಹಾಳು ಮಾಡಿದ್ದಾನೋ, ಏನೋ? ಮೊದಲು ಇವನನ್ನು ಕೆಲಸದಿಂದ ವಜಾ ಮಾಡಿ ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸುಳ್ಳು ಗಾಂಜಾ ಕೇಸ್​, ಹಫ್ತಾ, ಮಂತ್ಲಿ ಎವೆಲ್ಲಾ ಪೊಲೀಸರ ಕಾಯಂ ಕೆಲಸವಾಗಿ ಬಿಟ್ಟಿದೆ. ದಯವಿಟ್ಟು ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತೊಬ್ಬರು ಮನವಿ ಮಾಡಿದ್ದಾರೆ, (ಏಜೆನ್ಸೀಸ್​).