

Smit Machchhar: ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಉಗ್ರರ ದಾಳಿ ನಡೆದಿದೆ ಎಂಬ ವರದಿ ಬಂದ ಬಳಿಕ ಎಲ್ಲರಲ್ಲೂ ಒಂದು ಪ್ರಶ್ನೆ ಮೂಡಿದೆ: ಅದೇನಂದರೆ, ಸಹ-ಪೈಲಟ್ ತನ್ನ ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿ, ವಿಮಾನ ಅಪಾಯಕ್ಕೆ ಸಿಲುಕುವಂತೆ ಮಾಡಲು ಆಯುಧವನ್ನು ಹೇಗೆ ಪಡೆದನು..? ಆರಂಭಿಕ ವರದಿಗಳ ಪ್ರಕಾರ, ಒಮಾನ್ ದೇಶದ ಸಹ-ಪೈಲಟ್ ವಿಮಾನದಲ್ಲಿದ್ದ ಚಾಕುವನ್ನೇ ಬಳಸಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿತ್ತು.
ಆದರೆ ಈಗ ತನಿಖೆಯಿಂದ ತಿಳಿದುಬಂದಿರುವಂತೆ, ದಾಳಿಕೋರ ಸಹ-ಪೈಲಟ್ ಯಾವುದೇ ಹೊರಗಿನ ಚಾಕುವನ್ನು ಕಾಕ್‌ಪಿಟ್‌ಗೆ ಕಳ್ಳಸಾಗಣೆ ಮಾಡಿಲ್ಲ. ಬದಲಿಗೆ, ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ಅವರು ಕಾಕ್‌ಪಿಟ್ ಒಳಗೇ ಇಡಲಾಗುವ ಕ್ರಾಶ್ ಆಕ್ಸ್ ಬಳಸಿ ತಮ್ಮ ಸಹೋದ್ಯೋಗಿಯ ಮೇಲೆ ಭೀಕರ ದಾಳಿ ನಡೆಸಿರಬಹುದು ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಈ ದಾಳಿಯಲ್ಲಿ ಕ್ರಾಶ್ ಆಕ್ಸ್ ಬಳಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಫ್ಲೈಡೇಟಾರ್ 24 ಪ್ರಕಾರ, ದುಬೈನಿಂದ ಹೊರಟ ಸುಮಾರು ಎರಡೂವರೆ ಗಂಟೆಗಳ ನಂತರ ವಿಮಾನದಲ್ಲಿ ಗೊಂದಲ ಉಂಟಾಯಿತು. ಸುಮಾರು ಒಂದು ನಿಮಿಷದೊಳಗೆ ವಿಮಾನವು 33,000 ಅಡಿಯಿಂದ 17,000 ಅಡಿಗೆ (ಸುಮಾರು 10,000 ಮೀಟರ್‌ನಿಂದ 5,100 ಮೀಟರ್‌ಗೆ) ಕುಸಿಯಿತು. ಬಳಿಕ ಜೋರ್ಡಾನ್ ಗಡಿಯ ಹತ್ತಿರ ವಿಮಾನವು ಆಕಸ್ಮಿಕವಾಗಿ ಸುತ್ತ ಬಳಸಿ, ಸೌದಿ ಅರೇಬಿಯಾದ ತಬುಕ್ ನಗರದಲ್ಲಿ ಸುಮಾರು ಒಂದು ಗಂಟೆಯ ನಂತರ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು.
ಇದನ್ನೂ ಓದಿ:ಆಕಾಶದಲ್ಲೇ ಜೀವನ್ಮರಣದ ಹೋರಾಟ: ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವ ಮಾಧ್ಯಮಗಳ ವರದಿ ಹೀಗಿವೆ! | Smit Machchhar
ವಿಮಾನ ನಿಯಂತ್ರಣ ಕೊಠಡಿಯ ಸಂಭಾಷಣೆಯನ್ನು ಕೇಳಿದ ವ್ಯಕ್ತಿಯೊಬ್ಬರು ತಿಳಿಸಿದಂತೆ, ಸೌದಿ ಅರೇಬಿಯಾ ಮತ್ತು ಜೋರ್ಡಾನ್ ದೇಶಗಳು ವಿಮಾನಕ್ಕೆ ಇಳಿಯಲು ನಿರಾಕರಿಸಿದವು, ಮತ್ತು ಹಿನ್ನೆಲೆಯಲ್ಲಿ ಪ್ರಯಾಣಿಕರ ಕಿರುಚಾಟ ಕೇಳಿಸುತ್ತಿತ್ತು. ಪೈಲಟ್ ನಡುಗುವ ಧ್ವನಿಯಲ್ಲಿ ಮೇಡೇ (Mayday-ತುರ್ತು ಸಂದೇಶ) ಎಂದು ಕರೆ ಮಾಡಿ, ವಿಮಾನ ಅಪಹರಣಕ್ಕೊಳಗಾಗಿದೆ ಎಂದು ತಿಳಿಸಿದ್ದರು.
ಅಂತಾರಾಷ್ಟ್ರೀಯ ವಾಯುಯಾನ ನಿಯಮಗಳ ಪ್ರಕಾರ, ವಿಮಾನ ತಯಾರಿಕಾ ಹಂತದಲ್ಲೇ ಕ್ರಾಶ್ ಆಕ್ಸ್ (ಕೊಡಲಿ) ಅನ್ನು ಅಳವಡಿಸಲಾಗಿರುತ್ತದೆ ಮತ್ತು ಪ್ರತಿಯೊಂದು ವಾಣಿಜ್ಯ ವಿಮಾನದಲ್ಲೂ ಇದು ಕಡ್ಡಾಯವಾಗಿರುತ್ತದೆ. ವಿಮಾನ ಅಪಘಾತದ ನಂತರ ರಕ್ಷಣಾ ಕಾರ್ಯಗಳಿಗೆ ತುರ್ತು ಉಪಕರಣವಾಗಿ ದಶಕಗಳಿಂದ ಇದನ್ನು ವಿಮಾನಗಳಲ್ಲಿ ಬಳಸಿಕೊಂಡು ಬರಲಾಗಿದೆ.
ಹಿಂದೆ ಈ ಕೊಡಲಿಗಳನ್ನು ಮುಖ್ಯ ಕ್ಯಾಬಿನ್‌ಗಳಲ್ಲಿ ಇರಿಸಲಾಗುತ್ತಿತ್ತು. ಆದರೆ 25 ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದನಾ ದಾಳಿಯ ನಂತರ ಅವುಗಳನ್ನು ಕಾಕ್‌ಪಿಟ್‌ಗಳಿಗೆ ಬದಲಾಯಿಸಲಾಯಿತು. ಪ್ರಸ್ತುತ, ಪೈಲಟ್‌ಗಳಿಗೆ ಸುಲಭವಾಗಿ ಎಟುಕುವ ಜಾಗದಲ್ಲಿ ಇದನ್ನು ಕಾಕ್‌ಪಿಟ್ ಒಳಗೆ ಇಡಲಾಗುತ್ತದೆ.
ಒಮಾನ್ ಮೂಲದ ಸಹ-ಪೈಲಟ್‌ನ ಗುರುತು ಮತ್ತು ದಾಳಿಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಆ ಸಹ-ಪೈಲಟ್‌ನನ್ನು ಬಂಧಿಸಲಾಗಿದೆ ಎಂದು ಪ್ರಧಾನಿ ನೆತನ್ಯಾಹು ತಿಳಿಸಿದ್ದಾರೆ. ಮತ್ತೊಂದೆಡೆ, ಸೌದಿ ಮತ್ತು ಯುಎಇ ಅಧಿಕಾರಿಗಳು ತನಿಖೆ ನಡೆಯುತ್ತಿದೆ ಎಂಬುದನ್ನು ಮಾತ್ರ ದೃಢಪಡಿಸಿದ್ದು, ಹೆಚ್ಚಿನ ವಿವರ ನೀಡಿಲ್ಲ. ತನಿಖೆ ನಡೆಯುವವರೆಗೆ ಇಸ್ರೇಲ್‌ಗೆ ಮತ್ತು ಅಲ್ಲಿಂದ ಬರುವ ತಮ್ಮ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಫ್ಲೈದುಬೈ ತಿಳಿಸಿದೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ, ಕ್ಯಾಪ್ಟನ್ ಮಚ್ಚರ್ ಮತ್ತು ಕಾಕ್‌ಪಿಟ್‌ಗೆ ನುಗ್ಗಿದ ಪ್ರಯಾಣಿಕರು ಒಟ್ಟಾಗಿ ಸೇರಿ ಮತ್ತೊಂದು 9/11 ದುರಂತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ(ಏಜೆನ್ಸೀಸ್).