ಮಚ್ಚರ್ ಸಾಹಸದ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂತು ನೀರಜಾ ಭಾನೋಟ್ ಕಥೆ!..379 ಜನರಿಗೆ ಮರುಜನ್ಮ ನೀಡಿದ ಆ ಧೀರ ವನಿತೆಯ ಬಗ್ಗೆ ನಿಮಗೆಷ್ಟು ಗೊತ್ತು..? | Neerja Bhanot

Neerja Bhanot: ಆಕಾಶ ಮಾರ್ಗದಲ್ಲಿ ಎದುರಾದ ಸಾವು-ಬದುಕಿನ ಅನಿರೀಕ್ಷಿತ ಕ್ಷಣದಲ್ಲಿ ಅಚಲ ಧೈರ್ಯ ಮೆರೆದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಗಾಥೆ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ
ಮಚ್ಚರ್ ಸಾಹಸದ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂತು ನೀರಜಾ ಭಾನೋಟ್ ಕಥೆ!..
ಮಚ್ಚರ್ ಸಾಹಸದ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂತು ನೀರಜಾ ಭಾನೋಟ್ ಕಥೆ!..
Published on: 

Neerja Bhanot: ಆಕಾಶ ಮಾರ್ಗದಲ್ಲಿ ಎದುರಾದ ಸಾವು-ಬದುಕಿನ ಅನಿರೀಕ್ಷಿತ ಕ್ಷಣದಲ್ಲಿ ಅಚಲ ಧೈರ್ಯ ಮೆರೆದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಗಾಥೆ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ದುಬೈನಿಂದ ತೆರಳುತ್ತಿದ್ದ ವಿಮಾನದಲ್ಲಿ ನಡೆದ ಜೀವನ್ಮರಣದ ಹೋರಾಟದಿಂದ ಪಾರಾಗಿ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಇವರ ಸಾಹಸವನ್ನು ಕಂಡು, ಜನತೆ ಸಾಹಸಿ ನೀರಜಾ ಭಾನೋಟ್ ಅವರೊಂದಿಗೆ ಹೋಲಿಕೆ ಮಾಡಿ ಕೊಂಡಾಡುತ್ತಿದ್ದಾರೆ.

ಸಂಕಷ್ಟದ ಪರಿಸ್ಥಿತಿಯಲ್ಲಿ ತನ್ನ ಪ್ರಾಣಕ್ಕಿಂತ ಪ್ರಯಾಣಿಕರ ಸುರಕ್ಷತೆ ಮುಖ್ಯವೆಂದು ಭಾವಿಸಿದ ಈ ಇಬ್ಬರೂ ಧೈರ್ಯಶಾಲಿಗಳ ಜಾಣ್ಮೆ ಮತ್ತು ನಿಸ್ವಾರ್ಥ ಸೇವೆಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

1986ರ ಸೆಪ್ಟೆಂಬರ್ 5ರಂದು ಕರಾಚಿಯಲ್ಲಿ ಪ್ಯಾನ್ ಆಮ್ ವಿಮಾನವನ್ನು ಉಗ್ರರು ಅಪಹರಿಸಿದಾಗ, ಗಗನಸಖಿ ನೀರಜಾ ಭಾನೋಟ್ ಪ್ರಯಾಣಿಕರ ರಕ್ಷಣೆಗೆ ಗುರಾಣಿಯಂತೆ ನಿಂತರು. ವಿಮಾನ ಹಾರಾಟ ನಡೆಸದಂತೆ ತಡೆದು, ಅಮೆರಿಕನ್ನರ ಪಾಸ್‌ಪೋರ್ಟ್‌ಗಳನ್ನು ರಹಸ್ಯವಾಗಿ ಬಚ್ಚಿಟ್ಟರು. ಅಂತಿಮವಾಗಿ ಮಕ್ಕಳನ್ನು ರಕ್ಷಿಸಿ, ಪ್ರಯಾಣಿಕರನ್ನು ತುರ್ತು ದ್ವಾರದ ಮೂಲಕ ಹೊರಕಳುಹಿಸುವಾಗ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು.

ಇದನ್ನೂ ಓದಿ:ಆಕಾಶದಲ್ಲೇ ಜೀವನ್ಮರಣದ ಹೋರಾಟ: ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವ ಮಾಧ್ಯಮಗಳ ವರದಿ ಹೀಗಿವೆ! | Smit Machchhar

ನಾಲ್ಕು ದಶಕಗಳ ಬಳಿಕ, ಮತ್ತೊಬ್ಬ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ದುಬೈನಿಂದ ಟೆಲ್ ಅವಿವ್‌‌ಗೆ ತೆರಳುತ್ತಿದ್ದ ವಿಮಾನದಲ್ಲಿ ಭೀಕರ ತುರ್ತು ಪರಿಸ್ಥಿತಿಯನ್ನು ಎದುರಿಸಬೇಕಾಯಿತು. 174 ಪ್ರಯಾಣಿಕರಿದ್ದ ಫ್ಲೈದುಬೈ ಬೋಯಿಂಗ್ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಸಹ-ಪೈಲಟ್‌ನ ದಾಳಿಯಿಂದ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ಅವರು ಹೋರಾಡಿದರು. ಗಂಭೀರವಾಗಿ ಗಾಯಗೊಂಡು ರಕ್ತಸಿಕ್ತರಾಗಿ ಬಿದ್ದಿದ್ದರೂ ಸಹ, ಕಾಕ್‌ಪಿಟ್ ಲಾಕ್ ಆಗಿದ್ದ ಬಾಗಿಲನ್ನು ತೆರೆಯುವಲ್ಲಿ ಮಚ್ಚರ್ ಯಶಸ್ವಿಯಾದರು.

ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ನುಗ್ಗಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು. ಅಲ್ಲದೆ, ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ವಿಮಾನದ ನಿಯಂತ್ರಣವನ್ನು ತೆಗೆದುಕೊಂಡು ಅದನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಲು ಇದು ದಾರಿ ಮಾಡಿಕೊಟ್ಟಿತು.

ಪರಿಸ್ಥಿತಿ ಬೇರೆಯದಾದರು...

ಈ ಎರಡೂ ಘಟನೆಗಳ ಪರಿಸ್ಥಿತಿಗಳು ಭಿನ್ನವಾಗಿದ್ದರೂ, ಎರಡೂ ಕಥೆಗಳ ಕೇಂದ್ರಬಿಂದುವಾಗಿರುವ ಮನೋಭಾವ ಮಾತ್ರ ಒಂದೇ ಆಗಿತ್ತು. ವಿಮಾನವೊಂದು ಭಯೋತ್ಪಾದನೆಯ ತಾಣವಾದಾಗ, ಒಬ್ಬ ಭಾರತೀಯ ವಾಯುಯಾನ ವೃತ್ತಿಪರರು ತಾವೆಷ್ಟು ಜೀವಗಳಿಗೆ ಜವಾಬ್ದಾರರಾಗಿದ್ದೇವೋ ಆ ಜೀವಗಳ ಸುರಕ್ಷತೆಯ ಮೇಲಷ್ಟೇ ತಮ್ಮ ಗಮನವನ್ನು ಕೇಂದ್ರಿಕರಿಸಿದರು.

ಕ್ಯಾಪ್ಟನ್ ಮಚ್ಚರ್ ಅವರ ಸಾಹಸವು ನೀರಜಾ ಭಾನೋಟ್ ಅವರ ನೆನಪನ್ನು ಮರುಕಳಿಸಿದೆ. ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನದಲ್ಲಿ ಮಚ್ಚರ್ ಎದುರಿಸಿದ ಪರಿಸ್ಥಿತಿಯಂತೆ, 1986ರ ಪ್ಯಾನ್ ಆಮ್ ವಿಮಾನ ಅಪಹರಣದ ವೇಳೆ ನೀರಜಾ ಕೂಡ ಕೇವಲ ಸೆಕೆಂಡುಗಳಲ್ಲಿ ಜೀವನ್ಮರಣದ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅಸಾಧಾರಣ ಪರಿಸ್ಥಿತಿಗೆ ಸಿಲುಕಿದ್ದರು.

ಮಚ್ಚರ್ ಅವರ ತ್ವರಿತ ಕ್ರಮದಿಂದಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಲು ಸಾಧ್ಯವಾಯಿತು, ಇದರಿಂದ ಬೋಯಿಂಗ್ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ಇಳಿಸಲು ಸಾಧ್ಯವಾಯಿತು. ಈಗ 1986ರ ವಿಮಾನ ಅಪಹರಣದ ರೋಚಕ ಘಟನೆ ಮತ್ತು ನೂರಾರು ಜೀವಗಳನ್ನು ಉಳಿಸಲು ನೀರಜಾ ಭಾನೋಟ್ ಹೇಗೆ ಕಾರಣರಾದರು ಎಂಬುದನ್ನು ಇಲ್ಲಿ ನೋಡೋಣ.

Also Read
ಆಕಾಶದಲ್ಲೇ ಪೈಲಟ್‌ಗಳ ನಡುವೆ ಗಲಾಟೆ: ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಸ್ರೇಲ್ ವಿಮಾನ! | flydubai
ಮಚ್ಚರ್ ಸಾಹಸದ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂತು ನೀರಜಾ ಭಾನೋಟ್ ಕಥೆ!..

1986ರ ಘಟನೆ!...

1986ರ ಸೆಪ್ಟೆಂಬರ್ 5 ರಂದು ಮುಂಬೈನಿಂದ ಫ್ರಾಂಕ್‌ಫರ್ಟ್ ಮತ್ತು ಅಲ್ಲಿಂದ ನ್ಯೂಯಾರ್ಕ್ ನಗರಕ್ಕೆ ಪ್ರಯಾಣಿಸುತ್ತಿದ್ದ ಪ್ಯಾನ್ ಆಮ್ ವಿಮಾನ 73 ಕರಾಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಪ್ರಸ್ತುತ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ) ತಲುಪಿತು. ಬೋಯಿಂಗ್ 747 ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 379 ಜನರಿದ್ದರು. ಆ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಭಯೋತ್ಪಾದಕ ಗುಂಪಾದ ಅಬು ನಿದಾಲ್ ಸಂಘಟನೆಯ ನಾಲ್ವರು ಸಶಸ್ತ್ರ ಸದಸ್ಯರು ಕರಾಚಿಯಲ್ಲಿ ವಿಮಾನವನ್ನು ಮುತ್ತಿಗೆ ಹಾಕಿದರು. ಇದರ ಪರಿಣಾಮವಾಗಿ ಸರಿಸುಮಾರು 17 ಗಂಟೆಗಳ ಕಾಲ ಒತ್ತೆಯಾಳು ಬಿಕ್ಕಟ್ಟು ಮುಂದುವರಿಯಿತು. ಈ ಘಟನೆಯಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ವಿಮಾನ ಪರಿಚಾರಕಿಯಾಗಿದ್ದ ನೀರಜಾ ಭಾನೋಟ್ ಅವರಿಗೆ ಆಗ ಕೇವಲ 22 ವರ್ಷ ವಯಸ್ಸು, ಮತ್ತು ಅವರಿಗೆ 23 ನೇ ಹುಟ್ಟುಹಬ್ಬಕ್ಕೆ ಕೇವಲ ಎರಡು ದಿನಗಳು ಬಾಕಿ ಇದ್ದವು. ಅಂದು ಅವರು ತೆಗೆದುಕೊಂಡ ನಿರ್ಧಾರವು ನಂತರದ ಎಲ್ಲವನ್ನೂ ಬದಲಿಸಿತು. ಅವರು ವಿಮಾನ ಅಪಹರಣದ ಬಗ್ಗೆ ಪೈಲಟ್‌ಗಳಿಗೆ ಎಚ್ಚರಿಕೆ ನೀಡಿದರು. ಇದರಿಂದ ಭಯೋತ್ಪಾದಕರು ವಿಮಾನದ ನಿಯಂತ್ರಣವನ್ನು ತೆಗೆದುಕೊಳ್ಳುವ ಮೊದಲು ಕಾಕ್‌ಪಿಟ್ ಸಿಬ್ಬಂದಿ ಪರಾರಿಯಾಗಲು ಸಾಧ್ಯವಾಯಿತು. ಪೈಲಟ್‌ಗಳು ಇಲ್ಲದ ಕಾರಣ, ಅಪಹರಣಕಾರರಿಗೆ ಕರಾಚಿಯಿಂದ ವಿಮಾನವನ್ನು ಸುಲಭವಾಗಿ ಹಾರಿಸಿಕೊಂಡು ಹೋಗಲು ಸಾಧ್ಯವಾಗದ ಕಾರಣ ಅಲ್ಲೆ ಉಳಿಯಿತು.

ಜಾಣತನ ತೋರಿದ್ದ ಭಾನೋಟ್​!

ಅಪಹರಣಕಾರರು ಪಾಸ್‌ಪೋರ್ಟ್‌ಗಳನ್ನು, ವಿಶೇಷವಾಗಿ ಅಮೆರಿಕದ ಪ್ರಯಾಣಿಕರನ್ನು ಗುರುತಿಸಬಲ್ಲ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಲು ಬಯಸಿದ್ದರು. ನೀರಜಾ ಭಾನೋಟ್ ಮತ್ತು ಸಿಬ್ಬಂದಿಯ ಇತರ ಸದಸ್ಯರು ಅಮೆರಿಕದ ಪಾಸ್‌ಪೋರ್ಟ್‌ಗಳನ್ನು ಅಪಹರಣಕಾರರಿಗೆ ನೀಡುವ ಬದಲು ಅವುಗಳನ್ನು ಬಚ್ಚಿಟ್ಟರು. ಅಮೆರಿಕದ ನ್ಯಾಯ ಇಲಾಖೆಯು ನಂತರ ಇದನ್ನು ಉಲ್ಲೇಖಿಸಿ, ಅಪಹರಣಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಅಮೆರಿಕನ್ನರನ್ನು ಕೊಲ್ಲಲು ಯೋಜಿಸುತ್ತಿದ್ದ ಕಾರಣ ವಿಮಾನ ಪರಿಚಾರಕರು ಆ ದಾಖಲೆಗಳನ್ನು ಮರೆಮಾಚುವ ಮೂಲಕ ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿದ್ದರು ಎಂದು ತಿಳಿಸಿತ್ತು.

ಗನ್ ಮತ್ತು ಸ್ಫೋಟಕಗಳನ್ನು ಹೊಂದಿದ್ದ ವ್ಯಕ್ತಿಗಳ ನಿಯಂತ್ರಣದಲ್ಲಿದ್ದ ವಿಮಾನದೊಳಗೆ ನೀರಜಾ ಭಾನೋಟ್ ಗಂಟೆಗಟ್ಟಲೆ ಓಡಾಡುತ್ತಿದ್ದರು. ಅಲ್ಲಿಂದ ತಪ್ಪಿಸಿಕೊಳ್ಳಲು ಇನ್ನೂ ಯಾವುದೇ ದಾರಿಯಿರಲಿಲ್ಲ. ಯಾರಾದರೂ ಬದುಕುಳಿಯುತ್ತಾರೆಂಬ ಯಾವುದೇ ಗ್ಯಾರಂಟಿ ಇರಲಿಲ್ಲ. ಆದರೆ, ಆ 22 ವರ್ಷದ ಭಾರತೀಯ ವಿಮಾನ ಪರಿಚಾರಕಿ ಭಯಭೀತರಾದ ಪ್ರಯಾಣಿಕರನ್ನು ಶಾಂತವಾಗಿಡಲು ಪ್ರಯತ್ನ ನಡೆಸುತ್ತಿದ್ದರು.

ನೀರಜಾ ಭಾನೋಟ್ ಬದುಕುಳಿಯಬಹುದಿತ್ತು, ಆದ್ರೆ!...

ಪ್ಯಾನ್ ಆಮ್ ವಿಮಾನ ಅಪಹರಣದಿಂದ ಬದುಕುಳಿದವರ ಮಾತುಗಳು ನೀರಜಾ ಭಾನೋಟ್ ಅವರ ನಿಸ್ವಾರ್ಥ ಸೇವೆಯನ್ನು ಅತ್ಯಂತ ಸ್ಪಷ್ಟವಾಗಿ ತೋರಿಸುತ್ತವೆ. ಅಂದು 21 ವರ್ಷದವರಾಗಿದ್ದ ಪ್ರಯಾಣಿಕ ಧರ್ಮೇಂದ್ರ ಶಾ, ಆ ಬಿಕ್ಕಟ್ಟಿನ ಸಮಯದಲ್ಲಿ ನೀರಜಾ ಪಟ್ಟ ಶ್ರಮವನ್ನು ಹೀಗೆ ನೆನಪಿಸಿಕೊಂಡಿದ್ದಾರೆ. ಪ್ರಯಾಣಿಕರು ಶೌಚಾಲಯ ಬಳಸಲು ಮತ್ತು ಮಕ್ಕಳಿಗೆ ಕುಡಿಯಲು ನೀರು ನೀಡುವಂತೆ ನೀರಜಾ ಅಪಹರಣಕಾರರನ್ನು ಒಪ್ಪಿಸಿದ್ದರು. ಜೊತೆಗೆ, ಪ್ರಯಾಣಿಕರು ತಮ್ಮ ಅಮೆರಿಕನ್ ಪಾಸ್‌ಪೋರ್ಟ್‌ಗಳನ್ನು ರಹಸ್ಯವಾಗಿ ಬಚ್ಚಿಡುವಂತೆ ಸನ್ನೆ ಮಾಡಿ ಎಚ್ಚರಿಸಿದ್ದರು.

ಇದಾದ ಬಳಿಕ ವಿಮಾನದೊಳಗೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಿಕ್ಕಟ್ಟು ಮುಂದುವರಿದಂತೆ ವಿಮಾನದ ವಿದ್ಯುತ್ ಸಂಪರ್ಕ ಕಡಿತಗೊಂಡು, ಕ್ಯಾಬಿನ್‌ನಲ್ಲಿ ಸಂಪೂರ್ಣ ಕತ್ತಲು ಹಾಗೂ ಭೀತಿಯು ಆವರಿಸಿತು. ತಕ್ಷಣವೇ ಅಪಹರಣಕಾರರು ಗುಂಡಿನ ದಾಳಿ ನಡೆಸಿ ಗ್ರೆನೇಡ್‌ಗಳನ್ನು ಎಸೆದರು. ಆ ಸಂದರ್ಭದಲ್ಲಿ ಭಾನೋಟ್​ ಪ್ರಯಾಣಿಕರಿಗೆ ತುರ್ತು ನಿರ್ಗಮನ ದ್ವಾರಗಳ ಕಡೆಗೆ ತೆರಳಲು ಸಹಾಯ ಮಾಡತೊಡಗಿದರು.

ಅಂದಿನ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿ ಧರ್ಮೇಂದ್ರ ಶಾ ಮಾತು!...

Filmfare.com ಜೊತೆ ಮಾತನಾಡಿದ ಪ್ರತ್ಯಕ್ಷದರ್ಶಿ ಧರ್ಮೇಂದ್ರ ಶಾ, ನೀರಜಾ ಭಾನೋಟ್ ನಿರ್ಗಮನ ದ್ವಾರದ ಪಕ್ಕದಲ್ಲೇ ನಿಂತಿದ್ದರು. ಅವರು ತಪ್ಪಿಸಿಕೊಳ್ಳಬಹುದಿತ್ತು. ಆದರೆ ಬದಲಿಗೆ, ಅವರು ಇನ್ನೂ ಒಳಗೆ ಸಿಲುಕಿರುವ ಮಕ್ಕಳನ್ನು ರಕ್ಷಿಸಲು ವಾಪಸ್ ಹೋದರು ಎಂದು ನೆನಪಿಸಿಕೊಂಡಿದ್ದಾರೆ. ಹಾಗೆ ಮಾಡುವಾಗ ಅವರಿಗೆ ಬೆನ್ನಿಗೆ ಗುಂಡೇಟು ಬಿತ್ತು ಮತ್ತು ಅವರು ತಲೆಕೆಳಳಾಗಿ ಹೊರಬಿದ್ದರು ಎಂದು ಅಂದಿನ ಘಟನೆಯನ್ನು ಬಿಚ್ಚಿಟ್ಟರು.

ಈ ಘಟನೆಯ ಬಳಿಕ ಅಮೆರಿಕದ ನ್ಯಾಯ ಇಲಾಖೆಯು (US DOJ), ಅಂತಿಮ ದಾಳಿಯ ವೇಳೆ ನೂರಾರು ಜೀವಗಳನ್ನು ಉಳಿಸಲು ಸಹಾಯ ಮಾಡಿದ ನೀರಜಾ ಭಾನೋಟ್ ಸೇರಿದಂತೆ ಪ್ಯಾನ್ ಆಮ್ ವಿಮಾನದ ಎಲ್ಲಾ ಪರಿಚಾರಕರನ್ನು ಶ್ಲಾಘಿಸಿತು. ಈ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಗೀಡಾದ 13 ಸಿಬ್ಬಂದಿಗಳಲ್ಲಿ ನೀರಜಾ ಕೂಡ ಒಬ್ಬರು.

ನೀರಜಾ ಭಾನೋಟ್ ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಪಡೆದ ಮೊದಲ ಮಹಿಳೆ ಮತ್ತು ದೀರ್ಘಕಾಲದವರೆಗೆ ಅತ್ಯಂತ ಕಿರಿಯವರು ಅವರೇ ಆಗಿದ್ದರು. 1987ರಲ್ಲಿ ಪಾಕಿಸ್ತಾನ ಸರ್ಕಾರವು ತಮ್ಘಾ-ಇ-ಪಾಕಿಸ್ತಾನ್ ನೀಡಿ ಗೌರವಿಸಿದರೆ, 2006ರಲ್ಲಿ ಅಮೆರಿಕದ ನ್ಯಾಯ ಇಲಾಖೆಯು (US DOJ) ವಿಶೇಷ ಧೈರ್ಯ ಪ್ರಶಸ್ತಿ ನೀಡಿ ಗೌರವಿಸಿತು.

ನೀರಜಾ ಭಾನೋಟ್ ಮತ್ತು ಕ್ಯಾಪ್ಟನ್ ಮಚ್ಚರ್ ಅವರ ಘಟನೆಗಳು ನೇರವಾಗಿ ಒಂದೇ ರೀತಿ ಇಲ್ಲದಿದ್ದರೂ, ಇಬ್ಬರೂ ಭಾರತೀಯ ವಾಯುಯಾನ ವೃತ್ತಿಪರರು ತಮ್ಮ ಕರ್ತವ್ಯದ ಗಡಿಯನ್ನು ಮೀರಿ ಅಸಾಧಾರಣ ಧೈರ್ಯ ತೋರಿ ನೂರಾರು ಜೀವಗಳನ್ನು ಉಳಿಸಿದ್ದಾರೆಂಬುದು ಇವರಲ್ಲಿರುವ ಸಾಮಾನ್ಯ ಅಂಶವಾಗಿದೆ. ನೀರ್ಜಾ ಅವರ ಕಥೆ 40 ವರ್ಷಗಳ ಬಳಿಕವೂ ಜೀವಂತವಾಗಿದೆ ಎಂದರೆ, ಅದು ಕೇವಲ ಪಾಕಿಸ್ತಾನದ ವಿಮಾನ ಅಪಹರಣದ ಕಥೆಯಲ್ಲ, ಬದಲಿಗೆ, ತಮ್ಮ ಪ್ರಾಣ ಉಳಿಸಿಕೊಳ್ಳಲು ದಾರಿಯಿದ್ದರೂ, ಒಬ್ಬ 22 ವರ್ಷದ ಯುವತಿ ನೂರಾರು ಜನರ ಪ್ರಾಣ ಉಳಿಸಲು ಮುಂದಾದ ಮಹಾನ್ ತ್ಯಾಗದ ಸ್ಮರಣೀಯ ಕಥೆಯಾಗಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net