ಆಕಾಶದಲ್ಲೇ ಪೈಲಟ್‌ಗಳ ನಡುವೆ ಗಲಾಟೆ: ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಸ್ರೇಲ್ ವಿಮಾನ! | flydubai

flydubai: ದುಬೈನಿಂದ ತೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ, ಸಹ-ಪೈಲಟ್‌ ಮುಖ್ಯ ಪೈಲಟ್‌‌ಗೆ ಚಾಕುವಿನಿಂದ ಇರಿದು ವಿಮಾನದ ಹತೋಟಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ 9/11 ಶೈಲಿಯ ಭೀಕರ ದಾಳಿಯ ಆತಂಕ ಎದುರಾಯಿತು.
ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಸ್ರೇಲ್ ವಿಮಾನ!
ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಸ್ರೇಲ್ ವಿಮಾನ!
Published on: 

flydubai: ದುಬೈನಿಂದ ತೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ, ಸಹ-ಪೈಲಟ್‌ ಮುಖ್ಯ ಪೈಲಟ್‌‌ಗೆ ಚಾಕುವಿನಿಂದ ಇರಿದು ವಿಮಾನದ ಹತೋಟಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ 9/11 ಶೈಲಿಯ ಭೀಕರ ದಾಳಿಯ ಆತಂಕ ಎದುರಾಯಿತು.

ಈ ಗಲಾಟೆ ವೇಳೆ ವಿಮಾನವು ಏಕಾಏಕಿ ಸುಮಾರು 4,000 ಅಡಿಗಳಷ್ಟು ಕೆಳಗೆ ಕುಸಿಯಿತು. ತಕ್ಷಣವೇ ಮಧ್ಯಪ್ರವೇಶಿಸಿದ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಹ-ಪೈಲಟ್‌ನನ್ನು ಹಿಡಿದು ನಿಯಂತ್ರಣಕ್ಕೆ ತಂದರು. ಆ ಬಳಿಕ ವಿಮಾನದ ಮಾರ್ಗವನ್ನು ಬದಲಾಯಿಸಿ, ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಅದನ್ನು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು ಎಂದು ವರದಿಯಾಗಿದೆ.

ಸುಮಾರು 180 ಪ್ರಯಾಣಿಕರಿದ್ದ ಈ ವಿಮಾನದಲ್ಲಿ, ಸಹ-ಪೈಲಟ್, ಮುಖ್ಯ ಪೈಲಟ್‌ಗೆ ಚಾಕುವಿನಿಂದ ಇರಿದು, ವಿಮಾನದ ನಿಯಂತ್ರಣವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆ ಕ್ಷಣದಲ್ಲೇ ವಿಮಾನದಲ್ಲಿದ್ದ ಮತ್ತೊಂದು ಪೈಲಟ್‌ಗಳ ತಂಡವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಿತು.

ಈ ಘಟನೆಯಲ್ಲಿ ಗಾಯಗೊಂಡಿರುವ ವಿಮಾನದ ಪೈಲಟ್ ಮತ್ತು ಸಹ-ಪೈಲಟ್ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಬುಕ್ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆ ತಿಳಿಸಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

ಹೈಜಾಕ್ ಕೋಡ್ ರವಾನೆ!...

ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ವಿಮಾನವು ಗಾಳಿಯಲ್ಲಿದ್ದಾಗ ಮೊದಲು ಸಾಮಾನ್ಯ ತುರ್ತು ಸಂಕೇತವನ್ನು ರವಾನಿಸಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಅದನ್ನು ವಿಮಾನ ಹೈಜಾಕ್​ ಕೋಡ್‌ಗೆ ಬದಲಾಯಿಸಿತು. ಮೊದಲ ತುರ್ತು ಸಂಕೇತ ರವಾನೆಯಾಗುವ ಮುನ್ನ, ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಸುಮಾರು 17,400 ಅಡಿಗಳಷ್ಟು ಕೆಳಗೆ ಹಠಾತ್ತನೆ ಕುಸಿದಿತ್ತು. ವಿಮಾನವು ಅಪಹರಣದ ಸೂಚಕ ಕೋಡ್ 'Squawk 7500' ರವಾನಿಸುತ್ತಿದ್ದಂತೆಯೇ, ಇಸ್ರೇಲಿ ವಾಯುಪಡೆಯ ಫೈಟರ್ ಜೆಟ್‌ಗಳು ಮುನ್ನೆಚ್ಚರಿಕೆಯಾಗಿ ವಿಮಾನದತ್ತ ಧಾವಿಸಿದವು.

ಜೋರ್ಡಾನ್ ಮಾರ್ಗವಾಗಿ ಸೌದಿ ಪ್ರವೇಶಿಸಿದ ವಿಮಾನ

ಫ್ಲೈಟ್‌ರಾಡಾರ್ 24 (Flightradar24) ಮಾಹಿತಿ ಪ್ರಕಾರ, ತೆಲ್ ಅವೀವ್‌ಗೆ ತೆರಳಬೇಕಿದ್ದ ವಿಮಾನವು ಇಸ್ರೇಲ್ ಕಡೆಗೆ ಹೋಗದೆ, ಜೋರ್ಡಾನ್ ವಾಯುಪ್ರದೇಶದ ಮೂಲಕ ಸೌದಿ ಅರೇಬಿಯಾದತ್ತ ಸಾಗಿ, ತಬುಕ್‌ನಲ್ಲಿ ಲ್ಯಾಂಡ್ ಆಯಿತು. ಈ ಹೈಡ್ರಾಮಾದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಮಾಲೋಚನೆ ನಡೆಸಿದ್ದು, ಪ್ರಸ್ತುತ ಪರಿಸ್ಥಿತಿ ಸಪೂರ್ಣ ನಿಯಂತ್ರಣದಲ್ಲಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಬರಲಿರುವ ಚುನಾವಣೆಗೆ ಮುನ್ನ ಇಸ್ರೇಲ್‌ನ ಶತ್ರುಗಳು ಇಂತಹ ದಾಳಿಗಳಿಗೆ ಯತ್ನಿಸಬಹುದು ಎಂದು ನೆತನ್ಯಾಹು ಮುಂಚಿತವಾಗಿಯೇ ಎಚ್ಚರಿಸಿದ್ದರು. ಯಾವುದೇ ಕೃತ್ಯವೆಸಗಿದರೂ ಇಸ್ರೇಲ್‌ನ ದೊಡ್ಡ ಬಾಹುಗಳು ಶತ್ರುಗಳನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net