ಸಮ್ಮತಿಯ ದೈಹಿಕ ಅನ್ಯೋನ್ಯತೆ ಮುರಿಯಿತೆಂದ ಮಾತ್ರಕ್ಕೆ ಅದು ಅತ್ಯಾಚಾರವಲ್ಲ: ಸುಪ್ರೀಂಕೋರ್ಟ್ | Supreme Court

ಇಬ್ಬರು ವಯಸ್ಕರ ನಡುವಿನ ಸಂಬಂಧ ಚೆನ್ನಾಗಿದ್ದ ಸಮಯದಲ್ಲಿ ಸಮ್ಮತಿಯ ದೈಹಿಕ ಅನ್ಯೋನ್ಯತೆಯಿದ್ದು, ಬಳಿಕ ಸಂಬಂಧ ಮುರಿಯಿತೆಂದ ಮಾತ್ರಕ್ಕೆ ಅದನ್ನು ಅತ್ಯಾಚಾರ ಎಂದು ಬ್ರಾಂಡ್ ಮಾಡಲು ಸಾಧ್ಯವಿಲ್ಲ ಎಂದು ಶುಕ್ರವಾರ(ಅ. 30) ಸುಪ್ರೀಂಕೋರ್ಟ್ ಹೇಳಿದೆ.
Supreme Court (ಚಿತ್ರ X)
Supreme Court (ಚಿತ್ರ X)
Published on: 

ನವದೆಹಲಿ: ಇಬ್ಬರು ವಯಸ್ಕರ ನಡುವಿನ ಸಂಬಂಧ ಚೆನ್ನಾಗಿದ್ದ ಸಮಯದಲ್ಲಿ ಸಮ್ಮತಿಯ ದೈಹಿಕ ಅನ್ಯೋನ್ಯತೆಯಿದ್ದು, ಬಳಿಕ ಸಂಬಂಧ ಮುರಿಯಿತೆಂದ ಮಾತ್ರಕ್ಕೆ ಅದನ್ನು ಅತ್ಯಾಚಾರ ಎಂದು ಬ್ರಾಂಡ್ ಮಾಡಲು ಸಾಧ್ಯವಿಲ್ಲ ಎಂದು ಶುಕ್ರವಾರ(ಅ. 30) ಸುಪ್ರೀಂಕೋರ್ಟ್ ಹೇಳಿದೆ. ವಿಫಲ ಪ್ರೇಮ ಸಂಬಂಧಗಳನ್ನು ಅತ್ಯಾಚಾರದ ಕ್ರಿಮಿನಲ್ ಪ್ರಕರಣಗಳಾಗಿ ಪರಿವರ್ತಿಸುವ ಪ್ರವೃತ್ತಿ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.

ಸಂಬಂಧದ ವಿಷಯದಲ್ಲಿ ಪ್ರಾಸಿಕ್ಯೂಷನ್ ವಿರುದ್ಧದ ಅರ್ಜಿಯೊಂದನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು, ಇಬ್ಬರು ವಯಸ್ಕರ ನಡುವೆ ತಿಂಗಳುಗಳು ಅಥವಾ ವರ್ಷಗಳ ಕಾಲ ಮುಂದುವರಿದ ಸಮ್ಮತಿಯ ದೈಹಿಕ ಸಂಬಂಧವನ್ನು ವಿಘಟನೆಯ ನಂತರ ಅತ್ಯಾಚಾರದ ಬಣ್ಣ ಬಳಿಯಲಾಗುವುದಿಲ್ಲ ಎಂದು ಹೇಳಿತು.

ಇಬ್ಬರು ವಿದ್ಯಾವಂತ ವಯಸ್ಕರು ಪರಿಣಾಮಗಳನ್ನು ಅರ್ಥಮಾಡಿಕೊಂಡು ಸ್ವಯಂಪ್ರೇರಣೆಯಿಂದ ದೈಹಿಕ ಸಂಬಂಧಕ್ಕೆ ಪ್ರವೇಶಿಸಿದಾಗ, ಸಂಬಂಧವು ಮದುವೆಯಲ್ಲಿ ಕೊನೆಗೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಅದನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ. ಪ್ರೇಮ ಸಂಬಂಧ ವಿಫಲವಾದ ನಂತರ ಕ್ರಿಮಿನಲ್ ಕಾನೂನನ್ನು ಇತ್ಯರ್ಥಪಡಿಸಲು ಬಳಸಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

Also Read
ದೇವಸ್ಥಾನದ ಬಳಿ ಇರುವ ಪೆರಿಯಾರ್ ಪ್ರತಿಮೆ ತೆರವುಗೊಳಿಸಿ: ಮದ್ರಾಸ್ ಹೈಕೋರ್ಟ್ | Madras High Court
Supreme Court (ಚಿತ್ರ X)

ವಿಘಟನೆಯ ನಂತರ ಅತ್ಯಾಚಾರ ಪ್ರಕರಣವನ್ನು ದಾಖಲಿಸುವುದು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತದೆ ಮತ್ತು ಆರೋಪಿಗೆ ಸರಿಪಡಿಸಲಾಗದಷ್ಟು ಹಾನಿ ಮಾಡುತ್ತದೆ ಪೀಠ ತಿಳಿಸಿದೆ. ಒಬ್ಬ ವ್ಯಕ್ತಿಯು ಆರಂಭದಿಂದಲೇ ಮದುವೆಯಾಗುವ ಉದ್ದೇಶವನ್ನು ಹೊಂದಿರದೆ, ಕೇವಲ ಲೈಂಗಿಕ ಕ್ರಿಯೆಗೆ ಸಮ್ಮತಿಯನ್ನು ಪಡೆಯುವ ಸಲುವಾಗಿ ಸುಳ್ಳು ಭರವಸೆ ನೀಡಿದ್ದರೆ, ಆಗ ಅದು ಅತ್ಯಾಚಾರವಾಗಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಒತ್ತಿ ಹೇಳಿದೆ.

ಆದರೆ, ಒಬ್ಬ ವ್ಯಕ್ತಿಯು ನಿಜವಾಗಿಯೂ ಮದುವೆಯಾಗುವ ಉದ್ದೇಶವನ್ನು ಹೊಂದಿದ್ದು, ನಂತರ ಸಂದರ್ಭಗಳು, ಕೌಟುಂಬಿಕ ಒತ್ತಡ ಅಥವಾ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಮದುವೆಯಿಂದ ಹಿಂದೆ ಸರಿದರೆ, ಅದು ಕೇವಲ ಭರವಸೆ ಮುರಿದ ಪ್ರಕರಣವಾಗುತ್ತದೆ. ಮತ್ತು ಇದು ಸಿವಿಲ್ ಸ್ವರೂಪದ ತಪ್ಪೇ ಹೊರತು ಅತ್ಯಾಚಾರವಲ್ಲ ಎಂದು ನ್ಯಾಯಾಲಯ ತಿಳಿಸಿದೆ.

Also Read
ಜ್ಞಾನೇಶ್ ಕುಮಾರ್ ಮಹಾಭೀಯೋಗಕ್ಕೆ ಖರ್ಗೆ ನಿವಾಸದಲ್ಲಿಂದು ಇಂಡಿಯಾ ಕೂಟದಿಂದ ಅಣಕು ಸಂಸತ್: ಅಮಿತ್ ಶಾ ಹಾಕಿದ ಸವಾಲೇನು? | Mock Parliament
Supreme Court (ಚಿತ್ರ X)

ಕೆಳ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದ ಪೀಠ, ಸಂಬಂಧದ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ಮಹಿಳೆ ಇದ್ದರೇ, ಆ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ಕೂಡಿದ್ದೇ ಮತ್ತು ಆರಂಭದಿಂದಲೇ ಮೋಸವಿತ್ತೇ ಎಂಬುದನ್ನು ವಿಚಾರಣಾ ನ್ಯಾಯಾಲಯಗಳು ಪರಿಶೀಲಿಸಬೇಕು ಎಂದು ಹೇಳಿದೆ.

ಪ್ರಾಥಮಿಕ ತನಿಖೆ ನಡೆಸದೇ ಎಫ್​ಐಆರ್ ದಾಖಲಿಸಬಾರದು

ಇನ್ನೂ ಇಬ್ಬರ ವಯಸ್ಕರ ನಡುವಿನ ಸಂಬಂಧ ಮುರಿದುಬಿದ್ದ ಪ್ರಕರಣಗಳಲ್ಲಿ, ಪ್ರಾಥಮಿಕ ತನಿಖೆ ನಡೆಸದೆ ಪೊಲೀಸರು ಯಾಂತ್ರಿಕವಾಗಿ ಅತ್ಯಾಚಾರದ ಎಫ್‌ಐಆರ್ (FIR) ದಾಖಲಿಸಬಾರದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಈ ಪ್ರವೃತ್ತಿಯು ಆತಂಕಕಾರಿಯಾಗಿದೆ. ಅಪರಿಚಿತರು ಅಥವಾ ಪರಿಚಿತ ವ್ಯಕ್ತಿಗಳಿಂದ ಒಪ್ಪಿಗೆಯಿಲ್ಲದೆ ಕ್ರೂರವಾಗಿ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರನ್ನು ಒಳಗೊಂಡ ನೈಜ ಅತ್ಯಾಚಾರ ಪ್ರಕರಣಗಳ ಗಂಭೀರತೆಯನ್ನು ಇದು ತಗ್ಗಿಸುತ್ತದೆ. ನೈಜ ಅತ್ಯಾಚಾರ ಪ್ರಕರಣಗಳಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ; ಆದರೆ, ಸಂಬಂಧ ಮುರಿದುಬಿದ್ದ ನಂತರ ದಾಖಲಿಸಲಾಗುವ ಸುಳ್ಳು ಪ್ರಕರಣಗಳು ಕಾನೂನಿನ ಮೇಲಿನ ನಂಬಿಕೆಯನ್ನು ಕುಂದಿಸುತ್ತವೆ ಎಂದು ನ್ಯಾಯಾಲಯ ತಿಳಿಸಿದೆ (ಏಜೆನ್ಸೀಸ್).