ಬಂಗಾಳದಲ್ಲಿ ನಾಳೆ ಮೊದಲ ಹಂತದ ಮತದಾನ... 152 ಕ್ಷೇತ್ರಗಳಲ್ಲಿ ಯಾರಿಗೆ ಒಲಿಯಲಿದೆ ಜಯ..?; ಇಲ್ಲಿವೆ ನೋಡಿ ಪ್ರಮುಖ ರಾಜಕೀಯ ಪಕ್ಷಗಳು! | West Bengal Elections

West Bengal Elections | ಇಲ್ಲಿವೆ ನೋಡಿ ಪ್ರಮುಖ ರಾಜಕೀಯ ಪಕ್ಷಗಳು!
West Bengal Elections | ಇಲ್ಲಿವೆ ನೋಡಿ ಪ್ರಮುಖ ರಾಜಕೀಯ ಪಕ್ಷಗಳು!
Published on
West Bengal Elections: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಅಖಾಡ ಸಜ್ಜಾಗಿದ್ದು, ಗುರುವಾರ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ತರ ಬಂಗಾಳದ 152 ಕ್ಷೇತ್ರಗಳು ಹಾಗೂ ದಕ್ಷಿಣದ ಪ್ರಮುಖ ಜಿಲ್ಲೆಗಳಲ್ಲಿ ನಡೆಯಲಿರುವ ಈ ಮತಸಮರದಲ್ಲಿ ಘಟಾನುಘಟಿ ಪಕ್ಷಗಳು ತಮ್ಮ ಭವಿಷ್ಯವನ್ನು ಪಣಕ್ಕಿಟ್ಟಿವೆ. ಈ ಬಾರಿಯ ಚುನಾವಣಾ ಕಣದಲ್ಲಿರುವ ಪ್ರಮುಖ ರಾಜಕೀಯ ಶಕ್ತಿಗಳ ಬಲಾಬಲ ಮತ್ತು ಕಾರ್ಯತಂತ್ರದ ಸಮಗ್ರ ನೋಟ ಇಲ್ಲಿದೆ.
ತೃಣಮೂಲ ಕಾಂಗ್ರೆಸ್ (TMC): ಕಳೆದ 15 ವರ್ಷಗಳಿಂದ ಬಂಗಾಳದ ಗದ್ದುಗೆ ಹಿಡಿದಿರುವ ಟಿಎಂಸಿ, ಸಿಎಂ ಮಮತಾ ಬ್ಯಾನರ್ಜಿ ವರ್ಚಸ್ವಿ ನಾಯಕತ್ವ ಹಾಗೂ ಲಕ್ಷ್ಮಿ ಭಂಡಾರ್, ಖೇಲಾ ಹೋಬೆ ಅಸ್ತ್ರಗಳ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದೆ. 2021ರಲ್ಲಿ ದಾಖಲೆಯ 213 ಸ್ಥಾನಗಳೊಂದಿಗೆ 47.9% ಮತ ಗಳಿಸಿದ್ದ ಈ ಪಕ್ಷ, ಈಗ ಅಭಿಷೇಕ್ ಬ್ಯಾನರ್ಜಿ ಸಂಘಟನಾ ಶಕ್ತಿಯೊಂದಿಗೆ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದೆ.
ಭಾರತೀಯ ಜನತಾ ಪಕ್ಷ (BJP): 2016ರ ಬಳಿಕ ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿ ಬೆಳೆದಿರುವ ಬಿಜೆಪಿ, ಸುವೇಂದು ಅಧಿಕಾರಿ ಮತ್ತು ಸುಕಾಂತ ಮಜುಂದಾರ್ ನೇತೃತ್ವದಲ್ಲಿ ಇತಿಹಾಸ ಬರೆಯಲು ತಯಾರಿ ನಡೆಸಿದೆ. 2021ರಲ್ಲಿ 77 ಸ್ಥಾನ ಗೆದ್ದಿದ್ದ ಬಿಜೆಪಿ, 2024ರ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಕೆಲ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. ಡಬಲ್ ಇಂಜಿನ್ ಸರ್ಕಾರದ ಮೂಲಕ ಬದಲಾವಣೆ ತರುವ ಕನಸು ಬಿಜೆಪಿಯದ್ದು.
ಕಾಂಗ್ರೆಸ್: ಒಂದು ಕಾಲದಲ್ಲಿ ಬಂಗಾಳದ ಅಧಿಪತಿಯಾಗಿದ್ದ ಕಾಂಗ್ರೆಸ್, ಈಗ ಅಸ್ತಿತ್ವಕ್ಕೂ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತಿದೆ. 2021ರ ಶೂನ್ಯ ಸಾಧನೆಯ ಬಳಿಕ, ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ. 4.68ರಷ್ಟು ಮತ ಹಂಚಿಕೆ ಪಡೆಯುವ ಮೂಲಕ ಸ್ವಲ್ಪ ಚೇತರಿಸಿಕೊಂಡಿದೆ. ಸದ್ಯ ರಾಜ್ಯದ 11 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಪ್ರಭಾವವನ್ನು ಉಳಿಸಿಕೊಂಡಿರುವುದು ಆಶಾದಾಯಕವಾಗಿದೆ.
ಸಿಪಿಐ-ಎಂ (CPI-M): 34 ವರ್ಷಗಳ ಆಳ್ವಿಕೆ ನಡೆಸಿದ್ದ ಎಡಪಕ್ಷಗಳು ಸದ್ಯ ಕಷ್ಟದ ಸ್ಥಿತಿಯಲ್ಲಿವೆ. ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬಾಂಗ್ಲಾ ಬಚಾವೋ ಯಾತ್ರೆಯ ಮೂಲಕ ತಳಮಟ್ಟದ ಕಾರ್ಯಕರ್ತರನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿವೆ. ಯುವ ಮತದಾರರನ್ನು ಸೆಳೆದು ಮತ್ತೆ ವಿಧಾನಸಭೆಯಲ್ಲಿ ಖಾತೆ ತೆರೆಯುವುದು ಇವರ ಮೊದಲ ಗುರಿ.
ಐಎಸ್‌ಎಫ್ (ISF): ನೌಶಾದ್ ಸಿದ್ದೀಕ್ ನೇತೃತ್ವದ ಈ ಪಕ್ಷವು ಮುಸ್ಲಿಂ ಯುವಕರು ಮತ್ತು ದಲಿತರಲ್ಲಿ ಹೊಸ ಸಂಚಲನ ಮೂಡಿಸಿದೆ. ಟಿಎಂಸಿಯ ಭದ್ರಕೋಟೆಯಾಗಿದ್ದ ಭಾಂಗರ್‌ನಲ್ಲಿ ಕಳೆದ ಬಾರಿ ಜಯಗಳಿಸುವ ಮೂಲಕ, ತಾನು ಬಂಗಾಳದ ಮಣ್ಣಿನ ಮತ್ತೊಂದು ಪ್ರಬಲ ಶಕ್ತಿ ಎಂಬುದನ್ನು ಸಾಬೀತುಪಡಿಸಿದೆ.
ಎಐಎಂಐಎಂ (AIMIM): ಅಸಾದುದ್ದೀನ್ ಓವೈಸಿ ನೇತೃತ್ವದ ಈ ಪಕ್ಷವು ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಮಾಲ್ಡಾ ಮತ್ತು ಮುರ್ಷಿದಾಬಾದ್‌ನಂತಹ ಜಿಲ್ಲೆಗಳಲ್ಲಿ 11 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಈ ಬಾರಿ ಮೊದಲ ಹಂತದಲ್ಲೇ ಹೆಚ್ಚಿನ ಸ್ಥಾನಗಳಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಹೆಜ್ಜೆಗುರುತು ವಿಸ್ತರಿಸಲು ಮುಂದಾಗಿದೆ.
ಎಜೆಯುಪಿ (AJUP): ಟಿಎಂಸಿಯಿಂದ ಅಮಾನತುಗೊಂಡಿರುವ ಹುಮಾಯೂನ್ ಕಬೀರ್ ಸ್ಥಾಪಿಸಿರುವ ಈ ಹೊಸ ಪಕ್ಷವು ಬರೋಬ್ಬರಿ 180ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆಡಳಿತ ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಕಬೀರ್, ಟಿಎಂಸಿಯ ಮತಬ್ಯಾಂಕ್‌ಗೆ ಎಷ್ಟರಮಟ್ಟಿಗೆ ಕನ್ನ ಹಾಕಲಿದ್ದಾರೆ ಎಂಬುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಕಳೆದ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್, ಈ ಬಾರಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪೈಪೋಟಿಯನ್ನು ತ್ರಿಕೋನ ಹೋರಾಟವನ್ನಾಗಿ ಪರಿವರ್ತಿಸಲು ಬೆವರು ಹರಿಸುತ್ತಿದೆ. ಸತತ ನಾಲ್ಕನೇ ಬಾರಿ ಅಧಿಕಾರ ಹಿಡಿಯಲು ಟಿಎಂಸಿ ಪ್ರಯತ್ನಿಸುತ್ತಿದ್ದರೆ, ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಬಿಜೆಪಿ ಸಜ್ಜಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net