ನವದೆಹಲಿ: ಪ್ರಸ್ತುತ 110ರಿಂದ 115 ರೂ. ಇರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದ ವಾಹನ ಸವಾರರು ತತ್ತರಿಸಿದ್ದು, ದಿನ ಕಳೆದಂತೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಅತ್ತ ಹೊರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತವಾಗಿದ್ದರೂ ಇತ್ತ ಏರಿಸಿರುವ ಇಂಧನ ಬೆಲೆಯಲ್ಲಿ ಮಾತ್ರ ಕಡಿಮೆ ಮಾಡಿದಿರುವ ಕೇಂದ್ರ ಸರ್ಕಾರದ ನಡೆ ಬಗ್ಗೆ ಜನರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ಸುರೇಶ್ ಗೋಪಿ, ಸದ್ಯಕ್ಕೆ ಯಾವುದೇ ಇಳಿಕೆಯಿಲ್ಲ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷದಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ತೈಲ ಕಂಪನಿಗಳು ಬರೋಬ್ಬರಿ 42 ಸಾವಿರ ಕೋಟಿ ರೂ. ನಷ್ಟ ಅನುಭವಿಸಿವೆ. ಬೆಲೆ ಇಳಿಸುವ ಮೊದಲು ಕಂಪನಿಗಳು ತಮ್ಮ ಹಿಂದಿನ ನಷ್ಟವನ್ನು ಸರಿದೂಗಿಸಿಕೊಳ್ಳಬೇಕಿದೆ. ಹೀಗಾಗಿ, ಸದ್ಯಕ್ಕೆ ಇಂಧನ ಬೆಲೆ ಇಳಿಕೆ ಸಾಧ್ಯವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.
ಮರುದಿನವೇ ಬೆಲೆ ಇಳಿಕೆಯಾಗಲಿ ಎಂದು ನಾವು ಬಯಸಬಹುದು. ಆದರೆ, ತಾಂತ್ರಿಕವಾಗಿ ತಕ್ಷಣವೇ ಬೆಲೆ ಇಳಿಸುವುದು ಸಾಧ್ಯವಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರಗಳು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಕೊಂಚ ಪರಿಹಾರ ನೀಡಬಹುದು ಅಷ್ಟೇ ಎಂದಿದ್ದಾರೆ. ಇದೇ ವೇಳೆ, ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ಗೊಂದಲ ಉಂಟಾಗಿರುವುದನ್ನು ಸಚಿವರು ಒಪ್ಪಿಕೊಂಡಿದ್ದಾರೆ.
ಪೂರೈಕೆ ಸಮಸ್ಯೆ ಪರಿಹರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾದಾಗ, ಮಾರ್ಚ್ 27ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂ.ನಷ್ಟು ಕಡಿತಗೊಳಿಸಿತ್ತು. ಆದರೆ, ಈ ಕ್ರಮದ ಉದ್ದೇಶ ಚಿಲ್ಲರೆ ಬೆಲೆ ಇಳಿಸುವುದಕ್ಕಿಂತ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ನಷ್ಟವನ್ನು ತಗ್ಗಿಸುವುದಾಗಿತ್ತು ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿತ್ತು.
ಜುಲೈ 30ರಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸುರೇಶ್ ಗೋಪಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮಾರುಕಟ್ಟೆ ಆಧಾರಿತವಾಗಿದ್ದು, ಸಾರ್ವಜನಿಕ ವಲಯದ ತೈಲ ಕಂಪನಿಗಳೇ ಬೆಲೆ ನಿರ್ಧರಿಸುತ್ತವೆ ಎಂದು ತಿಳಿಸಿದ್ದರು. ಭಾರತದ ಕಚ್ಚಾ ತೈಲದ ಸರಾಸರಿ ಬೆಲೆ ಫೆಬ್ರವರಿಯಲ್ಲಿ ಪ್ರತಿ ಬ್ಯಾರೆಲ್‌ಗೆ 69 ಡಾಲರ್ ಇದ್ದದ್ದು, ಮಾರ್ಚ್‌ನಲ್ಲಿ 136.68 ಡಾಲರ್‌ಗೆ ಏರಿಕೆಯಾಗಿತ್ತು. ಜುಲೈ 23ರಂದು ಅದು 103.33 ಡಾಲರ್ ಆಗಿತ್ತು ಎಂದು ವಿವರಿಸಿದ್ದರು.
ಇಂಧನ ಸಂಗ್ರಹಣೆ, ಅಕ್ರಮ ಮಾರಾಟ ಮತ್ತು ಕಾಳಸಂತೆಯನ್ನು ತಡೆಯುವ ಉದ್ದೇಶದಿಂದ ಜೂನ್ 12ರಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಖರೀದಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿತ್ತು. ಪ್ರತಿ ಗ್ರಾಹಕ ಅಥವಾ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಖರೀದಿಸಲು ಅವಕಾಶ ನೀಡಲಾಗಿತ್ತು. ಪೂರೈಕೆ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಜುಲೈ 1ರಂದು ಈ ನಿರ್ಬಂಧವನ್ನು ಹಿಂಪಡೆಯಲಾಯಿತು.
ಇನ್ನು, ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಿರಲು ಅಲ್ಲಿನ ವ್ಯಾಟ್ ಹಾಗೂ ಮಾರಾಟ ತೆರಿಗೆ ದರಗಳೂ ಕಾರಣವಾಗಿವೆ. ಈ ತೆರಿಗೆಗಳನ್ನು ಆಯಾ ರಾಜ್ಯ ಸರ್ಕಾರಗಳೇ ನಿರ್ಧರಿಸುತ್ತವೆ ಎಂದು ಒತ್ತಿ ಹೇಳಿದ್ದರು.
ಇನ್ನೊಂದೆಡೆ, ಎಥೆನಾಲ್ ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹ ನೀಡಿದ ಕೇಂದ್ರ ಸರ್ಕಾರ, ಉತ್ಪಾದನೆಯಾದ ಎಥೆನಾಲ್ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕರ್ನಾಟಕದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ.
ಕಳೆದ ವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, ಎಥೆನಾಲ್ ಉತ್ಪಾದನೆಯಲ್ಲಿ ಶೇ.20ರಿಂದ 30ರಷ್ಟನ್ನೂ ಖರೀದಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. E10, E20 ಮತ್ತು E30 ಸೇರಿದಂತೆ ಎಥೆನಾಲ್ ಮಿಶ್ರಣದ ಗುರಿಗಳನ್ನು ಉತ್ತೇಜಿಸಿದ ಬಳಿಕವೂ ಖರೀದಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಎಥೆನಾಲ್ ಮಿಶ್ರಣ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದರು,(ಏಜೆನ್ಸೀಸ್).