ಇಡೀ ಜಗತ್ತು ಫೋಟೋ ತೆಗೆಯುತ್ತಿದ್ದರೆ ಆ ಬಾಲಕಿ ಮಾತ್ರ ಆತನ ಹಸಿವು ಗುರುತಿಸಿದಳು! ಮನಕಲಕುವ ವಿಡಿಯೋ ಇದು... Heartbreaking Video

ಇಡೀ ಜಗತ್ತು ಫೋಟೋ ತೆಗೆಯುತ್ತಿದ್ದರೆ, ಆ ಬಾಲಕಿ ಮಾತ್ರ ಆತನ ಹಸಿವು ಗುರುತಿಸಿದಳು! ಮನಕಲಕುವ ವಿಡಿಯೋ ಇದು... Heartbreaking Video
ಇಡೀ ಜಗತ್ತು ಫೋಟೋ ತೆಗೆಯುತ್ತಿದ್ದರೆ, ಆ ಬಾಲಕಿ ಮಾತ್ರ ಆತನ ಹಸಿವು ಗುರುತಿಸಿದಳು! ಮನಕಲಕುವ ವಿಡಿಯೋ ಇದು... Heartbreaking Video
Published on

ಪ್ರಮುಖ ಮುಖ್ಯಾಂಶಗಳು

  • ಬಾಲ್ಯವನ್ನು ಜೀವನದ ಅತ್ಯಂತ ಸುಂದರವಾದ ಮತ್ತು ಮುಗ್ಧತೆಯ ಕಾಲವೆಂದು ಪರಿಗಣಿಸಲಾಗುತ್ತದೆ
  • ಬಾಲ್ಯದಲ್ಲಿ ಮಕ್ಕಳ ಪ್ರಪಂಚವು ಕೇವಲ ಆಟ, ಓದು, ಸ್ನೇಹಿತರೊಂದಿಗಿನ ಮೋಜಿಗೆ ಸೀಮಿತವಾಗಿರುತ್ತದೆ
  • ಆದರೆ, ಇಂದಿನ ಸಮಾಜದ ಕಹಿ ವಾಸ್ತವವೇ ಬೇರೆಯಾಗಿದ್ದು ಎಲ್ಲ ಮಕ್ಕಳಿಗೂ ಬಾಲ್ಯ ಅಷ್ಟು ಸುಲಭವಾಗಿರುವುದಿಲ್ಲ
  • ಆಟದ ಮೈದಾನದಲ್ಲಿ ಇರಬೇಕಾದವರು ತಮ್ಮ ಮೂಲಭೂತ ಅಗತ್ಯಗಳಿಗಾಗಿ ರಸ್ತೆಗಿಳಿದು ಹೋರಾಡುತ್ತಿರುತ್ತಾರೆ
Heartbreaking Video : ಬಾಲ್ಯವನ್ನು ಜೀವನದ ಅತ್ಯಂತ ಸುಂದರವಾದ ಮತ್ತು ಮುಗ್ಧತೆಯ ಕಾಲವೆಂದು ಪರಿಗಣಿಸಲಾಗುತ್ತದೆ. ಆ ವಯಸ್ಸಿನಲ್ಲಿ ಮಕ್ಕಳ ಪ್ರಪಂಚವು ಕೇವಲ ಆಟ, ಓದು, ಸ್ನೇಹಿತರೊಂದಿಗಿನ ಮೋಜು ಹಾಗೂ ಯಾವುದೇ ಜವಾಬ್ದಾರಿಗಳಿಲ್ಲದ ನಿಶ್ಚಿಂತೆಯ ನಿದ್ದೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಇಂದಿನ ಸಮಾಜದ ಕಹಿ ವಾಸ್ತವವೇ ಬೇರೆಯಾಗಿದ್ದು, ಪ್ರತಿಯೊಬ್ಬ ಮಗುವಿಗೂ ಬಾಲ್ಯವು ಅಷ್ಟು ಸುಲಭವಾಗಿರುವುದಿಲ್ಲ ಎಂಬ ಆಘಾತಕಾರಿ ಸತ್ಯ ಮುನ್ನೆಲೆಗೆ ಬಂದಿದೆ. ಎಷ್ಟೋ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಬದುಕಿನ ಕಠಿಣ ಸವಾಲುಗಳನ್ನು ಎದುರಿಸುತ್ತಾ, ಆಟದ ಮೈದಾನದಲ್ಲಿ ಇರಬೇಕಾದವರು ತಮ್ಮ ಮೂಲಭೂತ ಅಗತ್ಯಗಳಿಗಾಗಿ ರಸ್ತೆಗಿಳಿದು ಹೋರಾಡುತ್ತಿರುತ್ತಾರೆ. ಸದ್ಯ ಇಂತಹದ್ದೇ ಒಂದು ಮಗುವಿನ ಅತ್ಯಂತ ಭಾವುಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೇಗವಾಗಿ ವೈರಲ್ ಆಗುತ್ತಿದ್ದು, ಅದನ್ನು ನೋಡಿದ ಜನರ ಹೃದಯ ಕಲಕುವಂತೆ ಮಾಡಿದೆ.
ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ಚಿಕ್ಕ ಬಾಲಕನೊಬ್ಬ ಮಹಾತ್ಮ ಗಾಂಧೀಜಿಯವರ ವೇಷ ಧರಿಸಿರುವುದು ಕಂಡುಬಂದಿದೆ. ಗಾಂಧೀಜಿಯವರಂತೆಯೇ ದುಂಡಗಿನ ಕನ್ನಡಕ ಧರಿಸಿರುವ ಬಾಲಕ, ತಾನು ಬೋಳು ತಲೆಯಂತೆ ಕಾಣಿಸಲು ಮುಖ ಮತ್ತು ತಲೆಗೆ ಬಣ್ಣ ಬಳಿದುಕೊಂಡಿದ್ದಾನೆ. ತನ್ನ ಇಡೀ ದೇಹಕ್ಕೆ ಬೆಳ್ಳಿಯ (ಸಿಲ್ವರ್) ಬಣ್ಣ ಬಳಿದುಕೊಂಡು ರಸ್ತೆಯ ಪಕ್ಕದಲ್ಲಿ ಜೀವಂತ ಪ್ರತಿಮೆಯಂತೆ ನಿಂತಿದ್ದಾನೆ. ಮೊದಲ ನೋಟದಲ್ಲೇ ಈತ ಯಾವುದೇ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಅಥವಾ ಮನರಂಜನೆಗಾಗಿ ಈ ವೇಷ ಧರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಮುಗ್ಧ ಬಾಲಕ ರಸ್ತೆ ಬದಿಯಲ್ಲಿ ನಿಂತು ಸಾರ್ವಜನಿಕರ ಗಮನ ಸೆಳೆದು, ತನ್ನ ಹೊಟ್ಟೆಪಾಡಿಗಾಗಿ ಒಂದಿಷ್ಟು ಹಣ ಸಂಪಾದಿಸಲು ಈ ಕಷ್ಟದ ಹಾದಿ ಹಿಡಿದಿದ್ದಾನೆ ಎಂಬ ಕಹಿ ಸತ್ಯ ವಿಡಿಯೋದಲ್ಲಿ ಎದ್ದು ಕಾಣುತ್ತದೆ.
ವೈರಲ್ ವಿಡಿಯೋದಲ್ಲಿ ಆ ಬಾಲಕ ಒಂದಿಂಚೂ ಕದಡದೆ ಅತ್ಯಂತ ನಿಶ್ಚಲವಾಗಿ ನಿಂತಿರುವುದು ಕಂಡುಬರುತ್ತದೆ. ಯಾವುದೇ ಚಲನೆಯಿಲ್ಲದೆ ಕೇವಲ ಒಂದು ಜೀವಂತ ಪ್ರತಿಮೆಯಂತೆ ಆತ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾನೆ. ಆ ರಸ್ತೆಯಲ್ಲಿ ಹಾದುಹೋಗುವ ಜನರು ಆತನನ್ನು ಆಶ್ಚರ್ಯದಿಂದ ನೋಡುತ್ತಾ, ಕೆಲವರು ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರೆ, ಇನ್ನು ಕೆಲವರು ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಪುಟ್ಟ ಬಾಲಕ ಇಂತಹ ಕಷ್ಟದ ಕೆಲಸ ಮಾಡಲು ಆತನ ಬೆನ್ನಿನ ಹಿಂದೆ ಎಂತಹ ಪರಿಸ್ಥಿತಿಯ ಜವಾಬ್ದಾರಿ ಅಥವಾ ಹೊರೆ ಇರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಬಹುಶಃ ಅಲ್ಲಿ ಯಾರೂ ಪ್ರಯತ್ನಿಸಿದಂತೆ ಕಾಣುತ್ತಿಲ್ಲ. ಆದಾಗ್ಯೂ, ಆತನ ಆ ಮೌನ ಮತ್ತು ನಿಶ್ಚಲತೆಯೇ ಬದುಕಿನ ಎಣಿಕೆಗೆ ಸಿಗದ ಹಲವು ಕಡು ಸತ್ಯಗಳನ್ನು ಮೂಕವಾಗಿ ಹೇಳುವಂತಿದೆ.
ಆ ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಕಾಣಿಸಿಕೊಳ್ಳುತ್ತಾಳೆ. ಅವಳು ಆ ಬಾಲಕನ ಬಳಿಗೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬಂದು, ತನ್ನ ಕೈಯಲ್ಲಿದ್ದ ಏನನ್ನೋ ತಿನ್ನಲು  ನೀಡಲು ಪ್ರಯತ್ನಿಸುತ್ತಾಳೆ. ಆದರೆ, ಆ ಬಾಲಕ ಆರಂಭದಲ್ಲಿ ತನ್ನ ಪ್ರತಿಮೆಯ ಪಾತ್ರವನ್ನು ಬಿಟ್ಟುಕೊಡುವುದಿಲ್ಲ. ತಾನು ಸಂಪೂರ್ಣವಾಗಿ ಆ ಪಾತ್ರದಲ್ಲೇ ಲೀನವಾಗಿಬಿಟ್ಟಿರುವಂತೆ ಯಾವುದೇ ಚಲನೆಯಿಲ್ಲದೆ ಕಲ್ಲಿನ ಮೂರ್ತಿಯಂತೆ ನಿಲ್ಲುತ್ತಾನೆ. ಆ ಬಾಲಕಿ ಪದೇ ಪದೇ ಆತನಿಗೆ ತಿನ್ನುವಂತೆ ಹೇಳಿದರೂ ಆತ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬಹುಶಃ ತಾನು ಅಲ್ಲಿಂದ ನಡುಗಿದರೆ ಅಥವಾ ಏನನ್ನಾದರೂ ತಿಂದರೆ ಜನರು ತನಗೆ ಹಣ ನೀಡುವುದನ್ನು ನಿಲ್ಲಿಸಬಹುದು ಎಂಬ ಭಯ ಆತನನ್ನು ಕಾಡುತ್ತಿರುತ್ತದೆ. ಆದರೆ, ಕೊನೆಗೂ ಹಸಿವು ಹಸಿವೇ ಅಲ್ವೇ?
ಸ್ವಲ್ಪ ಸಮಯದ ನಂತರ ಆ ಬಾಲಕನಿಗೆ ತನ್ನ ಹಸಿವನ್ನು ತಡೆದುಕೊಳ್ಳಲು ಸಾಧ್ಯವಾಗದೆ, ದಿಢೀರನೆ ಬಾಯಿ ತೆರೆಯುತ್ತಾನೆ. ಆ ಪುಟ್ಟ ಬಾಲಕಿಯ ಕೈಯಿಂದಲೇ ಒಂದಿಷ್ಟು ಆಹಾರವನ್ನು ತಿನ್ನುತ್ತಾನೆ. ಈ ಒಂದು ಕ್ಷಣವೇ ಇಡೀ ವಿಡಿಯೋದ ಅತ್ಯಂತ ಭಾವುಕ ಮತ್ತು ಹೃದಯ ಕಲಕುವ ಭಾಗವಾಗಿ ಮಾರ್ಪಡುತ್ತದೆ. ಇದರೊಂದಿಗೆ ಆ ವಿಡಿಯೋದ ಮೇಲೆ ಬರೆಯಲಾದ ಸಾಲುಗಳು ಕೂಡ ಪ್ರತಿಯೊಬ್ಬರನ್ನೂ ಯೋಚಿಸುವಂತೆ ಮಾಡುತ್ತವೆ. ಅಲ್ಲಿ, "ಇಡೀ ಜಗತ್ತು ಆತನ ಫೋಟೋ ತೆಗೆದುಕೊಳ್ಳುವುದರಲ್ಲೇ ಬಿಜಿಯಾಗಿತ್ತು, ಆದರೆ ಆ ಪುಟ್ಟ ಬಾಲಕಿ ಮಾತ್ರ ಆತನ ಹೊಟ್ಟೆಯ ಹಸಿವನ್ನು ಗುರುತಿಸಿದಳು" ಎಂದು ಬರೆಯಲಾಗಿತ್ತು. ಈ ಸಾಲುಗಳು ಜೀವನದ ಕಟು ವಾಸ್ತವವನ್ನು ತೆರೆದಿಟ್ಟಿದ್ದು, ಬಾಲಕಿಯ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net