ಜನ ಕಣ್ಣೀರಾಕ್ತಿದ್ದಾರೆ, ಪ್ರಧಾನಿ ರೀಲ್ಸ್ ಮಾಡ್ತಿದ್ದಾರೆ!: ಇಟಲಿ ಪ್ರಧಾನಿಗೆ ಚಾಕಲೇಟ್ ನೀಡಿದ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ | Rahul Gandhi

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ನವದೆಹಲಿ: ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಚಾಕಲೇಟ್​ ಉಡುಗೊರೆಯಾಗಿ ನೀಡಿದ್ದಕ್ಕೆ ಬುಧವಾರ(ಮೇ 20) ಕಿಡಿಕಾರಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಜನ ಕಣ್ಣೀರಾಕ್ತಿದ್ದಾರೆ, ಪ್ರಧಾನಿ ರೀಲ್ಸ್ ಮಾಡ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಹಾಕಿರುವ ಅವರು, ನಮ್ಮ ತಲೆಯ ಮೇಲೆ ಭೀಕರ ಆರ್ಥಿಕತೆಯ ಬಿರುಗಾಳಿ ಬೀಸುತ್ತಿದೆ. ನಮ್ಮ ಪ್ರಧಾನಿ ಇಟಲಿಯಲ್ಲಿ ಸಿಹಿತಿಂಡಿಗಳನ್ನು ಹಂಚುತ್ತಿದ್ದಾರೆ! ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಪ್ರಧಾನಿ ನಗುತ್ತಿದ್ದಾರೆ ಮತ್ತು ರೀಲ್‌ಗಳನ್ನು ಮಾಡ್ತಿದ್ದಾರೆ, ಅದನ್ನು ನೋಡಿ ಬಿಜೆಪಿಯವರು ಚಪ್ಪಾಳೆ ತಟ್ಟುತ್ತಿದ್ದಾರೆ. ಇದು ನಾಯಕತ್ವವಲ್ಲ, ಇದೊಂದು ನಾಟಕ ಎಂದು ಕುಟುಕಿದ್ದಾರೆ.
ಐದು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಇಟಲಿಯ ರೋಮ್​ಗೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರು ಜಾರ್ಜಿಯಾ ಮೆಲೋನಿ ಬಹಳ ಆಧಾರದಿಂದ ಸ್ವಾಗತ ನೀಡಿದ್ದಾರೆ. ಇದೇ ವೇಳೆ ಮೋದಿಯವರು ಮೆಲೋನಿಗೆ 'ಮೆಲೋಡಿ' ಚಾಕಲೇಟ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದಕ್ಕೂ ಮೊದಲು ಪ್ರಧಾನಿ ಮೋದಿ ರೋಮ್‌ನ ಐತಿಹಾಸಿಕ ಕೊಲೊಸಿಯಂ ಬಳಿ ಮೆಲೋನಿ ಜೊತೆಗಿನ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದರು. ಅಧಿಕೃತ ಮಾತುಕತೆಗೆ ಮುನ್ನ ನಡೆದ ಭೋಜನ ಕೂಟದಲ್ಲಿ ಇಬ್ಬರೂ ನಾಯಕರು ದೀರ್ಘ ಮಾತುಕತೆಯಲ್ಲಿ ತೊಡಗಿರುವ ದೃಶ್ಯಗಳು ಗಮನ ಸೆಳೆದಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net